"ತಮಿಳುನಾಡಿನಲ್ಲಿ ಬಾಲಕಿ ಆತ್ಮಹತ್ಯೆಗೈದಿದ್ದು ಬಲವಂತದ ಮತಾಂತರದಿಂದಲ್ಲ, ಪಕ್ಷದ ಆರೋಪ ಸುಳ್ಳು: ಬಿಜೆಪಿ ಮುಖಂಡ

Update: 2022-01-25 13:58 GMT
Photo: Twitter

ಚೆನ್ನೈ: ತಮಿಳುನಾಡಿನ ತಂಜಾವೂರಿನಲ್ಲಿ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ಬಲವಂತದ ಮತಾಂತರ ಹುನ್ನಾರದ ಕಿರುಕುಳ ತಡೆಯಲಾಗದೇ ಆಕೆ ಆತ್ಮಹತ್ಯೆಗೈದಿದ್ದಳು ಎಂದು ತಮಿಳುನಾಡು ಬಿಜೆಪಿ ಸೇರಿದಂತೆ ದೇಶದಾದ್ಯಂತ ಬಿಜೆಪಿಗರು ಅಭಿಯಾನ ಪ್ರಾರಂಭಿಸಿದ್ದಾರೆ. ಈ ನಡುವೆ ತಮ್ಮ ಪಕ್ಷ ಮಾಡಿದ ಆರೋಪವನ್ನು ತಂಜಾವೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೇವಿಡ್‌ ನಿರಾಕರಿಸಿದ್ದು, ಪಕ್ಷದ ಆರೋಪ ಸುಳ್ಳು ಎಂದು ಹೇಳಿದ್ದಾಗಿ mirrornow ವರದಿ ಮಾಡಿದೆ.

"ಇದು ೧೦೦ ವರ್ಷ ಹಳೆಯ ಶಾಲೆಯಾಗಿದೆ. ಇಲ್ಲಿ ಕಲಿಯುತ್ತಿರುವ 65% ವಿದ್ಯಾರ್ಥಿಗಳು ಹಿಂದೂ ಧರ್ಮಕ್ಕೆ ಸೇರಿದ್ದರೆ ಉಳಿದಂತೆ ಮುಸ್ಲಿಂ, ಕ್ರೈಸ್ತ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ನೂರು ವರ್ಷಗಳ ಇತಿಹಾಸದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಮತಾಂತರವಾದ ದಾಖಲೆ ತೋರಿಸಲಿ. ನೂರು ವರ್ಷಗಳಲ್ಲಿ ಒಬ್ಬನನ್ನಾದರೂ ಮತಾಂತರ ಮಾಡಬಹುದಿತ್ತಲ್ಲವೇ? ಈ ಒಬ್ಬ ವಿದ್ಯಾರ್ಥಿಯ ಮತಾಂತರದಿಂದ ಧಾರ್ಮಿಕ ಸಭೆಗಾಗುವ ಲಾಭಗಳಾದರೂ ಏನು?" ಎಂದು ಅವರು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಪಕ್ಷ ಮಾಡುತ್ತಿರುವ ಅಪವಾದಗಳು ಸತ್ಯಕ್ಕೆ ದೂರವಾದದ್ದು. ಬಾಲಕಿಗೆ ಮನೆಯಲ್ಲಿ ಮಲತಾಯಿ ಚಿತ್ರಹಿಂಸೆ ನೀಡುತ್ತಿದ್ದರಿಂದ ಆಕೆ ಮನೆಗೆ ಬರಲು ಹೆದರುತ್ತಿದ್ದಳು. ಈ ಬಗ್ಗೆ ನಾವು ಸಂತ್ರಸ್ತೆ ಬಾಲಕಿಯ ಮನೆಗೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದೇವೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News