ಇಂಡೋನೇಶ್ಯಾ: ನೈಟ್ ಕ್ಲಬ್ ನಲ್ಲಿ ಘರ್ಷಣೆ; ಕನಿಷ್ಟ 19 ಮಂದಿ ಮೃತ್ಯು

Update: 2022-01-25 18:26 GMT
Photo: ndtv.com

ಜಕಾರ್ತ, ಜ.25: ಇಂಡೋನೇಶ್ಯಾದ ವೆಸ್ಟ್ ಪಪುವಾ ಪ್ರಾಂತದ ಸೊರೊಂಗ್‌ನಲ್ಲಿನ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಘರ್ಷಣೆ ಹಾಗೂ ಬಳಿಕ ನಡೆದ ಅಗ್ನಿ ಅನಾಹುತದಲ್ಲಿ ಕನಿಷ್ಟ 19 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಡಬಲ್ ಒ ನೈಟ್‌ಕ್ಲಬ್‌ನಲ್ಲಿ ಶನಿವಾರ 2 ವಿಭಿನ್ನ ಜನಾಂಗದ ಸದಸ್ಯರ ಮಧ್ಯೆ ಕ್ಲುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಸೋಮವಾರ ರಾತ್ರಿ ಈ ಪ್ರಕರಣಕ್ಕೆ ಸಂಬಂಧಿಸಿದ ವಾಗ್ವಾದ ಮುಂದುವರಿದು 2 ಸಮುದಾಯದವರು ಪರಸ್ಪರ ಮಚ್ಚು, ಬಾಣಗಳಿಂದ ಹೊಡೆದಾಡಿಕೊಂಡಿದ್ದಾರೆ. ಓರ್ವ ಚೂರಿ ಇರಿತದಿಂದ ಮೃತಪಟ್ಟಿದ್ದಾನೆ. ‌

ಘರ್ಷಣೆ ನಿರತರು ನೈಟ್‌ಕ್ಲಬ್‌ಗೆ ಬೆಂಕಿ ಇಟ್ಟಿದ್ದರಿಂದ ಕ್ಲಬ್‌ನ ಪ್ರಥಮ ಮಹಡಿಯಲ್ಲಿದ್ದವರು ಹೊರಬರಲಾಗದೆ ಕಂಗಾಲಾಗಿದ್ದು ಬೆಂಕಿಯ ಜ್ವಾಲೆಗೆ ಸಿಲುಕಿ 18 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿಯನ್ನು ರಕ್ಷಿಸಲಾಗಿದೆ ಎಂದು ಇಂಡೊನೇಶ್ಯಾದ ಪೊಲೀಸ್ ಇಲಾಖೆಯ ವಕ್ತಾರ ಅಹ್ಮದ್ ರಮಾಧಾನ್ ಹೇಳಿದ್ದಾರೆ.

ಘರ್ಷಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಧಾರ್ಮಿಕ ಮತ್ತು ಸಮುದಾಯದ ಮುಖಂಡರ ನೆರವಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಘರ್ಷಣೆ ಮತ್ತು ಅಗ್ನಿದುರಂತ ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ . ಸುದೀರ್ಘ ಕಾಲದಿಂದ ಅಶಾಂತ ಪರಿಸ್ಥಿತಿ ನೆಲೆಸಿರುವ ವೆಸ್ಟ್ ಪಪುವಾ ಪ್ರಾಂತದ ಸ್ಥಳೀಯರು ಈ ಘರ್ಷಣೆಯಲ್ಲಿ ಭಾಗಿಯಾಗಿಲ್ಲ . ನೈಟ್‌ಕ್ಲಬ್‌ನ ಪ್ರಥಮ ಮಹಡಿ ಬೆಂಕಿಯಿಂದ ಸುಟ್ಟುಹೋಗಿದೆ ಎಂದವರು ಹೇಳಿದ್ದಾರೆ.

ವಾಗ್ವಾದದಲ್ಲಿ ತೊಡಗಿದ್ದ ಗುಂಪನ್ನು ಶಾಂತಗೊಳಿಸಲು ಮತ್ತು ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಆ ಸಮುದಾಯದ ಮುಖಂಡರನ್ನು ಸ್ಥಳಕ್ಕೆ ಕರೆಸಿಕೊಂಡೆವು. ಆದರೆ ಅಷ್ಟರಲ್ಲೇ ಸಂಘರ್ಷ ಉಲ್ಬಣಿಸಿದೆ. ಈಗ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News