×
Ad

ಜಾರ್ಖಂಡ್: 13 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಸ್ಫೋಟಿಸಿದ ಶಂಕಿತ ಮಾವೋವಾದಿಗಳು

Update: 2022-01-24 23:59 IST

ಗಿರಿಡಿಹ ಜ. 24: ಜಾರ್ಖಂಡ್ನ ಗಿರಿಡಿಹ ಜಿಲ್ಲೆಯಲ್ಲಿರುವ ಬರಕಾರ್ ನದಿಗೆ 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸೇತುವೆಯನ್ನು ಉದ್ಘಾಟನೆಯಾದ ಕೇವಲ ಒಂದು ತಿಂಗಳ ಬಳಿಕ ರವಿವಾರ ಶಂಕಿತ ಮಾವೋವಾದಿಗಳು ಸ್ಫೋಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಮ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬರಗಡ ಹಾಗೂ ಲುರಾಂಗೊ ನಡುವಿನ ಸೇತುವೆಯನ್ನು ಮಾವೋವಾದಿಗಳು ರವಿವಾರ ಮುಂಜಾನೆ ಸುಮಾರು 2.30ಕ್ಕೆ ಸ್ಫೋಟಿಸಿದ್ದಾರೆ ಎಂದು ಗಿರಿಡಿಹ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ. ಮುಖ್ಯಮಂತ್ರಿ ಗ್ರಾಮ ಸೇತು ಯೋಜನೆ ಅಡಿಯಲ್ಲಿ 2018ರಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಸೇತುವೆಯನ್ನು ಒಂದು ತಿಂಗಳ ಹಿಂದೆ ಉದ್ಘಾಟಿಸಲಾಗಿತ್ತು.

ತಮ್ಮ ಉನ್ನತ ನಾಯಕ ಪ್ರಶಾಂತ್ ಬೋಸ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಸಿಪಿಐ (ಮಾವೋವಾದಿ)ಗಳು 'ಪ್ರತಿರೋಧ ಸಪ್ತಾಹ' ಆಚರಿಸುತ್ತಿದ್ದಾರೆ. ಸಂಘಟನೆ ಗಿರಿಡಿಹಿ ಜಿಲ್ಲೆಯಲ್ಲಿ ಶನಿವಾರ ಮೊಬೈಲ್ ಗೋಪುರವೊಂದನ್ನು ಸ್ಪೋಟಿಸಿದೆ ಹಾಗೂ ಇನ್ನೊಂದು ಮೊಬೈಲ್ ಗೋಪುರಕ್ಕೆ ಬೆಂಕಿ ಹಚ್ಚಿದೆ. ಅಲ್ಲದೆ, ಜನವರಿ 27ರಂದು ಬಿಹಾರ್ ಹಾಗೂ ಜಾರ್ಖಂಡ್ ಬಂದ್ಗೆ ಕರೆ ನೀಡಿದೆ.

ಪ್ರಶಾಂತ್ ಬೋಸ್ ಆಲಿಯಾಸ್ ಕಿಶನ್ ದಾನನ್ನು ಆತನ ಪತ್ನಿ ಶೀಲಾ ಮರಾಂಡಿಯೊಂದಿಗೆ ಕಳೆದ ವರ್ಷ ನವೆಂಬರ್ನಲ್ಲಿ ಜಾರ್ಖಂಡ್ ಪೊಲೀಸರು ಬಂಧಿಸಿದ್ದರು. ಸಿಪಿಐ (ಮಾವೋವಾದಿ)ಯ ಪೂರ್ವ ವಲಯ ಬ್ಯುರೊದ ಕಾರ್ಯದರ್ಶಿ ಬೋಸ್ ಬಿಹಾರ, ಜಾರ್ಖಡ್ ಹಾಗೂ ಪಶ್ಚಿಮಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂಡಾಯ ಚಟುವಟಿಕೆ ನಡೆಸುವ ಹೊಣೆ ಹೊತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News