ಮತಗಳ ಮೇಲೆ ಕಣ್ಣಿಟ್ಟು ಬುದ್ಧದೇವ್ ಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ: ಟಿಎಂಸಿ

Update: 2022-01-27 16:52 GMT

ಕೋಲ್ಕತಾ, ಜ. 27 : ರಾಜ್ಯದಲ್ಲಿ ಎಡಪಕ್ಷಗಳ ಮತಗಳ ಮೇಲೆ ಬಿಜೆಪಿ ಕಣ್ಣಿರಿಸಿರುವುದರಿಂದ ಕೇಂದ್ರ ಸರಕಾರ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿದೆ  ಎಂದು ಪಶ್ಚಿಮಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬುಧವಾರ ಹೇಳಿದೆ.

ಪದ್ಮಭೂಷಣ ಪ್ರಶಸ್ತಿಗೆ ಭಟ್ಟಾಚಾರ್ಯರ ಹೆಸರನ್ನು ಘೋಷಿಸಿರುವುದು ಸಿಪಿಐ (ಎಂ) ಹಾಗೂ ಬಿಜೆಪಿ ನಡುವಿನ ಹೊಂದಾಣಿಕೆಯನ್ನು ಬಹಿರಂಗಪಡಿಸಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಪ್ರತಿಪಾದಿಸಿದ್ದಾರೆ. ‘‘ಕೆಲವು ವಿಷಯಗಳು ನಾವು ನೋಡುವುದಕ್ಕಿಂತ ತುಂಬಾ ಭಿನ್ನವಾಗಿರುತ್ತದೆ. ಬಿಜೆಪಿ ಭಟ್ಟಾಚಾರ್ಯರನ್ನು ಇದ್ದಕ್ಕಿದ್ದಂತೆ ಆಯ್ಕೆ ಮಾಡಿರುವುದು ಯಾಕೆ? ಇದು ಸಿಪಿಐ (ಎಂ) ಹಾಗೂ ಬಿಜೆಪಿಯ ಹೊಂದಾಣಿಕೆಯನ್ನು ಸೂಚಿಸುತ್ತದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಉದ್ದೇಶವನ್ನು ಈ ನಡೆ ಹೊಂದಿದೆ’’ ಎಂದು ಅವರು ತಿಳಿಸಿದರು.

ಈ ಹೇಳಿಕೆ ಕುರಿತಂತೆ ಟಿಎಂಸಿಯನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಘೋಷ್ ಅವರ ಹೇಳಿಕೆ ಆಡಳಿತಾರೂಢ ಪಕ್ಷ ಪ್ರತಿಯೊಂದರಲ್ಲಿ ವಿವಾದವನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ತೋರಿಸಿದೆ ಎಂದಿದೆ.

‘‘ಭಟ್ಟಾಚಾರ್ಯ ಅವರು ಸಮಾಜ ಹಾಗೂ ರಾಜಕೀಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಸರಕಾರ ಆಯ್ಕೆ ಮಾಡಿದೆ. ಅವರು ಸುಸಂಸ್ಕೃತ ವ್ಯಕ್ತಿ ಎಂದು ಪರಿಚಿತರಾಗಿದ್ದಾರೆ ಹಾಗೂ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ’’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮುಜುಂದಾರ್ ಅವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News