ಉಡುಪಿ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ; ವ್ಯಾಪಾರ ಇಲ್ಲದೆ ಕಂಗೆಟ್ಟ ಮೀನುಗಾರರು: ಸರಕಾರದ ವಿರುದ್ಧ ಆಕ್ರೋಶ

Update: 2022-01-16 15:51 GMT

ಕುಂದಾಪುರ, ಜ.16: ವ್ಯಾಪಾರ ಇಲ್ಲದೆ ಕಂಗೆಟ್ಟಿರುವ ಕುಂದಾಪುರ ಮೀನು ಮಾರುಕಟ್ಟೆಯ ಮೀನುಗಾರ ಮಹಿಳೆಯರು ಸರಕಾರದ ವಾರಾಂತ್ಯ ಕರ್ಫ್ಯೂ ವಿುರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಶನಿವಾರ ಮತ್ತು ರವಿವಾರ ಬಂದ್ ಮಾಡಿದರೆ ಕೊರೋನ ಹೋಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ನಾವು ಮೀನು ಮಾರಾಟ ಮಾಡಿ ಬದುಕು ನಡೆಸುತ್ತಿದ್ದೇವೆ. ಇದೀಗ ಕೊರೋನ ಹೆಸರಿನಲ್ಲಿ ಕರ್ಫ್ಯೂ ವಿಧಿಸಿ ನಮಗೆ ವ್ಯಾಪಾರ ಇಲ್ಲದಂತೆ ಮಾಡಲಾಗಿದೆ. ಕರ್ಫ್ಯೂ ವಿಧಿಸುವುದಾದರೆ ನಮಗೆ ಸರಕಾರ ಪರಿಹಾರ ಕೊಡು ಕೆಲಸ ಮಾಡಲಿ ಎಂದು ಹೇಳಿದರು.

‘ಕರ್ಫ್ಯೂನಿಂದಾಗಿ ಮೊದಲಿನಂತೆ ನಮಗೆ ಈಗ ವ್ಯಾಪಾರ ಆಗುತ್ತಿಲ್ಲ. ಜನರೇ ಹೊರಗಡೆ ಬರುತ್ತಿಲ್ಲ ಮತ್ತು ಹೊಟೇಲ್, ಅಂಗಡಿಗಳು ಬಂದ್ ಆಗಿರುವುದರಿಂದ ನಮಗೆ ಮೀನು ವ್ಯಾಪಾರ ತುಂಬಾ ಕಡಿಮೆ ಆಗಿದೆ. ಇದರಿಂದ ಮೀನುಗಳು ಮಾರಾಟ ಆಗದೆ ಉಳಿಯುತ್ತಿದೆ. ಸರಕಾರ ಸರಿಯಾಗಿ ಪರಿಶೀಲನೆ ನಡೆಸದೆಯೇ ಲಾಕ್‌ಡೌನ್ ವಿಧಿಸಿದೆ. ನಮ್ಮ ಕಷ್ಟ ನಾವು ಯಾರ ಬಳಿ ಹೇಳಬೇಕು’ ಎಂದು ಮೀನು ಮಾರಾಟ ಮಹಿಳೆ ಶಾಂತಿ ತಮ್ಮ ಅಳಲನ್ನು ತೋಡಿಕೊಂಡರು.

ಮನೆಯಲ್ಲಿ ಕುಳಿತು ಕೊಳ್ಳಬಾರದೆಂಬ ಕಾರಣಕ್ಕೆ ಸ್ವಲ್ಪ ಮೀನು ಇಟ್ಟುಕೊಂಡು ಬಂದು ವ್ಯಾಪಾರ ಮಾಡುತ್ತಿದ್ದೇವೆ. ಈ ಮಾರುಕಟ್ಟೆಯಲ್ಲಿ ಸುಮಾರು 100 ಮಂದಿ ಮಹಿಳೆಯರು ವ್ಯಾಪಾರ ಮಾಡುತ್ತಾರೆ. ಆದರೆ ವ್ಯಾಪಾರ ಇಲ್ಲದೆ ಈಗ 25 ಜನ ಕೂಡ ಬರುತ್ತಿಲ್ಲ. ಸುಮ್ಮನ್ನೆ ದುಡ್ಡು ಹಾಕಿ ನಷ್ಟ ಅನುಭವಿಸುವ ಬದಲು ಹೆಚ್ಚಿನವರು ಮನೆಯಲ್ಲಿಯೇ ಇದ್ದಾರೆ. ಈ ಹಿಂದೆ ಲಾಕ್‌ ಡೌನ್‌ನಲ್ಲಿ ನಾವೆಲ್ಲ ಮೂರು ನಾಲ್ಕು ತಿಂಗಳು ಮನೆಯಲ್ಲಿಯೇ ಕುಳಿತುಕೊಂಡಿದ್ದೆವು. ಆಗ ಸರಕಾರ ನಮಗೆ 10ರೂ. ಕೂಡ ಸಹಾಯ ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶೇ.15ರಷ್ಟು ಮಾತ್ರ ಬಸ್‌ಗಳ ಓಡಾಟ

ವಾರಾಂತ್ಯ ಕರ್ಫ್ಯೂವಿನಿಂದಾಗಿ ರವಿವಾರ ಉಡುಪಿ ಜಿಲ್ಲೆಯಾದ್ಯಂತ ಜನ ಸಂಚಾರ ಸಾಕಷ್ಟು ವಿರಳವಾಗಿತ್ತು. ಇದರಿಂದ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ರಸ್ತೆಗಳು ವಾಹನ ಹಾಗೂ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.

ಬೆಳಗ್ಗೆ ಜನರ ಓಡಾಟ ಹೆಚ್ಚಿದ್ದರೆ, ಮಧ್ಯಾಹ್ನ ನಂತರ ತೀರ ಕಡಿಮೆ ಇರು ವುದು ಕಂಡುಬಂತು. ರಾಷ್ಟ್ರೀಯ ಹೆದ್ದಾರಿ 66 ಖಾಲಿಖಾಲಿಯಾಗಿದ್ದವು. ಜನರ ಓಡಾಟ ಇಲ್ಲದ ಪರಿಣಾಮ ನಗರದ ಒಟ್ಟು 80 ಸಿಟಿ ಬಸ್‌ಗಳ ಪೈಕಿ ಕೇವಲ ಶೇ.10-15ರಷ್ಟು ಬಸ್‌ಗಳು ಮಾತ್ರ ಓಡಾಟ ನಡೆಸಿದವು.

ಅದೇ ರೀತಿ ಸರ್ವಿಸ್, ವೇಗದೂತ ಮತ್ತು ಸರಕಾರಿ ಬಸ್‌ಗಳ ಸಂಖ್ಯೆ ಕೂಡ ಇಳಿಕೆಯಾಗಿತ್ತು. ಇವುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಬಸ್‌ಗಳಿಗೆ ಹಾಕಿದ ಡಿಸೇಲ್ ಹಣ ಕೂಡ ವಾಪಾಸ್ಸು ಬರುತ್ತಿಲ್ಲ. ಹಾಗಾಗಿ ನಷ್ಟ ಉಂಟಾಗುವುದನ್ನು ತಪ್ಪಿಸಲು ಹಲವು ಮಂದಿ ಬಸ್‌ಗಳನ್ನು ರಸ್ತೆಗೆ ಇಳಿಸಿಲ್ಲ ಎಂದು ಸಿಟಿ ಬಸ್ ಮಾಲಕರ ಸಂಘದ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News