ಕಂಕನಾಡಿ ಮಾರುಕಟ್ಟೆ: ಹೊಸ ಕಟ್ಟಡದ ತಳಭಾಗದ ಶೆಡ್‌ಗೆ ಅಂಗಡಿಗಳ ಸ್ಥಳಾಂತರ

Update: 2022-01-19 06:27 GMT

ಮಂಗಳೂರು, ಜ.19: ಕಂಕನಾಡಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಹಳೆಯ ಮಾರುಕಟ್ಟೆಯನ್ನು ಕೆಡವಿದ ಪರಿಣಾಮ ಅಲ್ಲಿನ ವ್ಯಾಪಾರಿಗಳಿಗೆ ಎರಡು ವರ್ಷದ ಹಿಂದೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಾರುಕಟ್ಟೆಯನ್ನು ಇದೀಗ ಹೊಸ ಕಟ್ಟಡದ ತಳಭಾಗದಲ್ಲಿ ನಿರ್ಮಿಸಲಾದ ಶೆಡ್‌ಗೆ ಸ್ಥಳಾಂತರಿಸಲು ಸಿದ್ಧತೆ ಆರಂಭಗೊಂಡಿವೆ.

41.5 ಕೋ.ರೂ. ವೆಚ್ಚದಲ್ಲಿ ನೂತನ ಬಹುಮಹಡಿ ಮಾರುಕಟ್ಟೆ ನಿರ್ಮಾಣದ ಒಂದು ಭಾಗದ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಕಟ್ಟಡದ ವಿಸ್ತರಣೆಗಾಗಿ ಎರಡು ವರ್ಷದ ಹಿಂದೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಾರುಕಟ್ಟೆಯ ಒಂದಷ್ಟು ಭಾಗವನ್ನು ಮತ್ತೆ ಕೆಡವಲಾಗುತ್ತಿದೆ. ಅಲ್ಲಿಂದ ತೆರವಾಗುವ ವ್ಯಾಪಾರಿಗಳಿಗೆ ಪಕ್ಕದಲ್ಲೇ ನಿರ್ಮಿಸಲಾದ ಹೊಸ ಕಟ್ಟಡದ ತಳಭಾಗದ ಶೆಡ್‌ಗಳಿಗೆ ಮತ್ತೊಮ್ಮೆ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ.

ಕಂಕನಾಡಿಯಲ್ಲಿ ಸುಸಜ್ಜಿತ ಹೊಸ ಮಾರುಕಟ್ಟೆ ಯನ್ನು ನಿರ್ಮಿಸಲು 25 ವರ್ಷ ಹಳೆಯ ಮಾರುಕಟ್ಟೆಯನ್ನು ಒಂದೂವರೆ ವರ್ಷಗಳ ಹಿಂದೆ ಕೆಡವಲಾಗಿತ್ತು. ಅದಕ್ಕೂ ಮುನ್ನ ಈ ಮಾರುಕಟ್ಟೆಯ ವ್ಯಾಪಾರಿಗಳಿಗಾಗಿ ಪ್ರಮುಖ ರಸ್ತೆಗೆ ಹೊಂದಿಕೊಂಡಂತೆ ಸುಮಾರು 1 ಕೋ.ರೂ. ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿ ಅದಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಎರಡು ವರ್ಷ ಹಿಂದಿನ ತಾತ್ಕಾಲಿಕ ಮಾರುಕಟ್ಟೆಯಲ್ಲಿ 99 ಅಂಗಡಿಗಳಿದ್ದವು. ನಿರ್ಮಿಸ ಲಾಗುತ್ತಿರುವ ಹೊಸ ಕಟ್ಟಡದ ವಿಸ್ತರಣೆಯ ಸಲುವಾಗಿ ತಾತ್ಕಾಲಿಕ ಮಾರುಕಟ್ಟೆಯ 77 ಅಂಗಡಿಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾತ್ಕಾಲಿಕ ಶೆಡ್: ನಿರ್ಮಾಣ ಹಂತದ ಕಟ್ಟಡದ ಒಂದು ಬದಿಯಲ್ಲಿ ಅಲ್ಯುಮಿನಿಯಂ ್ಯಾಬ್ರಿಕೇಶನ್ ಮೂಲಕ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ. ತೆರವಾಗುವ ವ್ಯಾಪಾರಿಗಳು ಅಲ್ಲಿಗೆ ಸ್ಥಳಾಂತರ ಮಾಡಲು ಸಿದ್ಧರಾಗಿದ್ದಾರೆ.

