ಮುಂಬೈ ದಾಳಿಯ ಅಪರಾಧಿಗಳಿಗೆ ಪಾಕಿಸ್ತಾನದ ಆಶ್ರಯ ಮುಂದುವರಿದಿದೆ: ವಿಶ್ವಸಂಸ್ಥೆಯಲ್ಲಿ ಭಾರತದ ಹೇಳಿಕೆ

Update: 2022-01-26 16:48 GMT
ಮುಂಬೈ ದಾಳಿ 26/11(file photo:PTI)

ವಿಶ್ವಸಂಸ್ಥೆ, ಜ.26: ಮುಂಬೈ ಮೇಲೆ 26/11ರಂದು ನಡೆದ ಘೋರ ಭಯೋತ್ಪಾದಕ ದಾಳಿ ಪ್ರಕರಣದ ಅಪರಾಧಿಗಳಿಗೆ ಪಾಕಿಸ್ತಾನದ ಆಶ್ರಯ ಮತ್ತು ಪೋಷಣೆ ಮುಂದುವರಿದಿದೆ . ವಿಶ್ವದಾದ್ಯಂತ ಹೆಚ್ಚಿನ ಭಯೋತ್ಪಾದಕ ದಾಳಿ ಪ್ರಕರಣದ ಮೂಲ ಒಂದಲ್ಲ ಒಂದು ರೀತಿಯಲ್ಲಿ ಪಾಕಿಸ್ತಾನದಲ್ಲಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಭಾರತ ತಿಳಿಸಿದೆ.

‘ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ’  ಎಂಬ ವಿಷಯದಲ್ಲಿ ಮಂಗಳವಾರ ನಡೆದ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರತಿನಿಧಿ ಮುನೀರ್ ಅಕ್ರಮ್ ಜಮ್ಮು-ಕಾಶ್ಮೀರ ವಿಷಯವನ್ನು ಮತ್ತು 370ನೇ ವಿಧಿ ರದ್ದತಿಯನ್ನು ಪ್ರಸ್ತಾವಿಸಿದ್ದರು. ಇದಕ್ಕೆ ಇದಿರೇಟು ನೀಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ನಿಯೋಗದ ಸಲಹೆಗಾರ ಆರ್. ಮಧುಸೂದನ್, ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ, ಸಕ್ರಿಯ ಬೆಂಬಲ ನೀಡುವ ಸ್ಥಾಪಿತ ಇತಿಹಾಸವನ್ನು ಹೊಂದಿದೆ. ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶವೆಂದು ಜಾಗತಿಕವಾಗಿ ಪರಿಗಣಿಸಲ್ಪಟ್ಟಿರುವ ಈ ದೇಶವು, ವಿಶ್ವಸಂಸ್ಥೆ ಭದ್ರತಾ ಸಮಿತಿ ನಿಷೇಧಿಸಿರುವ ಅತ್ಯಧಿಕ ಸಂಖ್ಯೆಯ ಉಗ್ರರಿಗೆ ಆಶ್ರಯ ನೀಡಿರುವ ಇಗ್ನೊನಬಲ್ ದಾಖಲೆಯನ್ನು ಹೊಂದಿದೆ ಎಂದರು.

ಭಾರತದ ಪ್ರತಿನಿಧಿ ಟಿ.ಎಸ್ ತ್ರಿಮೂರ್ತಿ ನಮ್ಮ ದೇಶದ ಹೇಳಿಕೆಯನ್ನು ಸಂವಾದದಲ್ಲಿ ಪ್ರಸ್ತುತಪಡಿಸಿದ್ದಾರೆ. ಆದರೆ, ಪಾಕ್ ಪ್ರತಿನಿಧಿ ನಮ್ಮ ದೇಶದ ವಿರುದ್ಧ ಪುನರಾವರ್ತಿತ ಕ್ಷುಲ್ಲಕ ಹೇಳಿಕೆ ನೀಡಿದ್ದರಿಂದ ತಾನು ಪ್ರತಿಕ್ರಿಯಿಸಬೇಕಾಗಿದೆ. ಪಾಕ್ ಪ್ರತಿನಿಧಿಯ ಹೇಳಿಕೆ ಸಾಮೂಹಿಕ ಖಂಡನೆಗೆ ಅರ್ಹವಾಗಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ನಾಗರಿಕರಿಗೆ ಭದ್ರತೆ ವಿಷಯದಲ್ಲಿ ಸಮಿತಿ ಚರ್ಚಿಸುತ್ತಿದೆ. ನಾಗರಿಕರಿಗೆ ಎದುರಾಗಿರುವ ದೊಡ್ಡ ಬೆದರಿಕೆ ಭಯೋತ್ಪಾದಕರಿಂದ ಬರುತ್ತದೆ. 2008ರಲ್ಲಿ ಮುಂಬೈ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಈಗಲೂ ಪಾಕ್ ಪ್ರತಿನಿಧಿಯ ದೇಶದ ಬೆಂಬಲ, ಆಶ್ರಯ ದೊರೆಯುತ್ತಿದೆ ಎಂದು ಮಧುಸೂದನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News