​ಟಿ20 ವಿಶ್ವಕಪ್: ಭಾರತಕ್ಕೆ ಆರಂಭಿಕ ಪಂದ್ಯದಲ್ಲಿ ಪಾಕ್ ಎದುರಾಳಿ

Update: 2022-01-21 02:06 GMT
ಫೈಲ್ ಫೋಟೊ

ಮೆಲ್ಬೋರ್ನ್: ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶುಕ್ರವಾರ ಬಿಡುಗಡೆ ಮಾಡಿದ್ದು, ಭಾರತ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23ರಂದು ಸೆಣೆಸಲಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ನಡೆಯುತ್ತಿರುವ ಮೊಟ್ಟಮೊದಲ ವಿಶ್ವಕಪ್ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ 2015ರ ವಿಶ್ವಕಪ್‌ನಲ್ಲಿ ಏಷ್ಯಾದ ಈ ಎರಡು ಸಾಂಪ್ರದಾಯಿಕ ಎದುರಾಳಿಗಳು ಅಡಿಲೇಡ್ ಓವಲ್‌ನಲ್ಲಿ ವಿಶ್ವಕಪ್ ಪಂದ್ಯ ಆಡಿದ್ದರು.

ಎಂಟನೇ ಆವೃತ್ತಿಯ ಪಂದ್ಯಾವಳಿ ಅಕ್ಟೋಬರ್ 16ರಂದು ಆರಂಭವಾಗಲಿದ್ದು, ಅಡಿಲೇಡ್, ಬ್ರಿಸ್ಬೇರ್ನ್ ಗೀಲಾಂಗ್, ಹೊಬರ್ಟ್, ಮೆಲ್ಬೋರ್ನ್, ಸಿಡ್ನಿಯಲ್ಲಿ ನಡೆಯಲಿದೆ. ನವೆಂಬರ್ 13ರಂದು ಫೈನಲ್ ಪಂದ್ಯ ಎಂಜಿಸಿಯಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಆರಂಭಿಕ ಪಂದ್ಯದಲ್ಲಿ ಅಕ್ಟೋಬರ್ 22ರಂದು ನ್ಯೂಝಿಲೆಂಡ್ ವಿರುದ್ಧ ಸೆಣೆಸಲಿದೆ. ಒಟ್ಟು 16 ಅಂತರರಾಷ್ಟ್ರೀಯ ತಂಡಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿ 45 ಪಂದ್ಯಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ.

ಎರಡನೇ ಗುಂಪಿನಲ್ಲಿರುವ ಭಾರತದ ಜತೆ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಇರುತ್ತವೆ. ಜತೆಗೆ ಮೊದಲ ಸುತ್ತಿನ ಪಂದ್ಯದಿಂದ ಬಿ ಗ್ರೂಪ್‌ನ ವಿಜೇತರು ಹಾಗೂ ಎ ಗ್ರೂಪ್‌ನ ರನ್ನರ್ ಅಪ್‌ಗಳು ಅರ್ಹತೆ ಪಡೆಯಲಿದ್ದಾರೆ. ಅಕ್ಟೋಬರ್ 27ರಂದು ಎ ಗ್ರೂಪ್‌ನ ರನ್ನರ್ ಅಪ್ ಜತೆ ಭಾರತ ಸೆಣೆಸಲಿದ್ದು, ಅಕ್ಟೋಬರ್ 30ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದೆ. ನವೆಂಬರ್ 2ರಂದು ಅಡಿಲೇಡ್ ಓವೆಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಆಡಲಿದ್ದು, ನವೆಂಬರ್ 6ರಂದು ಎಂಸಿಜಿಯಲ್ಲಿ ಬಿ ಗ್ರೂಪ್ ವಿಜೇತರ ವಿರುದ್ಧ ಹೋರಾಟ ನಡೆಸಲಿದೆ.

ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದು, ಸೀಮಿತ ಓವರ್‌ಗಳ ಪೂರ್ಣಾವಧಿ ನಾಯಕನಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು. ಹಿಂದಿನ ಆವೃತ್ತಿಯಲ್ಲಿ ಭಾರತ ತಂಡ ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ ಜತೆ ಹೀನಾಯವಾಗಿ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಗುಂಪು ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News