ಕಳೆದ ಬಾರಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೂವಿನ ಮಾರುಕಟ್ಟೆಯನ್ನು ತೆರವುಗೊಳಿಸಿ, ಪ್ರಮುಖ ರಸ್ತೆಯ ಸಮೀಪ ತಾತ್ಕಾಲಿಕ ಶೆಡ್‌ನಲ್ಲಿ ಹೂವಿನ ವ್ಯಾಪಾರ ಆರಂಭಿಸಲಾಗಿದೆ.

ಕಂಕನಾಡಿಯಲ್ಲಿ 10 ಮಹಡಿಗಳ ಹಾಗೂ ಹೆಚ್ಚುವರಿ ನೆಲ ಮತ್ತು ತಳ ಸಹಿತ ಆರು ಅಂತಸ್ತುಗಳ ಅತ್ಯಾಧುನಿಕ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. 71 ದ್ವಿಚಕ್ರ ಮತ್ತು 505 ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಹೊಸ ಮಾರುಕಟ್ಟೆಯ ನಿರ್ಮಾಣದ ಸಂದರ್ಭ ಕೆಲವೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಹಾಗಾಗಿ ವ್ಯಾಪಾರಿಗಳನ್ನು 2ನೇ ಬಾರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತದೆ. ಈ ವರ್ಷದೊಳಗೆ ಹೊಸ ಮಾರುಕಟ್ಟೆ ನಿರ್ಮಾಣ ಪೂರ್ಣಗೊಳ್ಳಲಿದ್ದು, ಆ ಬಳಿಕ ಯಾವುದೇ ಸಮಸ್ಯೆಯಾಗದು.

ಪ್ರೇಮಾನಂದ ಶೆಟ್ಟಿ, ಮೇಯರ್, ಮಂಗಳೂರು ಮನಪಾ

ಸಂತ ಜೋಸೆರ ಶಾಲೆ ಪಕ್ಕದ ಹಳೆಯ ಹೂವಿನ ಮಾರುಕಟ್ಟೆಯನ್ನು ಕೆಡವಲಾಗಿದೆ. ಅಲ್ಲದೆ ಮಾರುಕಟ್ಟೆಯ ಬಳಿಯಿದ್ದ ದ್ವಿಚಕ್ರ ಸರ್ವೀಸ್ ಸೆಂಟರ್, ಚರ್ಚ್, ಪ್ರಾರ್ಥನಾ ಕೇಂದ್ರ, ವಾಣಿಜ್ಯ ಮಳಿಗೆಗಳು, ವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ದ್ವಿಪಥ ರಸ್ತೆ ನಿರ್ಮಿಸಲಾಗುತ್ತದೆ. ಜನರ ಸುರಕ್ಷೆಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಹೊಸ ಕಟ್ಟಡ ತಲೆ ಎತ್ತುವ ವಿಶ್ವಾಸವಿದೆ.

 ನವೀನ್ ಡಿಸೋಜ, ಕಾರ್ಪೊರೇಟರ್

ತಾತ್ಕಾಲಿಕ ಮಾರುಕಟ್ಟೆಯಲ್ಲಿರುವ ಮೀನು, ಮಾಂಸದ ಅಂಗಡಿಗಳನ್ನು ಬಿಟ್ಟು ಉಳಿದ 77 ಅಂಗಡಿಗಳನ್ನು ಶೆಡ್‌ಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಎರಡು ವರ್ಷದ ಹಿಂದೆ ಪಾಲಿಕೆಯು ನಮಗೆ ತಾತ್ಕಾಲಿಕ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಿ ಕೊಟ್ಟಿತ್ತು. ಬಳಿಕ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಂತ ಖರ್ಚಿನಿಂದ ಜೋಡಿಸಿ ವ್ಯಾಪಾರ ಮಾಡುತ್ತಿದ್ದೆವು. ಈಗ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಅಂಗಡಿಗಳಿಗೆ ವಿದ್ಯುತ್ ದೀಪ, ನೀರು, ಶೌಚಾಲಯ ಹಾಗೂ ಕಾವಲು ವ್ಯವಸ್ಥೆ ಮಾಡಿಕೊಡುವುದಾಗಿ ಮನಪಾ ಆಡಳಿತವು ತಿಳಿಸಿದೆ. ಅದಕ್ಕೆ ಹೊಂದಿಕೊಂಡು ನಾವು ವ್ಯಾಪಾರ ಮಾಡಬೇಕಿದೆ.

 ಅಲಿ ಹಸನ್- ಅಧ್ಯಕ್ಷ, ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News