ದೇಶದ್ರೋಹ ಕಾನೂನು ರದ್ದುಪಡಿಸಲು ಇದು ಸಕಾಲ: ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌

Update: 2022-01-19 07:47 GMT
ರೋಹಿಂಟನ್‌ ನಾರಿಮನ್‌ (Photo credit: barandbench.com)

ಹೊಸದಿಲ್ಲಿ: ಭಾರತದಲ್ಲಿ ದೇಶದ್ರೋಹದ ಕಾನೂನನ್ನು ಸಂಪೂಣವಾಗಿ ತೆಗೆದುಹಾಕಲು ಮತ್ತು ಇನ್ನೊಬ್ಬರನ್ನು ಹಿಂಸೆಗೆ ಪ್ರಚೋದಿಸದೇ ಇರುವಂತಹ ವಾಕ್‌ಸ್ವಾತಂತ್ರ್ಯವನ್ನು ಅನುಮತಿಸಲು ಇದು ಸಕಾಲವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ರೋಹಿಂಟನ್‌ ನಾರಿಮನ್‌ ಹೇಳಿದ್ದಾರೆ.

ಮುಂಬೈಯ ಡಿಎಂ ಹರೀಶ್‌ ಸ್ಕೂಲ್‌ ಆಫ್‌ ಲಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಸರಕಾರದ ಟೀಕಾಕಾರರನ್ನು ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ವಾಕ್‌ ಸ್ವಾತಂತ್ರ್ಯ ಬಳಕೆ ಮಾಡಿದವರನ್ನು ದೇಶದ್ರೋಹ ಕಾನೂನಿನಡಿ ಬಂಧಿಸಿದರೆ, ದ್ವೇಷದ ಭಾಷಣ ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು ಎಂದು indianexpress.com ವರದಿ ಮಾಡಿದೆ.

ಸರಕಾರವನ್ನು ಟೀಕಿಸಿದ್ದಾರೆಂಬ ಏಕೈಕ ಕಾರಣಕ್ಕೆ ಕಾಮಿಡಿಯನ್‌ಗಳು, ಯುವಕರನ್ನು ಹಾಗೂ ವಿದ್ಯಾರ್ಥಿಗಳನ್ನು ದೇಶದ್ರೋಹದ ಕಾನೂನಿನಡಿ ಬಂಧಿಸಲಾಗುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ನರಮೇಧಕ್ಕೆ ಕರೆ ನೀಡಿ ದ್ವೇಷದ ಭಾಷಣ ನೀಡುವ ಜನರಿದ್ದಾರೆ ಆದರೆ ಅಧಿಕಾರಿಗಳು ಇಂತಹವರ ವಿರುದ್ಧ ಕ್ರಮಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಆಡಳಿತದಲ್ಲಿರುವವರು ಇಂತಹ ದ್ವೇಷದ ಭಾಷಣಗಳ ಬಗ್ಗೆ ಮೌನ ತಾಳಿರುವ ಮೂಲಕ ಬಹುತೇಕ ಅವುಗಳನ್ನು ಪ್ರೋತ್ಸಾಹಿಸಿದಂತಾಗಿದೆ ಎಂದರು.

ದ್ವೇಷದ ಭಾಷಣ ಅಸಂವಿಧಾನಿಕ ಎಂದು ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿರುವುದನ್ನು ಉಲ್ಲೇಖಿಸಿದ ಜಸ್ಟಿಸ್‌ ನಾರಿಮನ್‌, ʻʻಸ್ವಲ್ಪ ತಡವಾದರೂ ಇದನ್ನು ಗಮನಿಸಿದ್ದಾರೆ,ʼʼ ಎಂದು ಹೇಳಿದರು.

ಏಳು ವರ್ಷ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ಕಳೆದ ವರ್ಷ ನಿವೃತ್ತರಾದ ಜಸ್ಟಿಸ್‌ ನಾರಿಮನ್‌ ಅವರು  ಐಟಿ ಕಾಯಿದೆಯ ಸೆಕ್ಷನ್‌ 65ಎ ಅನ್ನು ರದ್ದುಗೊಳಿಸಿದ ಶ್ರೇಯಾ ಸಿಂಘಾಲ್-‌ ಕೇಂದ್ರ ಸರಕಾರ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ಗಳನ್ನು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಈ ಸೆಕ್ಷನ್‌ ಅನ್ನು ಬಳಸಲಾಗುತ್ತಿತ್ತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News