ನಾರಾಯಣ ಗುರುಗಳ ಕ್ರಾಂತಿಕಾರಿ ಚಳವಳಿಗಳು

Update: 2022-01-28 04:56 GMT

ಭಾಗ- 01

ಮೂರ್ತೆಗಾರಿಕೆ ಈಳವ ಸಮಾಜಕ್ಕೆ ಅಭಿಶಾಪವಾಗಿತ್ತು. ಈಳವರು ದೇವಸ್ಥಾನದಿಂದ ಬಹಿಷ್ಕೃತರಾಗಲು ಮತ್ತು ಅಸ್ಪಶ್ಯರಾಗಲು ಅವರ ಈ ಉಪವೃತ್ತಿ ಒಂದು ಪ್ರಬಲ ಕಾರಣವಾಗಿತ್ತು. ಅಲ್ಲದೆ ಈ ವೃತ್ತಿ ಈಳವರ ಮೂಲಭೂತವಾದ ಸಂಸ್ಕಾರಗಳ ಅಧಃಪತನಕ್ಕೂ ಕೆಲವುಮಟ್ಟಿಗೆ ಕಾರಣವಾಗಿತ್ತು. ಮದ್ಯವ್ಯಸನದಿಂದ ಮುಕ್ತಿಪಡೆಯದೆ ಸಮಾಜದ ಮುನ್ನಡೆ ಕಷ್ಟವೆಂದು ಮನಗಂಡ ಗುರುಗಳು ಈ ವೃತ್ತಿಯನ್ನು ತ್ಯಜಿಸಲು ಕರೆಕೊಟ್ಟರು. ನಾರಾಯಣ ಗುರುಗಳ ಮದ್ಯನಿಷೇಧದ ಕರೆಯನ್ನು ಮುಂದೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ದೇಶವ್ಯಾಪಿ ಚಳವಳಿಯಾಗಿ ನಡೆಸಿತು.

ಯಾವುದೇ ಸಮಾಜ ಪ್ರಗತಿಯಾಗಬೇಕಾದರೆ ಆರ್ಥಿಕ ಬಲ, ಶಿಕ್ಷಣ, ಸಂಘಟನೆ, ಅನ್ನೋನ್ಯತೆ, ಉತ್ತಮ ಸಂಸ್ಕಾರ ಮತ್ತು ಗುರಿ ಬೇಕು. ಇವುಗಳನ್ನು ಸಾಧಿಸಬೇಕಾದರೆ ಮೊದಲು ಸಮಾಜದಲ್ಲಿಯ ಅಂಧವಿಶ್ವಾಸಗಳು, ಅಹಿತಕರ ಚಟಗಳು, ದುಂದುವೆಚ್ಚಗಳಿಂದ ಆ ಸಮಾಜ ಮುಕ್ತವಾಗಬೇಕು. ಆತ್ಮವಿಶ್ವಾಸ ಬೆಳೆಯಬೇಕು. ಇದಕ್ಕಾಗಿ ನಾರಾಯಣ ಗುರುಗಳು ಸಮಾಜದ ಯೋಗ್ಯ ತರುಣರನ್ನು ಆರಿಸಿ, ಅವರಿಗೆ ತರಬೇತಿಕೊಡಿಸಿ ಸಮಾಜ ಸುಧಾರಣೆಯ ಕ್ರಾಂತಿಕಾರಿ ಕಹಳೆಯನ್ನು ಊದಿದರು.

