ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ: ಉಡುಪಿ ಡಿಸಿ ಕೂರ್ಮರಾವ್ ಸೂಚನೆ

Update: 2022-01-19 16:57 GMT

ಉಡುಪಿ, ಜ.19: ಎಂಡೋಸಲ್ಫಾನ್ ಬಾಧಿತರಿಗೆ ಅಗತ್ಯ ವೈದ್ಯಕೀಯ ನೆರವುಗಳನ್ನು ಒದಗಿಸುವುದರ ಜೊತೆಗೆ ಸರಕಾರದ ಸೌಲಭ್ಯಗಳನ್ನು ಒದಗಿಸಿ. ಅವರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ ಕಾರ್ಯವನ್ನು ಚಾಚೂ ತಪ್ಪದೆ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸೂಚನೆ ಗಳನ್ನು ನೀಡಿದ್ದಾರೆ.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಎಂಡೋಸಲ್ಫಾನ್ ಬಾಧಿತ ಸಂತ್ರಸ್ಥರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಹಾಗೂ ಕುಂದುಕೊರತೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಎಂಡೋಸಲ್ಫಾನ್‌ನಿಂದಾಗಿ ಕೆಲವರು ಶಾಶ್ವತ ಅಂಗವಿಕಲತೆಯನ್ನು ಹೊಂದಿ ದ್ದರೆ, ಇನ್ನೂ ಕೆಲವರು ಮಾರಕ ರೋಗಗಳಾದ ಕ್ಯಾನ್ಸರ್, ಅಸ್ತಮಾ, ಚರ್ಮ ರೋಗ, ಅಪಸ್ಮಾರ ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇವರಿಗೆ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರಕಾರದ ಇತರೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.

ಎಂಡೋಸಲ್ಫಾನ್ ಬಾಧಿತ ಪ್ರದೇಶಗಳಲ್ಲಿ ಅಂಗವಿಕಲತೆ ಹೊಂದದೇ ಇತರೇ ಕಾಯಿಲೆಗಳು ಇದರಿಂದಲೇ ಉಂಟಾಗಿದೆ ಎಂಬುದರ ಬಗ್ಗೆ ಸರ್ವೆ ಕಾರ್ಯ ವನ್ನು ಮಾಡಿಸುವುದರೊಂದಿಗೆ ಅವರಿಗೆ ಅಂಗವಿಕಲರಿಗೆ ನೀಡುವ ಸೌಲಭ್ಯ ಗಳನ್ನು ಒದಗಿಸುವ ಕುರಿತು ರಾಜ್ಯಮಟ್ಟದ ಮಂಡಳಿಗೆ ಶಿಫಾರಸ್ಸು ಮಾಡಬೇಕು ಎಂದೂ ಅವರು ನಿರ್ದೇಶನ ನೀಡಿದರು.

ಎಂಡೋ ಬಾಧಿತರಿಗೆ ವೆಬ್‌ಸೈಟ್: ಸರಕಾರದ ಸೌಲಭ್ಯಗಳು, ಆದೇಶಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತ ಮಾಹಿತಿಗಳನ್ನು ರೋಗ ಬಾಧಿತರಿಗೆ ತಲುಪಿಸಲು ಅನುಕೂಲವಾಗುವ ರೀತಿಯಲ್ಲಿ ಜಿಲಾಮಟ್ಟದ ವೆಬ್‌ಸೈಟ್‌ನ್ನು ತೆರೆಯಬೇಕು. ಇದರಲ್ಲಿಯೇ ಅವರುಗಳ ಕುಂದು ಕೊರತೆ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿ ಕೊಡುವುದರ ಜೊತೆಗೆ ಅವುಗಳಿಗೆ ನಿಯಮಾನುಸಾರವಾಗಿ ಸ್ಪಂದಿಸುವ ಕಾರ್ಯ ತತ್‌ಕ್ಷಣದಲ್ಲಿ ಮಾಡಬೇಕು ಎಂದರು.

