ತೆಲಂಗಾಣ: ಕೋವಿಡ್ ಪೀಡಿತ ಗರ್ಭಿಣಿಗೆ ಪ್ರವೇಶ ನಿರಾಕರಿಸಿದ ಆಸ್ಪತ್ರೆ; ವೈದ್ಯನ ಅಮಾನತು

Update: 2022-01-26 17:24 GMT
ಸಾಂದರ್ಭಿಕ ಚಿತ್ರ:PTI

ಹೈದರಾಬಾದ್,ಜ.26: ಕೊರೋನವೈರಸ್ ಸೋಂಕಿಗೆ ತುತ್ತಾಗಿದ್ದ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ರಾಜ್ಯದ ನಗರಕರ್ನೂಲ್ ಜಿಲ್ಲೆಯ ಅಚಂಪೇಟ್‌ನ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ದ ಆಸ್ಪತ್ರೆ ಅಧೀಕ್ಷಕ ಮತ್ತು ಕರ್ತವ್ಯನಿರತ ವೈದ್ಯನನ್ನು ಬುಧವಾರ ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಲಾಗಿದೆ.

ಮಂಗಳವಾರ ಸಿಎಚ್‌ಸಿಯಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಬಳಿಕ ಮಹಿಳೆ ಆಸ್ಪತ್ರೆಯ ಹೊರಗೆ ರಸ್ತೆಯಲ್ಲಿಯೇ ಮಗುವಿಗೆ ಜನನ ನೀಡಿದ್ದಳು.

ಹೆರಿಗೆಗಾಗಿ ಸಿಎಚ್‌ಸಿಗೆ ಬಂದಿದ್ದ ಚೆಂಚು ಬುಡಕಟ್ಟಿಗೆ ಸೇರಿದ ಮಹಿಳೆಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿ ಬೇರೆ ಯಾವುದಾದರೂ ಆರೋಗ್ಯ ಕೇಂದ್ರಕ್ಕೆ ತೆರಳುವಂತೆ ತಿಳಿಸಿದ್ದರು. ಹೆರಿಗೆಯ ಬಳಿಕ ಕೊನೆಗೂ ಮಹಿಳೆಯನ್ನು ಆಸ್ಪತ್ರೆಯೊಳಗೆ ಕರೆ ತರಲಾಗಿದ್ದು,ನವಜಾತ ಶಿಶು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಗರ್ಭಿಣಿಯರು ಕೋವಿಡ್ ಗೆ ಪಾಸಿಟಿವ್ ಆಗಿದ್ದರೆ ಅವರಿಗೆ ಪ್ರವೇಶವನ್ನು ನಿರಾಕರಿಸಬಾರದು ಎಂದು ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸ್ಪಷ್ಟ ನಿರ್ದೇಶಗಳನ್ನು ನೀಡಲಾಗಿತ್ತು ಎಂದು ತೆಲಂಗಾಣ ವೈದ್ಯ ವಿಧಾನ ಪರಿಷದ್ ಆಯುಕ್ತ ಡಾ.ಕೆ.ರಮೇಶ್ ರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News