ಪಾಕ್‌ನಿಂದ 20 ಭಾರತೀಯ ಮೀನುಗಾರರ ಹಸ್ತಾಂತರ

Update: 2022-01-25 02:27 GMT

ಲಾಹೋರ್/ ಅತ್ತಾರಿ: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ ಆರೋಪದಲ್ಲಿ ಬಂಧಿಸಿದ್ದ 20 ಮಂದಿ ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸೋಮವಾರ ವಾಘ್ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.

ಕರಾಚಿಯ ಲಾಂಧಿ ಜೈಲಿನಲ್ಲಿದ್ದ ಮೀನುಗಾರರ ಜೈಲುವಾಸದ ಅವಧಿ ರವಿವಾರ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಬಿಡುಗಡೆ ಮಾಡಿ ವಾಘ್ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.

ಎಲ್ಲ ಕಾನೂನು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಸೋಮವಾರ ಸಂಜೆ ಭಾರತದ ಗಡಿಭದ್ರತಾ ಪಡೆಯ ಸಿಬ್ಬಂದಿಗೆ ಮೀನುಗಾರರನ್ನು ಹಸ್ತಾಂತರಿಸಲಾಗಿದೆ ಎಂದು ಎಧಿ ಫೌಂಡೇಷನ್ ವಕ್ತಾರ ಮೊಹ್ಮದ್ ಯೂನಿಸ್ ಹೇಳಿದ್ದಾರೆ.

ಇಸಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರವಾಸ ಪ್ರಮಾಣಪತ್ರದ ಮೂಲಕ ಅವರು ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಭಾರತದ ಗಡಿಯೊಳಕ್ಕೆ ಬರುತ್ತಿದ್ದಂತೆ ಮೀನುಗಾರರು, ಮೊಣಗಾಲೂರಿ, ತಾಯ್ನೆಲದ ಮಣ್ಣನ್ನು ಚುಂಬಿಸಿದರು. ಕೋವಿಡ್-19 ಸೇರದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಮೃತಸರದಲ್ಲಿ ರಾತ್ರಿ ತಂಗಿದ ಬಳಿಕ ತಮ್ಮ ಹುಟ್ಟೂರಾದ ಗುಜರಾತ್‌ನ ಹಳ್ಳಿಗಳಿಗೆ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ ಲಾಹೋರ್‌ನಿಂದ ರಸ್ತೆ ಮೂಲಕ ಎಧಿ ಫೌಂಡೇಷನ್ ಮೇಲ್ವಿಚಾರಣೆಯಲ್ಲಿ ಮೀನುಗಾರರನ್ನು ಭಾರತದ ಗಡಿಗೆ ಕರೆ ತರಲಾಯಿತು. ಎಧಿ ಫೌಂಡೇಷನ್, ಎಲ್ಲ ಮೀನುಗಾರರಿಗೆ ಸದ್ಭಾವನೆಯ ಪ್ರತೀಕವಾಗಿ ತಲಾ ಐದು ಸಾವಿರ ರೂಪಾಯಿಗಳನ್ನು ನೀಡಿತು. ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಐದು ವರ್ಷಗಳ ಜೈಲುವಾಸವನ್ನು ಈ ಮೀನುಗಾರರು ಅನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News