ಉಪನಿಷತ್ ಗಳು ಯಾವತ್ತೂ ಹಳೆಯದಾಗುವುದಿಲ್ಲ : ಲೇಖಕ ದು.ಗು ಲಕ್ಷ್ಮಣ್

Update: 2022-01-20 14:57 GMT

ಉಡುಪಿ: ಉಪನಿಷತ್ ಗಳು ಯಾವತ್ತೂ ಹಳೆಯದಾಗುವುದಿಲ್ಲ. ವೇದ, ಪುರಾಣಗಳು ಜಗತ್ತಿಗೆ ಆಕಾರ ಕೊಟ್ಟ ಗ್ರಂಥಗಳು. ಹೊರದೇಶದವರು ಇದರ ಬಗ್ಗೆ ಗಂಭೀರ ಅಧ್ಯಾಯನ ನಡೆಸಿದ್ದಾರೆ ಎಂದು ಪತ್ರಕರ್ತ, ಲೇಖಕ ದು.ಗು ಲಕ್ಷ್ಮಣ್ ಹೇಳಿದರು

ಗುರುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಉಡುಪಿ ಮತ್ತು ಚಿಂತನ ವೇದಿಕೆ ಅಂಬಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಶ್ರೀಭವಾನಿ ಮಂಟಪದಲ್ಲಿ ಉಪನಿಷತ್ ದರ್ಶನ ಪುಸ್ತಕ ಪುಷ್ಪ ಸಮರ್ಪಣಾ ಸಮಾರಂಭದಲ್ಲಿ ಪುಸ್ತಕವನ್ನು ಉದ್ಘಾಟಿಸಿ ಮಾತನಾಡಿದರು

ಉಪನಿಷತ್ ಗಳ ಬಗ್ಗೆ ಭಾರತೀಯರಿಗೆ ತಾತ್ಸರವೇಕೆ ಎಂದು ತಿಳಿದಿಲ್ಲ. ಮನುಷ್ಯನ ಜೀವನಕ್ಕೆ ದಾರಿ ಮತ್ತು ಗುರಿ ಇರಬೇಕು. ಹಣ, ಕೀರ್ತಿ, ಆಸ್ತಿ ಸಂಪದಾನೆ ಮಾಡುವ ಗುರಿಯನ್ನು ಹೆಚ್ಚಿನವರು ಹೊಂದಿದ್ದಾರೆ. ಆದರೆ ಇಹಲೋಕ ತ್ಯಜಿಸುವಾಗ ಅದೆಲ್ಲವನ್ನು ಬಿಟ್ಟು ಹೋಗುತ್ತೇವೆ. ಅದಕ್ಕೆ ಶಿಶುನಾಳ ಶರೀಫರು ಒಳಿತು ಮಾಡು ಮನುಷ ಇರೋದು ಮೂರು ದಿವಸ ಎಂದಿದ್ದಾರೆ.

ಪಾಶ್ಚಿಮಾತ್ಯರು ನಮ್ಮ ವೇದವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಕೆಲವು ಕನ್ನಡಿಗರು ಸಂಸ್ಕೃತ ವಿವಿ ಮಾಡಲು ವಿರೋಧ ವ್ಯಕ್ತ ಪಡಿಸುತ್ತಿರುವುದು ಆಶ್ಚರ್ಯ ಎಂದು ನುಡಿದರು

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ ವಿಜಯ್ ಬಳ್ಳಾಲ್ ಮಾತನಾಡಿ ಶಿಕಾರಿಪುರ ಈಶ್ವರ ಭಟ್ ಅವರ ಪುಸ್ತಕ ಉಪನಿಷತ್ ದರ್ಶನ ಅಧ್ಯಯನ ಶೀಲ ಪುಸ್ತಕವಾಗಿದೆ ಎಂದು ಶುಭ ಹಾರೈಸಿದರು

ಕಾರ್ಯಕ್ರಮದಲ್ಲಿ ಎಂ ಐ ಟಿ ಪ್ರಾಧ್ಯಪಕ ನಾರಾಯಣ ಶೆಣೈ, ಚಿಂತನ ವೇದಿಕೆಯ ಭರತೇಶ್ ಬಲ್ಲಾಳ್, ಮಣಿಪಾಲ ಮಾಹೆಯ ಸಹ ಪ್ರಾಧ್ಯಾಪಕ ಡಾ ನಂದನ್ ಪ್ರಭು, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಉಪಸ್ಥಿತರಿದ್ದರು. ಲೇಖಕ ಶಿಕಾರಿಪುರ ಈಶ್ವರ್ ಭಟ್ ಸ್ವಾಗತಿಸಿ, ವಿದ್ಯಾರ್ಥಿನಿ ಸುಷ್ಮಾ ವಂದಿಸಿದರು.

''22 ವರ್ಷಗಳ ಹಿಂದೆ ಉಪನಿಷತ್ ಪ್ರವರ್ಚನ ಮಾಲಿಕೆ ಅಂಬಲಪಾಡಿಯಲ್ಲಿ ನಡೆಯುತ್ತಿತ್ತು. ಅದನ್ನು ಹೊಸದಿಗಂತ ಪತ್ರಿಕೆಗೆ ಎಂಟು ಸಂಚಿಕೆ ಬರೆದಿದ್ದೇನೆ. ಅದು ಮತ್ತು ಅದರ ಜೊತೆಗೆ ಇನ್ನಷ್ಟು ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ ತಂದಿದ್ದೇನೆ. ಉಪನಿಷತ್ ಅನ್ನು ಸರಳೀಕರಿಸಿ, ಸಾಮಾನ್ಯ ಜನರಿಗೆ ತಿಳಿಯುವಂತೆ ಅಕ್ಷರ ರೂಪಕ್ಕೆ ಇಳಿಸಿದ್ದೇನೆ'' ಎಂದು ಉಪನಿಷತ್ ದರ್ಶನ ಪುಸ್ತಕ ಬರೆದ ಲೇಖಕ ಶಿಕಾರಿಪುರ ಈಶ್ವರ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News