ಎಂಡೋ ಪೀಡಿತ ವಿಕಲಚೇತನರಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಶಾಶ್ವತ ಪುರ್ನವಸತಿ ಕೇಂದ್ರವನ್ನು ಭಾಧಿತ ಪ್ರದೇಶಗಳಲ್ಲಿ ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಗುರುತಿನ ಚೀಟಿ ಹಾಗೂ ಪಾಸ್‌ನ್ನು ತಪ್ಪದೇ ನೀಡಬೇಕು ಎಂದರು. ತಾಲೂಕು ಮಟ್ಟದಲ್ಲಿ ಎಂಡೋಸಲ್ಫಾನ್ ಸಂತೃಸ್ತರಿಗೆ ಸೌಲಭ್ಯ ನೀಡುವ ಹಾಗೂ ಕುಂದು ಕೊರತೆಗಳನ್ನು ಚರ್ಚಿಸುವ ಸಭೆಗಳನ್ನು ಪ್ರತೀ 3 ತಿಂಗಳಿಗೊಮ್ಮೆ ಕರೆಯಬೇಕು. ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಡಿಸಿ ಸೂಚನೆಗಳನ್ನು ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಮಾತನಾಡಿ, ಶಾಶ್ವತ ಪುರ್ನವಸತಿ ಕೇಂದ್ರವನ್ನು ತೆರೆಯುವವರೆಗೂ ಪೀಡಿತರಿಗೆ ಫಿಜಿಯೋಥೆರಪಿ ಚಿಕಿತ್ಸೆಯನ್ನು ವಿಕಲಚೇತನರ ಇಲಾಖೆ ಹಾಗೂ ಎನ್‌ಜಿಓ ಗಳ ಸಹಯೋಗದೊಂದಿಗೆ ನೀಡಬೇಕೆಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ಎಂಡೋಸಲ್ಪಾನ್ ಪೀಡಿತರಿಗೆ ಔಷಧಿಗಳನ್ನು ನೀಡಲು ಆದ್ಯತೆಯ ಮೇಲೆ ಖರೀದಿ ಮಾಡಿ, ಉಚಿತವಾಗಿ ವಿತರಿಸಬೇಕು ಎಂದೂ ಸಿಇಓ ತಿಳಿಸಿದರು.

ಸಭೆಯಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ, ಎಂಡೋಸಲ್ಫಾನ್ ಪೀಡಿತರಿಗೆ ಅವಶ್ಯವಿರುವ ಬೇಡಿಕೆಗಳನ್ನು ಸಮಿತಿಯ ಮುಂದೆ ತಂದರು. ಬಾಧಿತ ಪ್ರದೇಶದಲ್ಲಿ ಜನ್ಮ ಹೊಂದಿದ ಹೆಣ್ಣು ಮಕ್ಕಳು ಮದುವೆಯಾಗಿ ಇತರೆ ಪ್ರದೇಶಗಳಿಗೆ ಹೋಗಿದ್ದು, ಅವರುಗಳಿಗೆ ಜನಿಸಿದ ಮಕ್ಕಳ ಮೇಲೂ ಸಹ ಎಂಡೋಸಲ್ಫಾನ್ ದುಷ್ಪರಿಣಾಮ ಬೀರಿದ್ದು ಅವರಿಗೂ ಸಹ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಡಾ. ಪ್ರಶಾಂತ್ ಭಟ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

1642 ಮಂದಿ ಬಾಧಿತರು

ಜಿಲ್ಲೆಯಲ್ಲಿ 669 ಪುರುಷ, 620 ಮಹಿಳೆ, 353 ಮಕ್ಕಳೂ ಸೇರಿದಂತೆ ಒಟ್ಟು 1642 ಎಂಡೋಸಲ್ಫಾನ್ ಬಾಧಿತರನ್ನು ಗುರುತಿಸಲಾಗಿದೆ. ಇವರಲ್ಲಿ 120 ಮಂದಿ ಈಗಾಗಲೇ ಮರಣ ಹೊಂದಿದ್ದಾರೆ. ಪ್ರಸ್ತುತ 1522 ಬಾಧಿತರಿದ್ದಾರೆ. ಅವರಲ್ಲಿ 203 ಮಂದಿ ಶೇ.25ರಷ್ಟು, 351 ಮಂದಿ ಶೇ.25ರಿಂದ 59 ರಷ್ಟು ಹಾಗೂ 968 ಮಂದಿ ಶೇ.60ಕ್ಕಿಂತ ಹೆಚ್ಚು ಅಂಗಕಲತೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

86 ಗ್ರಾಮಗಳು ಎಂಡೋಸಲ್ಫಾನ್ ಬಾಧಿತ

ಜಿಲ್ಲೆಯಲ್ಲಿ ಗೇರು ಬೀಜದ ಮರಗಳಿಗೆ ಹಾನಿ ಉಂಟು ಮಾಡುವ ಕೀಟಗಳ ನಿಯಂತ್ರಣಕ್ಕೆ ಕುಂದಾಪುರ ತಾಲೂಕಿನ 29,ಉಡುಪಿಯ 5 ಹಾಗೂ ಕಾರ್ಕಳದ 9 ಗ್ರಾಮಗಳು ಸೇರಿದಂತೆ 43 ಗ್ರಾಮಗಳಲ್ಲಿ ಎಂಡೋಸಲ್ಫಾನ್ ಸಿಂಪಡಿಸಿದ್ದು, ಇದು ಸುತ್ತಲಿನ ಇತರೆ ಗ್ರಾಮ ಗಳಿಗೂ ವ್ಯಾಪಿಸುವ ಮೂಲಕ ಜಿಲ್ಲೆಯ ಒಟ್ಟು 86 ಗ್ರಾಮಗಳ ಜನರಿಗೆ ಇದರಿಂದ ತೊಂದರೆ ಉಂಟಾಗಿರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News