×
Ad

ಮುಂಬೈ: ಕಳ್ಳನೆಂದು ಶಂಕಿಸಿ ಗುಂಪಿನಿಂದ ಆಟೊ ಚಾಲಕನನ್ನು ಥಳಿಸಿ ಹತ್ಯೆ

Update: 2022-01-24 22:18 IST
ಸಾಂದರ್ಭಿಕ ಚಿತ್ರ

ಮುಂಬೈ,ಜ.24: ಕಳ್ಳನೆಂದು ಶಂಕಿಸಿ ಗುಂಪೊಂದು ಆಟೊ ಚಾಲಕನನ್ನು ಥಳಿಸಿದ್ದು,ಗಾಯಗಳಿಂದಾಗಿ ಆತ ಸಾವನ್ನಪ್ಪಿದ್ದಾನೆ ಎನ್ನಲಾದ ಘಟನೆ ಉಪನಗರಿ ಮಲಾಡ್‌ನ ದಾಮು ನಗರದಲ್ಲಿ ನಡೆದಿದೆ. ಮೃತನ ಸಂಬಂಧಿಗಳು ಪ್ರತಿಭಟನಾ ಜಾಥಾ ನಡೆಸಿ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದಾಮು ನಗರದಲ್ಲಿ ತಾನು ಪಾರ್ಕ್ ಮಾಡಿದ್ದ ಆಟೊರಿಕ್ಷಾವನ್ನು ನೋಡಲೆಂದು ಶಾರುಖ್ ಶೇಖ್ (32) ಸುಮಾರು 10 ದಿನಗಳ ಹಿಂದೆ ಅಲ್ಲಿಗೆ ತೆರಳಿದ್ದಾಗ ಅಲ್ಲಿಯ ನಿವಾಸಿಗಳು ಆತ ಕಳ್ಳನಿರಬಹುದು ಎಂದು ಶಂಕಿಸಿ ಹಿಡಿದು ಥಳಿಸಿದ್ದರು. ಬಳಿಕ ಆತನನ್ನು ಸಮೀಪದ ನಿರ್ಜನ ಸ್ಥಳದಲ್ಲಿ ಎಸೆದಿದ್ದರು.

ಕೆಲವು ದಾರಿಹೋಕರು ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದು,ಆತನನ್ನು ಠಾಣೆಗೆ ಕರೆ ತಂದು ಲೂಟಿ ಪ್ರಕರಣವನ್ನು ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಜಾಮೀನು ಪಡೆದುಕೊಂಡಿದ್ದ ಆತ ಬಹುಶಃ ಗುಂಪಿನ ದಾಳಿಯಿಂದ ಉಂಟಾಗಿದ್ದ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು.

ಸಿಸಿಟಿವಿ ಪೂಟೇಜ್‌ನ ಆಧಾರದಲ್ಲಿ ಶೇಖ್ ನನ್ನು ಥಳಿಸಿದವರನ್ನು ಬಂಧಿಸುವಂತೆ ಆತನ ಕುಟುಂಬವು ಆಗ್ರಹಿಸಿದೆ.

ರವಿವಾರ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಿದ್ದ ಶೇಖ್ ಸಂಬಂಧಿಗಳು,ಹಲ್ಲೆಯಲ್ಲಿ ಭಾಗಿಯಾಗಿದ್ದವರು ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದಾರೆ ಮತ್ತು ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ತನಿಖೆಯು ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.

ಶೇಖ್ ಸಂಬಂಧಿಯ ದೂರಿನ ಮೇರೆಗೆ ನಾವು ಏಳೆಂಟು ಜನರ ವಿರುದ್ಧ ದಂಗೆ ಆರೋಪವನ್ನು ಹೊರಿಸಿದ್ದೇವೆ. ತನಿಖೆಯನ್ನು ಮುಂದುವರಿಸಲು ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸಮತಾ ನಗರದ ಸೀನಿಯರ್ ಇನ್ಸ್‌ಪೆಕ್ಟರ್ ಆನಂದರಾವ್ ಹಾಕೆ ತಿಳಿಸಿದರು. ಮೃತನ ಶರೀರದಲ್ಲಿ ಗಾಯದ ಗುರುತುಗಳಿರಲಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News