"ನಮಗೆ ತೆರಿಗೆ ವಿಧಿಸಿ": ಜಗತ್ತಿನ 100ಕ್ಕೂ ಅಧಿಕ ಮಿಲಿಯಾಧಿಪತಿಗಳಿಂದ ವರ್ಲ್ಡ್ ಇಕನಾಮಿಕ್ ಫೋರಂಗೆ ಬಹಿರಂಗ ಪತ್ರ

Update: 2022-01-20 05:27 GMT
Twitter/@wef

ಪ್ಯಾರಿಸ್: ಬುಧವಾರ ಜಗತ್ತಿನ 100ಕ್ಕೂ ಅಧಿಕ ಮಿಲಿಯಾಧಿಪತಿಗಳು ಒಂದು ಅಪರೂಪದ ಮನವಿಯನ್ನು ಮಾಡಿದ್ದಾರೆ. "ನಮಗೆ ತೆರಿಗೆ ವಿಧಿಸಿ'' ಎಂಬುದೇ ಅವರ ಮನವಿ ಆಗಿದೆ.

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಮೇಲೆ ಸಂಪತ್ತು ತೆರಿಗೆ ವಿಧಿಸಿದರೆ ವಾರ್ಷಿಕ 2.52 ಟ್ರಿಲಿಯನ್ ಡಾಲರ್ ಸಂಗ್ರಹಿಸಬಹುದು, ಹಾಗೂ ಈ ಮೊತ್ತವನ್ನು ಎಲ್ಲರಿಗೂ ಕೋವಿಡ್ ಲಸಿಕೆ ಒದಗಿಸಲು ಬಳಸಬಹುದು ಹಾಗೂ 2.3 ಬಿಲಿಯನ್ ಜನರನ್ನು ಬಡತನದಿಂದ ಹೊರತರಬಹುದು ಎಂದು ಶ್ರೀಮಂತ ವ್ಯಕ್ತಿಗಳು ಮತ್ತು ಲಾಭರಹಿತ ಕೆಲ ಸಂಸ್ಥೆಗಳ ಬೆಂಬಲದಿಂದ ನಡೆಸಲಾದ ಒಂದು ಅಧ್ಯಯನದಿಂದ ತಿಳಿದು ಬಂದ ನಂತರ ಈ ಮನವಿ ಸಲ್ಲಿಸಲಾಗಿದೆ.

102 ಮಿಲಿಯಾಧಿಪತಿಗಳು ವರ್ಲ್ಡ್ ಇಕನಾಮಿಕ್ ಫೋರಂ ದಾವೋಸ್‌ನಲ್ಲಿ ನಡೆಸುತ್ತಿರುವ ಆನ್‌ಲೈನ್ ಸಭೆಗೆ ಈ ಕುರಿತಂತೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರ ಬರೆದವರಲ್ಲಿ ಡಿಸ್ನಿ ಉತ್ತರಾಧಿಕಾರಿ ಅಬಿಗೈಲ್ ಡಿಸ್ನಿ ಕೂಡ ಸೇರಿದ್ದಾರೆ.

ಪ್ರಸ್ತುತ ತೆರಿಗೆ ವ್ಯವಸ್ಥೆ ನ್ಯಾಯಯುತವಾಗಿಲ್ಲ ಹಾಗೂ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಲೆಂದೇ ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

"ಜಗತ್ತಿನ ಎಲ್ಲಾ ರಾಷ್ಟ್ರಗಳು  ಶ್ರೀಮಂತರಿಗೆ ತಮ್ಮ ನ್ಯಾಯಯುತ ಪಾಲನ್ನು ನೀಡುವಂತೆ ಬೇಡಿಕೆಯಿಡಬೇಕು, ಶ್ರೀಮಂತರಿಗೆ ತೆರಿಗೆ ವಿಧಿಸಿ-ನಮ್ಮ ಮೇಲೆ ಈಗ ತೆರಿಗೆ ವಿಧಿಸಿ,'' ಎಂದು ಅವರು ಆಗ್ರಹಿಸಿದ್ದಾರೆ.

ಜಗತ್ತಿನ 10 ಅತ್ಯಂತ ಶ್ರೀಮಂತ ವ್ಯಕ್ತಿಗಳು ಕೋವಿಡ್ ಸಾಂಕ್ರಾಮಿಕದ ಎರಡು ವರ್ಷಗಳಲ್ಲಿ ಜಗತ್ತು ಬಡತನ ಮತ್ತು ಅಸಮಾನತೆಯಿಂದ ನಲುಗಿದಾಗ, ತಮ್ಮ ಸಂಪತ್ತನ್ನು ದ್ವಿಗುಣಗೊಳಿಸಿ 1.5 ಟ್ರಿಲಿಯನ್ ಡಾಲರ್ ಸಂಪತ್ತು ಕ್ರೋಢೀಕರಿಸಿದ್ದಾರೆ ಎಂಬ ಆಕ್ಸ್ಫ್ಯಾಮ್ ವರದಿಯ ನಂತರ ಈ ಮನವಿ ಬಂದಿದೆ.

ಪೆಟ್ರಿಯಾಟಿಕ್ ಮಿಲಿಯನರ‍್ಸ್, ಮಿಲಿಯನರ‍್ಸ್ ಫಾರ್ ಹ್ಯುಮಾನಿಟಿ. ಟ್ಯಾಕ್ಸ್ ಮಿ ನೌ ಮತ್ತು ಆಕ್ಸ್ಫ್ಯಾಮ್ ಈ ಪತ್ರವನ್ನು ಪ್ರಚುರಪಡಿಸುತ್ತಿವೆ. ಅಮೆರಿಕ, ಕೆನಡಾ, ಜರ್ಮನಿ, ಬ್ರಿಟನ್, ಡೆನ್ಮಾರ್ಕ್, ನಾರ್ವೇ, ಆಸ್ಟ್ರಿಯಾ, ನೆದರ್‌ಲ್ಯಾಂಡ್ಸ್ ಮತ್ತು ಇರಾನ್‌ನ ಶ್ರೀಮಂತರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹೆಚ್ಚು ಪ್ರೊಗ್ರೆಸ್ಸಿವ್ ತೆರಿಗೆ ಹಾಗೂ ಶೇ. 10ರಷ್ಟು ತೆರಿಗೆಯನ್ನು ಬಿಲಿಯಾಧಿಪತಿಗಳಿಗೆ ವಿಧಿಸಿದರೆ ವರ್ಷಕ್ಕೆ 3.62 ಟ್ರಿಲಿಯನ್ ಡಾಲರ್ ಸಂಗ್ರಹಿಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News