ಮಕ್ಕಳನ್ನು ಬೆದರಿಸಲು ಗುಂಡು ಹಾರಿಸಿದ ಆರೋಪ: ಬಿಹಾರದ ಬಿಜೆಪಿ ಸಚಿವನ ಪುತ್ರನಿಗೆ ಥಳಿಸಿದ ಗ್ರಾಮಸ್ಥರು

Update: 2022-01-24 17:58 GMT
photo: ANI

ಪಾಟ್ನಾ, ಜ. 24: ಹಣ್ಣಿನ ತೋಟದಲ್ಲಿ ಆಟ ಆಡುತ್ತಿದ್ದ ಮಕ್ಕಳನ್ನು ಬೆದರಿಸಿ ಓಡಿಸಲು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರ ಗುಂಪೊಂದು ಬಿಹಾರದ ಸಚಿವನ ಪುತ್ರನಿಗೆ ಥಳಿಸಿದ ಘಟನೆ ಮೊಪುಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹರಾದಿಯ ಕೋಯಿರಿ ಟೋಲ ಗ್ರಾಮದಲ್ಲಿ ನಡೆದಿದೆ.

ಮಕ್ಕಳನ್ನು ಬೆದರಿಸಲು ಗುಂಡು ಹಾರಿಸಿದ ಬಂದೂಕನ್ನು ಸೆಳೆದು ಸಚಿವನ ಪುತ್ರನಿಗೆ ಸ್ಥಳೀಯ ಜನರ ಗುಂಪು ಥಳಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಬಿಜೆಪಿ ನಾಯಕ ಹಾಗೂ ರಾಜ್ಯದ ಪ್ರವಾಸೋದ್ಯಮದ ಸಚಿವರಾದ ನಾರಾಯಣ ಪ್ರಸಾದ್ ಅವರ ಪುತ್ರ ಬಬ್ಲು ಕುಮಾರ್ ಮಕ್ಕಳನ್ನು ಬೆದರಿಸಿ ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇದರಿಂದ ಕಾಲ್ತುಳಿತ ಉಂಟಾಗಿ ಒಂದು ಪುಟ್ಟ ಮಗು ಸೇರಿದಂತೆ 6 ಮಕ್ಕಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಸರಕಾರಿ ವಾಹನದಲ್ಲಿ ಆಗಮಿಸಿದ ಬಬ್ಲು ಕುಮಾರ್ನನ್ನು ಗ್ರಾಮಸ್ಥರು ಓಡಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ವಾಹನದ ಸಚಿವರ ಹೆಸರುಳ್ಳ ನಂಬರ್ ಪ್ಲೇಟ್ ಅನ್ನು ಸ್ಥಳೀಯರು ಹಾನಿಗೊಳಿಸಿದ ಬಳಿಕ ಬಬ್ಲು ಕುಮಾರ್ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ್ಣಿನ ತೋಟವನ್ನು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ತಿಳಿದುಕೊಳ್ಳಲು ತನ್ನ ಪುತ್ರ ಅಲ್ಲಿಗೆ ತೆರಳಿದ್ದ. ಅಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ ಪರವಾನಿಗೆ ಇರುವ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

''ಆರೋಪ ಸುಳ್ಳು. ಇದು ತನ್ನ ಗೌರವಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ'' ಎಂದು ಅವರು ಹೇಳಿದ್ದಾರೆ.

ಗಾಯಗೊಂಡ ಗ್ರಾಮಸ್ಥರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗುಂಡು ಹಾರಿಸಿದ ಬಂದೂಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 ಕಾನೂನು ಸುವ್ಯವಸ್ಥೆ ಕಾಪಾಡಲು ಇಲ್ಲಿ ಭಾರೀ ಪೊಲೀಸ್ ನಿಯೋಜಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಉಪೇಂದ್ರ ವರ್ಮಾ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News