ಮೂರ್ತೆಗಾರಿಕೆ ಈಳವ ಸಮಾಜಕ್ಕೆ ಅಭಿಶಾಪವಾಗಿತ್ತು. ಈಳವರು ದೇವಸ್ಥಾನದಿಂದ ಬಹಿಷ್ಕೃತರಾಗಲು ಮತ್ತು ಅಸ್ಪಶ್ಯರಾಗಲು ಅವರ ಈ ಉಪವೃತ್ತಿ ಒಂದು ಪ್ರಬಲ ಕಾರಣವಾಗಿತ್ತು. ಅಲ್ಲದೆ ಈ ವೃತ್ತಿ ಈಳವರ ಮೂಲಭೂತವಾದ ಸಂಸ್ಕಾರಗಳ ಅಧಃಪತನಕ್ಕೂ ಕೆಲವುಮಟ್ಟಿಗೆ ಕಾರಣವಾಗಿತ್ತು. ಮದ್ಯವ್ಯಸನದಿಂದ ಮುಕ್ತಿಪಡೆಯದೆ ಸಮಾಜದ ಮುನ್ನಡೆ ಕಷ್ಟವೆಂದು ಮನಗಂಡ ಗುರುಗಳು ಈ ವೃತ್ತಿಯನ್ನು ತ್ಯಜಿಸಲು ಕರೆಕೊಟ್ಟರು. ನಾರಾಯಣ ಗುರುಗಳ ಮದ್ಯನಿಷೇಧದ ಕರೆಯನ್ನು ಮುಂದೆ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ದೇಶವ್ಯಾಪಿ ಚಳವಳಿಯಾಗಿ ನಡೆಸಿತು.

ತೊಟ್ಟಿಲ ಮದುವೆ, ಬಾಲ್ಯವಿವಾಹ, ಬಹುಪತ್ನಿತ್ವ, ವರದಕ್ಷಿಣೆ, ದುಂದುವೆಚ್ಚಗಳಿಂದ ಕೂಡಿದ ವಿವಾಹ ಕ್ರಮಗಳು ಸಮಾಜದ ಆರ್ಥಿಕ ಮತ್ತು ನೈತಿಕ ದಿವಾಳಿತನಕ್ಕೆ ಸಾಕಷ್ಟು ಕಾರಣಗಳಾಗಿದ್ದವು. ಅವುಗಳಿಂದ ಸಮಾಜವನ್ನು ಮುಕ್ತಗೊಳಿಸಿದರು. ಶಿಶುಗಳು ಭವಿಷ್ಯದ ಸಮಾಜ, ಆರೋಗ್ಯವಂತ ಮಕ್ಕಳು ಸಮಾಜದ ಬಹುಮೂಲ್ಯ ಆಸ್ತಿ, ಆದ್ದರಿಂದ ಶಿಶುಗಳ ಆರೈಕೆಯನ್ನು ಸರಿಯಾಗಿ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎನ್ನುವುದು ಗುರುಗಳ ಉಪದೇಶವಾಗಿತ್ತು.

