ದಿಲ್ಲಿ: ಪರಿಹಾರ ಬಾಕಿ ವಿರುದ್ಧ ಸರಕಾರಿ ಆಸ್ಪತ್ರೆಗಳ ನರ್ಸಿಂಗ್ ಸಿಬ್ಬಂದಿಯಿಂದ ಪ್ರತಿಭಟನೆ
ಹೊಸದಿಲ್ಲಿ,ಜ.24: ಕೋವಿಡ್ ಕರ್ತವ್ಯನಿರತರಾಗಿದ್ದಾಗ ಸಾವನ್ನಪ್ಪಿದ ತಮ್ಮ ಎಂಟು ಸಹೋದ್ಯೋಗಿಗಳಿಗೆ ದಿಲ್ಲಿ ಸರಕಾರವು ಪ್ರಕಟಿಸಿದ್ದ ಪರಿಹಾರ ಪಾವತಿ ಬಾಕಿಯಿರುವುದನ್ನು ವಿರೋಧಿಸಿ ದಿಲ್ಲಿಯ ವಿವಿಧ ಸರಕಾರಿ ಆಸ್ಪತ್ರೆಗಳ ನೂರಾರು ನರ್ಸಿಂಗ್ ಸಿಬ್ಬಂದಿಗಳು ಸೋಮವಾರ ಕಪ್ಪುಪಟ್ಟಿಗಳನ್ನು ಧರಿಸಿ ಪ್ರತಿಭಟನೆಯನ್ನು ನಡೆಸಿದರು.
ತಮ್ಮ ಬೇಡಿಕೆಗಳನ್ನು ಮುಂದಿರಿಸಿಕೊಂಡು ಲೋಕನಾಯಕ ಜಯಪ್ರಕಾಶ ಆಸ್ಪತ್ರೆ ಸೇರಿದಂತೆ ಎಲ್ಲ ಸರಕಾರಿ ಆಸ್ಪತ್ರೆಗಳ ನರ್ಸಿಂಗ್ ಸಿಬ್ಬಂದಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ದಿಲ್ಲಿ ನರ್ಸ್‌ಗಳ ಒಕ್ಕೂಟ (ಡಿಎನ್ಎಫ್)ದ ಪ್ರಧಾನ ಕಾರ್ಯದರ್ಶಿ ಲೀಲಾಧರ ರಾಮಚಂದಾನಿ ತಿಳಿಸಿದರು.
ಕೋವಿಡ್ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪುವ ಯಾವುದೇ ವೈದ್ಯ, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ,ನೈರ್ಮಲ್ಯ ಕಾರ್ಮಿಕರು ಮತ್ತು ಇತರರ ಕುಟುಂಬಗಳಿಗೆ ಒಂದು ಕೋ.ರೂ.ಪರಿಹಾರ ನೀಡುವುದಾಗಿ ದಿಲ್ಲಿ ಸರಕಾರವು ಪ್ರಕಟಿಸಿ ಒಂದು ವರ್ಷವೇ ಕಳೆದಿದೆ,ಆದರೆ ಎಂಟು ನರ್ಸಿಂಗ್ ಅಧಿಕಾರಿಗಳು ಕೋವಿಡ್‌ನಿಂದ ಮೃತಪಟ್ಟಿದ್ದರೂ ಅವರ ಕುಟುಂಬಗಳಿಗೆ ಪರಿಹಾರ ಪಾವತಿ ಇನ್ನೂ ಬಾಕಿಯಿದೆ ಎಂದರು.
ದಿಲ್ಲಿ ಸರಕಾರವು ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.
ಪರಿಹಾರ ಪಾವತಿ ಬಾಕಿ ಕುರಿತು ಡಿಎನ್ಎಫ್ ಜ.20ರಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರವನ್ನು ಬರೆದಿತ್ತು.
ಜ.25ರಂದೂ ನರ್ಸಿಂಗ್ ಸಿಬ್ಬಂದಿ ಕಪ್ಪುಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸಲಿದ್ದಾರೆ. ಅವರು ಕರ್ತವ್ಯ ನಿರ್ವಹಿಸಲಿದ್ದಾರೆ ಮತ್ತು ರೋಗಿಗಳ ಆರೈಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಬೇಡಿಕೆ ಈಡೇರದಿದ್ದರೆ ಜ.27ರಿಂದ ಎಲ್ಲ ನರ್ಸಿಂಗ್ ಸಿಬ್ಬಂದಿ ಎರಡು ಗಂಟೆಗಳ ಅವಧಿಗೆ ಆಸ್ಪತ್ರೆಗಳಿಂದ ಹೊರಬಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಮತ್ತು ಆಗಲೂ ರೋಗಿಗಳಿಗೆ ಆರೈಕೆಯ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ನಂತರವೂ ಸರಕಾರವು ಕೊರೋನ ಹುತಾತ್ಮರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸದಿದ್ದರೆ ಎಲ್ಲ ನರ್ಸಿಂಗ್ ಸಿಬ್ಬಂದಿಗಳು ಯಾವುದೇ ನೋಟಿಸ್ ನೀಡದೇ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ರಾಮಚಂದಾನಿ ತಿಳಿಸಿದರು.