ನಾರಾಯಣಗುರು ಸ್ತಬ್ಧಚಿತ್ರ ನಿರಾಕರಿಸಿದ ಕೇಂದ್ರ ಸರಕಾರ; ವೆಲ್ಫೇರ್ ಪಾರ್ಟಿ ಖಂಡನೆ

Update: 2022-01-17 07:27 GMT

ಮಂಗಳೂರು : ಗಣ ರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಪರೇಡ್ ನಲ್ಲಿ ಶ್ರೀ ನಾರಾಯಣಗುರು ಟ್ಯಾಬ್ಲೋ ಪ್ರದರ್ಶನಕ್ಕಾಗಿ ಕೇಂದ್ರ ಸರಕಾರ ಅನುಮತಿ ನೀಡದೆ ಇರುವುದು ಅಕ್ಷಮ್ಯವಾಗಿದೆ ಎಂದು ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ನಮ್ಮ ದೇಶದ ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ಅನಾದಿ ಕಾಲದಿಂದಲೂ ನ್ಯಾಯ ನಿರಾಕರಿಸಲ್ಪಟ್ಟ, ತುಳಿಯಲ್ಪಟ್ಟ ಹಿಂದುಳಿದ ವರ್ಗ, ಸಮೂಹಗಳ ಮೇಲೆ ಮೇಲ್ಜಾತಿ ಸವರ್ಣೀಯ ಸ್ವಾರ್ಥ ಹಿತಾಸಕ್ತಿಗಳ ಹಿಡಿತವನ್ನು ಮತ್ತೆ ನೆನಪಿಗೆ ತರುವಂತಿದೆ ಮತ್ತು ಇದನ್ನು ದೇಶದ ಸಂವಿಧಾನವನ್ನು ಗೌರವಿಸುವ ಜಾತ್ಯತೀತ ನಿಲುವಿಗೆ ಬದ್ಧವಾಗಿರುವ ಎಲ್ಲಾ  ರಾಜಕೀಯ ಪಕ್ಷಗಳು ಕೂಡಾ ಒಕ್ಕೊರಲಿನಿಂದ ಎದುರಿಸಬೇಕಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಅಡ್ವೋಕೇಟ್ ಸರ್ಫರಾಝ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು, ದೇಶದ ಬಹುತೇಕ ಹಿಂದುಳಿದ ವರ್ಗಗಳ ಅಜೇಯ ಪುರುಷರೊಬ್ಬರಿಗೆ ಮಾಡಿದ ಅವಮರ್ಯಾದೆಯನ್ನು ನಮ್ಮ  ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಸರಕಾರವು ಕ್ಷಮೆಯಾಚಿಸಿ, ಗಣರಾಜ್ಯೋತ್ಸವದ ಪರೇಡ್ ನಲ್ಲಿ ಕೇರಳ ಸರಕಾರವು ಕೋರಿರುವಂತೆ ಶ್ರೀ ನಾರಾಯಣ ಗುರುಗಳ ಸ್ಥಬ್ಧ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕಾಗಿ ಆಗ್ರಹಿಸುತ್ತದೆ ಎಂಬುವುದನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News