ಮದ್ಯಪಾನ ನಿಷೇಧ

 ತೆಂಗಿನ ಮರದ ಕೊನೆಯನ್ನು ಹೆಂಡ ಇಳಿಸಲು ಹದ ಮಾಡುವಾಗ ತಿರುಗಿಸಿ, ತಿರುಗಿಸಿ ಹೊಡೆಯುತ್ತಿದ್ದುದರಿಂದ ಈಳವರನ್ನು ‘ಕೊಟ್ಟಿ’ಗಳೆಂದು ಅನ್ಯ ಜನಾಂಗದವರು ಪರಿಹಾಸ್ಯ ಮಾಡುತ್ತಿದ್ದರು. ಕೊಟ್ಟುಕ ಎಂದರೆ ತಿರುಗಿಸಿ ಹೊಡೆ ಎಂದರ್ಥ. ಹೆಂಡ ಇಳಿಸುವ ಉಪವೃತ್ತಿಯನ್ನಾಗಿಸಿಕೊಂಡ ಕೇವಲ ಅಲ್ಪಸಂಖ್ಯೆಯ ಈಳವರಿಂದ ಇಡೀ ಸಮುದಾಯವು ಅನ್ಯ ಸಮುದಾಯದವರಿಂದ ಹೀಯಾಳಿಕೆಗೆ ಬಲಿಯಾಗಿದ್ದಿತ್ತು. ಮೂರ್ತೆಗಾರಿಕೆ ಮಾಡಬಾರದೆಂದು ಈಳವರಿಗೆ ಗುರುಗಳು ಕರೆ ಕೊಟ್ಟರು. ಕಳ್ಳು ತೆಗೆಯುವುದೇ ಈ ಜನಾಂಗಕ್ಕೆ ಒಂದು ಶಾಪವಾಗಿದೆ ಎಂದರು. ಮೂರ್ತೆಗಾರಿಕೆ ಮಾಡುವವರು ತಮ್ಮ ಜನಾಂಗದ ಇನ್ನಿತರರು ಬಹುಕಾಲದಿಂದ ಮಾಡಿಕೊಂಡು ಬರುತ್ತಿದ್ದ ಗುಡಿಕೈಗಾರಿಕೆ, ಹುರಿ ಹಗ್ಗ, ಬೇಸಾಯ, ನೇಯ್ಗೆ ಮುಂತಾದ ಕೆಲಸಗಳನ್ನು ಪರ್ಯಾಯವಾಗಿ ಮಾಡಬಹುದೆಂದು ಹೇಳಿಕೆ ಕೊಟ್ಟರು. ಯಾರು ಮೂರ್ತಗಾರಿಕೆಯನ್ನು ಬಿಡಲು ಒಪ್ಪುವುದಿಲ್ಲವೋ ಅವರನ್ನು ಸಮಾಜದಿಂದ ಬಹಿಷ್ಕರಿಸಬೇಕು ಎನ್ನುವ ಕಠಿಣತಮವಾದ ನಿಲುವನ್ನು ತೆಗೆದುಕೊಳ್ಳಲು ಗುರುಗಳು ಹಿಂಜರಿಯಲಿಲ್ಲ. ರೋಗಗ್ರಸ್ಥ ಸಮಾಜವನ್ನು ಸ್ವಸ್ಥಪಡಿಸಬೇಕಾದರೆ ಇಂತಹ ಕೆಲವು ಕಠಿಣವಾದ ಹೆಜ್ಜೆಗಳು ಅಗತ್ಯವಾಗುತ್ತವೆ. ಆದ್ದರಿಂದ ಗುರುಗಳು 1921ರ ಅವರ ಜನ್ಮದಿನದ ಆಚರಣೆಯ ಸಂದರ್ಭಲ್ಲಿ ‘‘ಮದ್ಯವು ವಿಷ, ಅದನ್ನು ಉತ್ಪಾದಿಸಬೇಡಿ, ಮಾರಬೇಡಿ, ಕುಡಿಯಬೇಡಿ. ಮದ್ಯಸೇವನೆಯಿಂದ ಮಾನವ ಪಶುವಾಗುತ್ತಾನೆ. ಅವನ ವಿವೇಚನಾ ಶಕ್ತಿ ಹಾಳಾಗುತ್ತದೆ. ಆರೋಗ್ಯ ಕೆಡುತ್ತದೆ. ಸಂಪತ್ತು ಕ್ಷಯಿಸುತ್ತದೆ. ಸಮಾಜ ಧ್ವಂಸ ಮಾಡುವ ಅಸುರೀ ಶಕ್ತಿಯುಳ್ಳ ಮದ್ಯವನ್ನು ಉತ್ಪಾದಿಸುವುದರಿಂದಲೇ ನೀವು ನೀಚ ಜಾತಿಯವರಾಗಿದ್ದೀರಿ. ಸಾತ್ವಿಕ ಜೀವನ ಮಾರ್ಗಗಳನ್ನನುಸರಿಸಿ ಇತರರ ಆದರಕ್ಕೆ ಪಾತ್ರರಾಗಿ....ಈ ಹೀನವಾದ ಕಾರ್ಯವನ್ನು ಕೂಡಲೇ ಕೈ ಬಿಡಿರಿ’’ ಎಂದು ಆದೇಶ ಮಾಡಿದರು.

ಅದೇ ಸಭೆಯಲ್ಲಿ ಮುಂದುವರಿದು ‘‘ಹೆಂಡ ಇಳಿಸುವವನ ಶರೀರವೂ, ವಸ್ತ್ರವೂ ಅವನು ಮುಟ್ಟಿದ ಎಲ್ಲಾ ವಸ್ತುಗಳೂ ದುರ್ವಾಸನೆ ಪಡೆಯುತ್ತವೆ’ ಎಂದು ಹೇಳಿದರು. ಮತ್ತೊಂದು ಸಂದರ್ಭದಲ್ಲಿ ‘‘ಹೆಂಡ ಇಳಿಸುವುದು ಪ್ಲೇಗಿನ ಹಾಗೆ. ಕುಷ್ಟ ರೋಗದಿಂದ ಶರೀರದ ಅಂಗವು ಬಾಧಿಸಲ್ಪಟ್ಟರೆ ಸಂಪೂರ್ಣ ಶರೀರವೇ ಏಷಮಯವಾಗುವುದು. ಅದೇ ರೀತಿಯಲ್ಲಿ ಕೆಲವು ಹೆಂಡ ಇಳಿಸುವವರು ಸಂಪೂರ್ಣ ಸಮಾಜವನ್ನೇ ವಿಷಮಯವನ್ನಾಗಿ ಮಾಡು ತ್ತಾರೆ. ರೋಗದಿಂದ ಬಾಧಿತ ವಾದ ಅಂಗವನ್ನು ನಾವು ಕಡಿದು ಹಾಕುವಂತೆ, ಈ ಹೆಂಡ ಇಳಿಸುವವರನ್ನು ಸಮಾಜದಿಂದ ತೆಗೆದು ಹಾಕಬೇಕು. ಅವರೊಡನೆ ನಾವು ಯಾವುದೇ ರೀತಿಯ ಸಾಮಾಜಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು. ಅವರು ಆ ವೃತ್ತಿ ಬಿಟ್ಟ ಮೇಲೆ ನಮ್ಮ ಸಮಾಜದಲ್ಲಿ ಅವರನ್ನು ಸೇರಿಸಿ ಕೊಳ್ಳಬಹುದು.’’ ಗುರುಗಳ ಈ ಆದೇಶಕ್ಕೆ ಮೂರ್ತೆಗಾರ ಈಳವರು ಹೆದರಿದರು. ಗುರುಗಳ ಆಜ್ಞೆಯ ಮೇರೆಗೆ ತಿರುವಾಂಕೂರಿನ ಈಳವರು ಮೂರ್ತೆಗಾರಿಕೆಯನ್ನು ಪೂರ್ಣ ತ್ಯಜಿಸಿಬಿಟ್ಟರು. ನೂರಾರು ಮದ್ಯವ್ಯಸನಿಗಳು ಗುರುಗಳಲ್ಲಿಗೆ ಬಂದು ಮದ್ಯಸೇವನೆಯನ್ನು ತ್ಯಜಿಸುವ ಪ್ರತಿಜ್ಞೆ ಮಾಡುತ್ತಿದ್ದರು. ಗ್ರಾಮ ಗ್ರಾಮಗಳಿಂದ ಹೆಂಡ ಇಳಿಸುವವರು ಗುಂಪು ಗುಂಪಾಗಿ ಗುರುಗಳ ಬಳಿ ಬಂದು ಪ್ರತಿಜ್ಞಾ ಬದ್ಧರಾಗಿ ಹೆಂಡ ಇಳಿಸುವ ಕೆಲಸವನ್ನು ಬಿಟ್ಟು ಬಿಡುತ್ತಿದ್ದರು. ಶತಮಾನಗಳಿಂದ ಈಳವರು ತಮ್ಮ ಕುಲಕಸಬು ಎಂದು ನಂಬಿ ಮಾಡುತ್ತಿದ್ದ ಹೆಂಡ ಇಳಿಸುವ ಉದ್ಯೋಗವನ್ನು ಗುರುಗಳ ಒಂದು ಮಾತಿನಿಂದ ತ್ಯಜಿಸಲು ಸಿದ್ಧರಾದದ್ದು ಇಡೀ ತಿರುವಾಂಕೂರೇ ನಿಬ್ಬೆರಗಾಗಿ ಕಾಣುವಂತಾಯಿತು.

ಆನಂತರದ ಕಾಲದಲ್ಲಿ ಗುರುಗಳ ