ಜ.24ರಿಂದ ತುಳುಕೂಟದ ನಾಟಕ ಸ್ಪರ್ಧೆ

Update: 2022-01-20 14:51 GMT

ಉಡುಪಿ:  ಉಡುಪಿ ತುಳುಕೂಟದ ವತಿಯಿಂದ 20ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟರ ನೆನಪಿನ ತುಳು ನಾಟಕ ಪರ್ಬವು ಜ.24ರಿಂದ ಫೆ.2ರವರೆಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.

 ಈ ಬಗ್ಗೆ ಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿಇಂದ್ರಾಳಿ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
 ಜ.24ರಂದು ಸಂಜೆ 5 ಗಂಟೆಗೆ ಈ ನಾಟಕೋತ್ಸವವನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಮೂಡಬಿದ್ರೆ ಶ್ರೀಜೈನಮಠದ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಭ್ಯಾಗತರಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನಾಟಕಕಾರ ಗಂಗಾಧರ ಕಿದಿಯೂರು ಅವರ ಖ್ಯಾತ 14 ನಾಟಕಗಳ ಸಂಪುಟ ಮೆನ್ಕುನ ಸಿರಿಸಿಂಗಾರ ಕೂಡ ಬಿಡುಗಡೆಯಾಗಲಿದೆ. ಈ ಸಂಪುಟದ ಬಗ್ಗೆ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಮಾತನಾಡಲಿದ್ದಾರೆ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಾಟಕ ಪರ್ಬದ ಸಂಚಾಲಕ ಬಿ.ಪ್ರಭಾಕರ ಭಂಡಾರಿ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ತುಳು ಕಾದಂಬರಿ ಸ್ಪರ್ಧೆಯ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

ಪ್ರದರ್ಶನಗೊಳ್ಳುವ ನಾಟಕಗಳು

ಜ.24ರಂದು ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ ನಿಂದ ಆದಿ ಅಳವುದ ಸಾದಿ, 25ರಂದು ಕಪಾಡಿಯ ರಂಜನ ಕಲಾವಿದರಿಂದ ಕಮಲಿ, 26ರಂದು ಮಣಿಪಾಲದ ಸಂಗಮ ಕಲಾವಿದರರಿಂದ ಸೊರದಾಂತಿ ನಲಿಕೆ, 27ರಂದು ಕೊಡವೂರು ನವಸುಮ ರಂಗಮಂಚದಿಂದ ಆಣ್ ಸುರ್ಪೊದುಲಯಿದ ಪೊಣ್ಣ ಕಣ್ಣ್, 28ರಂದು ಮಲ್ಪೆ ಕರಾವಳಿ ಕಲಾವಿದರಿಂದ ಗಾವುದ ಪುಂಚ, ಫೆ.1ರಂದು ಸುಮನಸಾ ಕೊಡವೂರು ತಂಡದಿಂದ ಕಾಪ ಮತ್ತು ಫೆ. 2ರಂದು ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ಈದಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News