×
Ad

ರೈಲ್ವೇ ನೇಮಕಾತಿ ಎರಡನೇ ಹಂತದ ಪರೀಕ್ಷೆ ಖಂಡಿಸಿ ಭುಗಿಲೆದ್ದ ಪ್ರತಿಭಟನೆ: ಬೆಂಕಿಗೆ ಆಹುತಿಯಾದ ರೈಲು

Update: 2022-01-26 18:32 IST

ಪಾಟ್ನಾ, ಜ. 26: ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆರೋಪಿಸಿ ಆರ್‌ಆರ್‌ಬಿ ಎನ್‌ಟಿಪಿಸಿ (ತಂತ್ರಜ್ಞಾನೇತರ ಜನಪ್ರಿಯ ವರ್ಗ) ಪರೀಕ್ಷಾ ಆಕಾಂಕ್ಷಿಗಳು ಬುಧವಾರ ಬಿಹಾರದ ಗಯಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಕಲ್ಲೆಸೆದಿದ್ದಾರೆ. ನೇಮಕಾತಿ ಪರೀಕ್ಷೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಗಳವಾರ ನೋಟಿಸು ಜಾರಿ ಮಾಡಿದ್ದು, ಪ್ರತಿಭಟನೆ ಸಂದರ್ಭ ದಾಂಧಲೆ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಲ್ಲಿ ರೈಲ್ವೆ ನೇಮಕಾತಿ ಪಡೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಉದ್ಯೋಗ ಆಕಾಂಕ್ಷಿಗಳಿಗೆ ಎಚ್ಚರಿಸಿದೆ. ಈ ನಡುವೆ ಇಂದಿನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿರುವ ಗಯಾದ ಎಸ್‌ಎಸ್‌ಪಿ ಆದಿತ್ಯ ಕುಮಾರ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉದ್ಯೋಗಾಕಾಂಕ್ಷಿಗಳು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಶಾಂತಿ ಕಾಪಾಡುವಂತೆ ಉದ್ಯೋಗಾಕಾಂಕ್ಷಿಗಳಲ್ಲಿ ಮನವಿ ಮಾಡಿರುವ ಎಸ್‌ಎಸ್‌ಪಿ, ವಿದ್ಯಾರ್ಥಿಗಳು ಯಾರಿಂದಲೂ ಪ್ರಭಾವಕ್ಕೆ ಒಳಗಾಗಬಾರದು ಹಾಗೂ ಸರಕಾರಿ ಸೊತ್ತಿಗೆ ಹಾನಿ ಉಂಟು ಮಾಡಬಾರದು ಎಂದು ಹೇಳಿದ್ದಾರೆ. ಉದ್ಯೋಕಾಂಕ್ಷಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರೈಲ್ವೆ ತನ್ನ ಎನ್‌ಟಿಪಿಸಿ ಹಾಗೂ ಲೆವೆಲ್ 1 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಅಲ್ಲದೆ, ವಿವಿಧ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಅಡಿಯಲ್ಲಿ ಉತ್ತೀರ್ಣರಾದ ಹಾಗೂ ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರೂಪಿಸಿದೆ. ಎರಡೂ ಪಂಗಡಗಳ ಅಭಿಪ್ರಾಯವನ್ನು ಆಲಿಸಿದ ಬಳಿಕ ಸಮಿತಿ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News