ನನ್ನನ್ನು ಒತ್ತಡಕ್ಕೆ ಸಿಲುಕಿಸಲು ಇಡಿ ದಾಳಿ ಮಾಡಿಸಲಾಗುತ್ತಿದೆ: ಕೇಂದ್ರದ ವಿರುದ್ಧ ಪಂಜಾಬ್‌ ಸಿಎಂ ಆರೋಪ

Update: 2022-01-19 16:47 GMT
ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ (PTI)

ಚಂಡೀಗಢ:  ತನ್ನನ್ನು ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡುವುದಿಲ್ಲ ಎಂಬ ಬೆದರಿಕೆಗಳು ಬಂದಿವೆ ಎಂದು ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ. 

ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸಿಎಂ ಚನ್ನಿ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ರಾಜ್ಯದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ ಬೆನ್ನಲ್ಲೇ ಚನ್ನಿ ಈ ಆರೋಪ ಮಾಡಿದ್ದಾರೆ.

“ನನ್ನ ಮನೆಯಿಂದ ಹಣ ವಸೂಲಿ ಮಾಡಿಲ್ಲ, ನನ್ನ ಸೋದರಳಿಯನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಗಿದೆ, ಸದ್ಯ ಆತ ಎಲ್ಲಿದ್ದಾನೆ ಎಂಬ ಬಗ್ಗೆ ನನಗೆ ತಿಳಿದಿಲ್ಲ” ಎಂದು ಸಿಎಂ ಚನ್ನಿ ಹೇಳಿದ್ದಾರೆ.

ನನ್ನನ್ನು ಒತ್ತಡಕ್ಕೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಚನ್ನಿ ಆರೋಪಿಸಿದ್ದಾರೆ. 

2018 ರ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಕುದ್ರತ್‌ದೀಪ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ, ಆದರೆ ಅವರ ಸಂಬಂಧಿ ಭೂಪಿಂದರ್ ಸಿಂಗ್ ಹನಿ ಅವರನ್ನು ಆರೋಪಿಗಳೊಂದಿಗೆ ಸ್ನೇಹ ಹೊಂದಿದಕ್ಕಾಗಿ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಳ್ವಿಕೆ ಸಂದರ್ಭದಲ್ಲಿ 2018 ರ ಎಫ್‌ಐಆರ್ ದಾಖಲಾಗಿದೆ ಎಂದು ಸಿಎಂ ಚನ್ನಿ ಹೇಳಿದ್ದಾರೆ. 

"ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಬಾದಲ್ ದಾಳಿಯ ಹಿಂದೆ ಇದ್ದಾರೆ, ನನ್ನಂತಹ ಬಡ ಕುಟುಂಬದ ವ್ಯಕ್ತಿ ಮುಖ್ಯಮಂತ್ರಿಯಾದರು ಎಂದು ಅವರು ಅಸೂಯೆ ಪಟ್ಟಿದ್ದಾರೆ" ಎಂದು ಚನ್ನಿ ಹೇಳಿದ್ದಾರೆ.
 
ಪ್ರತಿಭಟನಾ ನಿರತ ರೈತರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ತಮ್ಮ ಸಂಬಂಧಿಕರ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. .

"ನಾನು ರೈತರ ವಿರುದ್ಧ ಬಲಪ್ರಯೋಗ ಮಾಡಿದ್ದರೆ, ಇದು ಸಂಭವಿಸದೇ ಇದ್ದಿರಬಹುದು. ಆದರೆ ಕೇಂದ್ರವು ಅನಗತ್ಯವಾಗಿ ರೈತರು ಮತ್ತು ಪಂಜಾಬ್‌ಗೆ ಮಾನಹಾನಿ ಮಾಡುತ್ತಿದೆ. ಪಂಜಾಬ್ ಮತ್ತು ಪಶ್ಚಿಮ ಬಂಗಾಳ ಯಾವಾಗಲೂ ಕ್ರಾಂತಿಕಾರಿ ರಾಜ್ಯಗಳಾಗಿವೆ" ಎಂದು ಅವರು ಹೇಳಿದ್ದಾರೆ.

ಚುನಾವಣೆ ಬಂದಾಗಲೆಲ್ಲ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ವಿರುದ್ಧ ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಛೂಬಿಟ್ಟು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ’ ಎಂದು ಸಿಎಂ ಚನ್ನಿ ಹೇಳಿದ್ದಾರೆ.

ಪಂಜಾಬಿನಲ್ಲಿ ಫೆಬ್ರವರಿ 20 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News