ಉಮರ್‌ ಖಾಲಿದ್‌ರನ್ನು ಕೈಕೋಳದೊಂದಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿಲ್ಲ: ನ್ಯಾಯಾಲಯ

Update: 2022-01-19 17:06 GMT
ಉಮರ್‌ ಖಾಲಿದ್‌ (PTI)

ಪಟಿಯಾಲ: ದೇಶದ್ರೋಹ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು  ನ್ಯಾಯಾಲಯಕ್ಕೆ ಕೈಕೋಳಗಳೊಂದಿಗೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿದೆ ಎಂದು scroll.in ವರದಿ ಮಾಡಿದೆ.

ಕೋವಿಡ್ -19 ಸಂದರ್ಭವನ್ನು ಪರಿಗಣಿಸಿ, ಖಾಲಿದ್ ಅವರನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಬೇಕು ಪಟಿಯಾಲ ಹೌಸ್ ಕೋರ್ಟ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ಹೇಳಿದ್ದಾರೆ.

ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಿದ ಬಳಿಕ, ಖಾಲಿದ್‌ ಅವರನ್ನು "ಕೈಕೋಳ ಅಥವಾ ಸಂಕೋಲೆಗಳನ್ನು ಬಳಸದೆ ಎಂದಿನ ರೀತಿಯಲ್ಲಿ" ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಏಪ್ರಿಲ್ 7 ರಂದು ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಅವರನ್ನು ಕೈಕೋಳದಲ್ಲಿ ಕರೆತರಲು ಆದೇಶ ಹೊರಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಇದನ್ನು ಪ್ರಶ್ನಿಸಿ ಖಾಲಿದ್ ಅವರ ವಕೀಲರು ಮನವಿ ಸಲ್ಲಿಸಿದ್ದರು.  

"ಉಮರ್ ಖಾಲಿದ್ ಅವರನ್ನು ಕೈಕೋಳ ಅಥವಾ ಸಂಕೋಲೆಗಳಲ್ಲಿ ಹಾಜರುಪಡಿಸುವಂತೆ ನಿರ್ದೇಶಿಸುವ ಆದೇಶವನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇಂತಹ ನಿರ್ದೇಶನದ ವಿವರಗಳನ್ನು, ಮತ್ತು ಅದಕ್ಕೆ ಕಾರಣವೇನು ಎಂದು ತಿಳಿಯಲು ನಾನು ನ್ಯಾಯಾಲಯವನ್ನು ಕೇಳಿದ್ದೆ.  ಆದರೆ, ಅಂತಹ ಯಾವುದೇ ಆದೇಶವನ್ನು ನೀಡಿಲ್ಲ ಹಾಗೂ ಖಾಲಿದ್‌ ರನ್ನು ಯಾವುದೇ ಕೈಕೋಳ ಅಥವಾ ಸಂಕೋಲೆಗಳಿಂದ ಹಾಜರುಪಡಿಸಬೇಕೆಂದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ” ಎಂದು ಖಾಲಿದ್ ಅವರ ವಕೀಲ ತ್ರಿದೀಪ್ ಪೈಸ್ scroll.in ಗೆ ತಿಳಿಸಿದ್ದಾರೆ. 
 
ಖಾಲಿದ್‌ರನ್ನು ಕೈಕೋಳದೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಎರಡನೇ ಬಾರಿಗೆ ಆದೇಶ ಹೊರಡಿಸಿದೆ. ಆದೇಶದ ಪ್ರತಿಯನ್ನು  ಜೈಲು ಅಧೀಕ್ಷಕರಿಗೆ ಕಳುಹಿಸುವಂತೆಯೂ ನ್ಯಾಯಾಲಯ ಹೇಳಿದೆ.

ಕಳೆದ ಏಪ್ರಿಲ್‌ನಲ್ಲಿ, ದೆಹಲಿ ಪೊಲೀಸರು ಖಾಲಿದ್ ಮತ್ತು ಖಾಲಿದ್ ಸೈಫಿಯನ್ನು ಕೈಕೋಳದಲ್ಲಿ ಕರೆತರಲು ಅನುಮತಿಸುವಂತೆ ಮನವಿ ಮಾಡಿದ್ದರು. ಅವರು "ಅಪಾಯಕಾರಿ ಕೈದಿಗಳು" ಎಂದು ಪೊಲೀಸರು ಆರೋಪಿಸಿದ್ದರು.

ಆದರೆ ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಪೊಲೀಸರ ಮನವಿಯನ್ನು ಕಳೆದ ಜೂನ್‌ನಲ್ಲಿ ವಜಾಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News