ರಾಜ್ಯದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿ ತಡೆಯುವಂತೆ ಸರಕಾರದ ಮೇಲೆ ಒತ್ತಡ ತರಬೇಕು: ಮೊಯಿದಿನಬ್ಬ

Update: 2022-01-20 15:10 GMT

ಉಡುಪಿ : ರಾಜ್ಯದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳು, ಕೆಲವು ಸಂಘಟನೆಗಳ ಮುಖಂಡರ ವಿವಾದಾತ್ಮಕ, ಪ್ರಚೋದನಕಾರಿ ಭಾಷಣಗಳು, ಉಡುಪಿಯಲ್ಲಿ ಹಿಜಾಬ್ ನೆಪ ಒಡ್ಡಿ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಮತ್ತು ಸಂವಿಧಾನ ಬದ್ಧವಾದ ಧಾರ್ಮಿಕ ಹಕ್ಕಿನ ದಮನಕ್ಕೆ ಪ್ರಯತ್ನಗಳು ನಡೆಯುತ್ತಿರುವುದನ್ನು ತಡೆಯುವಂತೆ ಕೂಡಲೇ ಸರಕಾರದ ಮೇಲೆ ಒತ್ತಡ ತಂದು ಅಲ್ಪ ಸಂಖ್ಯಾತ ಸಮುದಾಯದ ಜನತೆಯನ್ನು ಕಾಡುತ್ತಿರುವ ಅಭದ್ರತೆಯ ಭೀತಿಯನ್ನು ಪರಿಹರಿಸಲು ಪಕ್ಷ ಭೇದ ಮರೆತು ಪ್ರಯತ್ನಿಸುವಂತೆ ರಾಜ್ಯ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ ಪಿ ಮೊಯಿದಿನಬ್ಬ ಆಗ್ರಹಿಸಿದ್ದಾರೆ.

ವಿಧಾನ ಸಭೆ ಸದಸ್ಯರಾದ ಯು. ಟಿ. ಖಾದರ್, ಎನ್. ಎ. ಹಾರಿಸ್, ತನ್ವೀರ್ ಸೇಠ್, ಕನೀಝ್ ಫಾತಿಮಾ, ಝಮೀರ್ ಅಹಮ್ಮದ್ ಖಾನ್, ವಿಧಾನ ಪರಿಷತ್ತಿನ ಸದಸ್ಯರಾದ ಕೆ. ನಸೀರ್ ಅಹ್ಮದ್, ಸಿ. ಎಂ. ಇಬ್ರಾಹಿಂ, ಸಲೀಂ ಅಹ್ಮದ್, ಬಿ. ಎಂ. ಫಾರೂಖ್ ಇವರಿಗೆ ಮನವಿಯೊಂದನ್ನು ರವಾನಿಸಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಉಗ್ರವಾದ ಭಾಷಣಗಳ ಮೂಲಕ ಕೋಮು ಪ್ರಚೋದನೆ ನೀಡುವವರ ಮೇಲೆ ಕಠಿಣ ಕ್ರಮ, ಪದೇ ಪದೇ ಮುಸ್ಲಿಂ ಯುವಕರ ಮೇಲಿನ ಹಲ್ಲೆ, ಇತ್ತೀಚೆಗೆ ನಡೆದ ಇಬ್ಬರು ಅಮಾಯಕರ ಕೊಲೆ, ಮುಸ್ಲಿಮೇತರರೇ ಗೋವುಗಳ ಸಾಗಾಣಿಕೆ, ಮಾರಾಟ ಜಾಲದಲ್ಲಿದ್ದು ಇದನ್ನು ಮುಸ್ಲಿಂ ಸಮಾಜದ ಮೇಲೆ ಹೊರಿಸುವ ಯತ್ನ, ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ನ ನೆಪ ಒಡ್ಡಿ  ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸಿ ಸಂವಿಧಾನಾತ್ಮಕವಾದ ಧಾರ್ಮಿಕ ಹಕ್ಕನ್ನು ದಮನಿಸುವ ಯತ್ನ ಮೊದಲಾದ ಪ್ರಕರಣಗಳನ್ನು ಅವರು ಶಾಸಕರುಗಳ ಗಮನಕ್ಕೆ ತಂದು ಶಾಸನ ಬದ್ಧವಾದ ತಮ್ಮ ಅಧಿಕಾರವನ್ನು ಚಲಾಯಿಸಿ ಸರಕಾರದ ಮತ್ತು ಇಲಾಖೆಗಳ ಮೇಲೆ ಒತ್ತಡ ತರಬೇಕು. ಈ ಸಮುದಾಯದ ಹಿತರಕ್ಷಣೆ ಮಾಡಬೇಕು ಮತ್ತು ಅತೀ ಮುಖ್ಯವಾಗಿ ಅಲ್ಪ ಸಂಖ್ಯಾತ ಸಮುದಾಯದ ಜನರ ಕುಂದು ಕೊರತೆಗಳ, ಸಮಸ್ಯೆಗಳ, ವಿವಿಧ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗೆ ಆ ವರ್ಗದ ಜನ ಪ್ರತಿನಿಧಿ ಸಂಸ್ಥೆಯ ವಿವಿಧ ಅಧಿಕಾರಿಗಳ ಸಭೆ ನಡೆಸಬೇಕು. ಪ್ರತೀ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಆಯೋಜಿಸುವಂತೆ ಸರಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News