ನಾರಾಯಣಗುರು ಟ್ಯಾಬ್ಲೋ ತಿರಸ್ಕಾರಕ್ಕೆ ವ್ಯಾಪಾಕ ಖಂಡನೆ; ಕೇಂದ್ರ ಹಿಂದುಳಿದ ವರ್ಗದವರಿಗೆ ತೋರಿಸಿದ ಅಗೌರವ: ಸೊರಕೆ

Update: 2022-01-16 13:59 GMT

ಉಡುಪಿ, ಜ.16: ಗಣರಾಜ್ಯೋತ್ಸವ ಪೆರೇಡಿಗೆ ಕೇರಳ ಸರಕಾರವು ಕಳುಹಿಸಿದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಡೆ ಹಿಡಿದಿರುವ ಕೇಂದ್ರದ ನಿಲುವು ಗುರುಗಳಿಗೆ ಹಾಗೂ ಹಿಂದುಳಿದ ವರ್ಗದವರಿಗೆ ತೋರಿಸಿದ ಅಗೌರವ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಟೀಕಿಸಿದ್ದಾರೆ.

ಒಂದೇ ಜಾತಿ, ಒಂದೇ ಮತ ಎಂಬ ವಿಶಾಲ ಸಂದೇಶ ನೀಡಿ, ಮಹಾ ಮಾನವತಾವಾದಿಯಾದ ಗುರುಗಳ ಸ್ತಬ್ಧ ಚಿತ್ರವನ್ನು ಕಡೆಗಣಿಸಿರುವುದು ಅವರ ಬೋಧನೆಗಳನ್ನು ಕೇಂದ್ರ ಸರಕಾರ ಕಡೆಗಣಿಸಿದಂತಿದೆ. ಗುರುಗಳನ್ನು ಭಕ್ತಿಯಿಂದ ಆರಾಧಿಸುವ ಬಿಜೆಪಿ ನಾಯಕರ ಮೌನ ಹಿಂದುಳಿದವರ ಬಗ್ಗೆ ಹಾಗೂ ನಾರಾಯಣ ಗುರುಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ಅನುಮಾನ ದಿಂದ ನೋಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯನ್ನು ಭಕ್ತಿಯಿಂದ ಆರಾಧನೆ ಮಾಡುವ ಬಹುಸಂಖ್ಯೆಯ ಹಿಂದುಳಿದ ವರ್ಗದವರ ಮನಸಿನ ಭಾವನೆಗೆ ಧಕ್ಕೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಸರಕಾರವು ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಸೊರಕೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ರಮೇಶ್ ಕಾಂಚನ್ ಖಂಡನೆ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಕೇರಳ ಸರಕಾರ ಪ್ರಸ್ತಾಪಿಸಿದ ನಾರಾಯಣ ಗುರುಗಳ ಸ್ಥಬ್ಧಚಿತ್ರವನ್ನು ಸಾರಾ ಸಗಟಾಗಿ ತಿರಸ್ಕರಿಸುವ ಮೂಲಕ ಬಿಜೆಪಿ ಸರಕಾರ ಹಿಂದುಳಿದವರ ಬಗೆಗಿನ ತನ್ನ ನಿಜ ಬಣ್ಣ ಬಯಲು ಮಾಡಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿದ ಬಿಜೆಪಿ ಸರಕಾರದ ಕ್ರಮವು ಅಸ್ಪಶ್ಯತೆಯನ್ನು ಜೀವಂತವಾಗಿರಿಸುವ ಹುನ್ನಾರ. ಆ ಮೂಲಕ ಹಿಂದುಳಿದವರ, ದಲಿತರ ಹಕ್ಕುಗಳನ್ನು ಕಸಿಯುವ ಪ್ರಯತ್ನ. ಈ ಹಿಂದೆ ನಾರಾಯಣ ಗುರುಗಳನ್ನು ವಿರೋಧಿಸಿದ, ತಿರಸ್ಕರಿಸಿದ ಸಂಘ ಪರಿವಾರದ ಸಿದ್ಧಾಂತವು ಈಗಲೂ ಬಿಜೆಪಿ ಸರಕಾರದ ಮೂಲಕ ಅವರನ್ನು ಅವಮಾನಿಸು ತ್ತಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಮುಖಂಡರು:   ಸರ್ವಧರ್ಮಗಳ ಸಮನ್ವಯ, ಮೇಲು ಕೀಳು ಎನ್ನುವ ಜಾತಿಭೇದ ದ್ವೇಷ ಇರುವ ಈ ಸಮಾಜದಲ್ಲಿ, ಒಂದೇ ದೇವರು, ಒಂದೇ ಜಾತಿ, ಒಂದೇ ದೈವ ಎನ್ನುವ ನಾಣ್ಣುಡಿಯಂತೆ, ಕೇರಳದಿಂದ ಕರ್ನಾಟಕದ ಕರಾವಳಿ ಭಾಗದಲ್ಲಿಯೂ ಎಲ್ಲರಿಗೂ ಮಾರ್ಗದರ್ಶಿಯಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಬ್ದ ಚಿತ್ರವನ್ನು ಗಣರಾಜ್ಯೋತ್ಸವ ಪರೇಡಿನಲ್ಲಿ ತಿರಸ್ಕರಿಸಿರುವ ಕೇಂದ್ರದ ಬಿಜೆಪಿ ಸರಕಾರದ ನೀತಿಯನ್ನು ಕಾಂಗ್ರೆಸ್ ಮುಖಂಡ ರಾದ ಜಯಶೆಟ್ಟಿ ಬನ್ನಂಜೆ, ಗಣೇಶ್‌ರಾಜ್ ಸರಳೇಬೆಟ್ಟು, ಬಿ.ಕೆ.ರಾಜ್ ಕೆಮ್ಮಣ್ಣು ತೀವ್ರವಾಗಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News