ಉತ್ತರಪ್ರದೇಶ: ಪೊಲೀಸ್ ದೌರ್ಜನ್ಯದ ತೀವ್ರತೆಯಿಂದ ಬಾಲಕ ಮೃತ್ಯು ಆರೋಪ; ಮೂವರು ಸಿಬ್ಬಂದಿ ಅಮಾನತು

Update: 2022-01-24 12:55 GMT

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ನಡೆದ ದೌರ್ಜನ್ಯದಿಂದ ಪರಿಶಿಷ್ಟ ಪಂಗಡದ 17 ರ ಹರೆಯದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಘಟನೆಗೆ ಸಂಬಂದಿಸಿದಂತೆ ಔಟ್‌ಪೋಸ್ಟ್‌ ಠಾಣಾಧಿಕಾರಿ  ಸೇರಿದಂತೆ ಒಟ್ಟು ಮೂವರು ಪೊಲೀಸ್‌ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.

ಕಳ್ಳತನ ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ಬಾಲಕನಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಪೊಲೀಸರ ದೌರ್ಜನ್ಯದಿಂದ ರವಿವಾರ ಬಾಲಕ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜನವರಿ 17 ರಂದು, ಮೃತ ಬಾಲಕನ ಸಂಬಂಧಿಯೊಬ್ಬರು, ಅವರ ಮಗನ ಮೊಬೈಲ್‌ ಕಳ್ಳತನದ ಆರೋಪವನ್ನು ಬಾಲಕನ ಮೇಲೆ ಹೊರಿಸಿದ್ದರು. ಸಂಬಂಧಿಯ ದೂರಿನನ್ವಯ ಬಾಲಕನನ್ನು ಪೊಲೀಸ್‌ ಔಟ್‌ಪೋಸ್ಟ್‌ಗೆ ಕರೆದೊಯ್ಯಲಾಗಿತ್ತು ಎಂದು ಗ್ರಾಮ ಮುಖಂಡ ಹೇಳಿದ್ದಾರೆಂದು indianexpress ವರದಿ ಮಾಡಿದೆ.

 “ಆರೋಪಿ ಮತ್ತು ಅವನ ಸಂಬಂಧಿಯನ್ನು ಪೊಲೀಸ್ ಔಟ್‌ಪೋಸ್ಟ್‌ಗೆ ಕರೆಸಲಾಯಿತು. ಹುಡುಗ ತನ್ನ ಹೆತ್ತವರೊಂದಿಗೆ ಬಂದನು. ಅವರ ಸಂಬಂಧಿ ಮತ್ತು ಗ್ರಾಮದ ಪ್ರಧಾನ್ [ಮುಖಂಡ] ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ವ್ಯಕ್ತಿಗಳ ಸಮ್ಮುಖದಲ್ಲಿ ಬಾಲಕನನ್ನು ವಿಚಾರಿಸಲಾಯಿತು. ಎರಡು ಗಂಟೆಗಳ ನಂತರ ಎರಡೂ ಕಡೆಯವರು ರಾಜಿ ಮಾಡಿಕೊಂಡರು. ರಾಜಿಯ ಲಿಖಿತ ಒಪ್ಪಂದ ಪೊಲೀಸರ ಬಳಿ ಲಭ್ಯವಿದೆ. ನಂತರ ಹುಡುಗನನ್ನು ಕುಟುಂಬಕ್ಕೆ ಒಪ್ಪಿಸಲಾಯಿತು . ಅವರು ಜನವರಿ 19 ರಂದು ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದರು. ಬಳಿಕ ಆತನ ಸಂಬಂಧಿ ಕೆಲವರೊಂದಿಗೆ ಆರೋಪಿಯ ಮನೆಗೆ ಹೋಗಿ ಥಳಿಸಿದ್ದಾರೆ. ಅದರ ಬಳಿಕ ಬಾಲಕನ ಸ್ಥಿತಿ ಚಿಂತಾಜನಕವಾಗಿತ್ತು. ಪೊಲೀಸ್‌ ಕಸ್ಟಡಿಯಲ್ಲಿ ಬಾಲಕ ಮೃತಪಟ್ಟಿದ್ದಾನೆನ್ನುವುದು ಸುಳ್ಳು ಆರೋಪ ” ಎಂದು ಎಸ್‌ಪಿ ಸಂಜೀವ್‌ ಸುಮನ್‌ ಹೇಳಿದ್ದಾರೆ.

ಆದರೆ, ಮೃತ ಬಾಲಕನ ಸಹೋದರಿಯು ಎಸ್‌ಪಿಯ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದು, ಪೋಲಿಸ್‌ ಕಸ್ಟಡಿಯಲ್ಲಿ ಕ್ರೂರವಾಗಿ ಥಳಿಸಿದ್ದರು. ಪೊಲೀಸರ  ದೌರ್ಜನ್ಯದಿಂದ ನನ್ನ ತಮ್ಮ ತೀವ್ರ ಅಸ್ವಸ್ಥಗೊಂಡಿದ್ದ. ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಮೃತ ಬಾಲಕ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News