ಮತಾಂತರ ನಿಷೇಧ ಕಾಯಿದೆ ಮನುಷ್ಯ, ಸಂವಿಧಾನ ವಿರೋಧಿ: ಸಂವರ್ಥ ಆರೋಪ

Update: 2022-01-26 18:02 GMT

ಉಡುಪಿ, ಜ.26: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ಕಾಯಿದೆ (ಮತಾಂತರ ನಿಷೇಧ ಕಾಯಿದೆ)ಯು ಮನುಷ್ಯ ವಿರೋಧಿ ಹಾಗೂ ಸಂವಿಧಾನ ವಿರೋಧಿ ಯಾಗಿದೆ ಎಂದು ಬರಹಗಾರ ಸಂವರ್ಥ ಆರೋಪಿಸಿದ್ದಾರೆ.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಹಾಗೂ ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) ಉಡುಪಿ ಜಿಲ್ಲಾ ಸಮಿತಿಗಳ ಆಶ್ರಯ ದಲ್ಲಿ ಬುಧವಾರ ನಗರದ ಹೊಟೇಲ್ ಸಾಯಿ ರೆಸಿಡೆನ್ಸಿ ಸಭಾಂಗಣದಲ್ಲಿ ಆಯೋಜಿಸಲಾದ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ಕಾಯಿದೆ 2021 ಹಾಗೂ ನಮ್ಮ ಸಂವಿಧಾನ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ವಿಷಯ ಮಂಡಿಸಿದರು.

ತಮಗೆ ಬೇಕಾದ ಧರ್ಮ, ನಂಬಿಕೆ, ಮತವನ್ನು ಸ್ವೀಕರಿಸುವ ಹಾಗೂ ಪ್ರಚಾರ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದರೆ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಉದ್ದೇಶದಿಂದ ಜಾರಿಗೆ ತರುತ್ತಿರುವ ಈ ಕಾಯಿದೆಯು  ಆಯ್ಕೆ ಸ್ವಾತಂತ್ರ ಹಾಗೂ ವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ದೂರಿದರು.

ಈ ಕಾಯಿದೆಯಲ್ಲಿ ಹಣ ನೀಡುವುದು ಮಾತ್ರವಲ್ಲ ಉಚಿತ ಶಿಕ್ಷಣ ನೀಡು ವುದು ಕೂಡ ಆಮಿಷ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಬಾಲಿಷ ವಾಗಿದೆ. ಉತ್ತಮ ಜೀವನ ಶೈಲಿಗಾಗಿ ಧರ್ಮ ಬದಲಾಯಿಸುವುದು ಕೂಡ ಮತಾಂತರ ಎಂದು ಹೇಳಲಾಗುತ್ತಿದೆ. ಇಂದು ಎಷ್ಟೋ ಮಂದಿ ತಮ್ಮ ಉತ್ತಮ ಜೀವನ ಶೈಲಿಗಾಗಿ ದೇಶವನ್ನೇ ಬದಲಾಯಿಸುತ್ತಾರೆ. ಹಾಗಿರುವಾಗ ಧರ್ಮ ಬದಲಾಯಿಸುವುದು ಹೇಗೆ ತಪ್ಪು ಆಗುತ್ತದೆ ಎಂದು ಅವರು ಪ್ರಶ್ನಿಸಿದರು.

ಈ ಮಸೂದೆ ಮನುಷ್ಯನ ನಂಬಿಕೆಯನ್ನು ಸರಿಯಾಗಿ ಅರ್ಥ ಮಾಡಿ ಕೊಂಡಿಲ್ಲ. ಮತಾಂತರಕ್ಕೆ ಕೇವಲ ಆಮಿಷ ಮಾತ್ರ ಕಾರಣವಾಗಿರುವುದಿಲ್ಲ. ಅದರ ಹಿಂದೆ ಅಪಮಾನ, ನೋವು, ನಂಬಿಕೆ ಕೂಡ ಇರುತ್ತದೆ. ಅದು ತನ್ನ ನಂಬಿಕೆಯನ್ನು ಬದಲಾಯಿಸುವುದೇ ಹೊರತು ಮತಾಂತರ ಅಲ್ಲ. ಈ ಮಸೂದೆ ಜಾರಿಗೆ ತರುವುದರ ಹಿಂದೆ ಕೆಲವು ಧರ್ಮದವರವನ್ನು ಅಪರಾಧಿಗಳನ್ನಾಗಿಸುವ ಹುನ್ನಾರ ಅಡಗಿದೆ ಎಂದು ಅವರು ಆರೋಪಿಸಿದರು.

ಜನರಲ್ಲಿ ಭಯದ ವಾತಾವರಣ ಸೃಷ್ಠಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಈ ಕಾಯಿದೆಯಲ್ಲಿ ಮದುವೆಗಾಗಿ ಮತಾಂತರ ಆಗುವುದು ತಪ್ಪು ಎಂದು ಹೇಳುವ ಮೂಲಕ ಒಬ್ಬ ವ್ಯಕ್ತಿಯ ಆಯ್ಕೆ ಸ್ವಾತಂತ್ರವನ್ನೇ ಕಸಿದುಕೊಳ್ಳಲಾಗುತ್ತಿದೆ. ಈ ಕಾಯಿದೆ ಪ್ರಕಾರ ಮತಾಂತರ ಆಗುವುದು ತಪ್ಪು. ಆದರೆ ಮರು ಮತಾಂತರ ಆಗುವುದು ತಪ್ಪಲ್ಲ. ಇದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ಈ ಮಸೂದೆಯಿಂದ ವ್ಯಕ್ತಿ ಸ್ವಾತಂತ್ರದ ಹರಣವಾಗುತ್ತಿದೆ. ಈ ಕಾಯಿದೆ ಪ್ರಕಾರ ಮತಾಂತರ ಆಗುವವರು 30 ದಿನಗಳ ಹಿಂದೆ ಘೋಷಣೆ ಮಾಡಬೇಕು ಮತ್ತು ಮತಾಂತರ ಆರೋಪ ಒಬ್ಬ ವ್ಯಕ್ತಿಯ ಮೇಲೆ ಬಂದರೆ, ಆ ವ್ಯಕ್ತಿಯೇ ನಾನು ಅಪರಾಧಿ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಇದು ಎರಡು ಅತ್ಯಂತ ಭಯಾನಕವಾದ ಅಂಶಗಳು ಎಂದು ಅವರು ಕಟುವಾಗಿ ಟೀಕಿಸಿದರು.

ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ವಹಿಸಿದ್ದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಸ್ವಾಗತಿಸಿದರು. ಕೋಶಾಧಿಕಾರಿ ಶಶಿಧರ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News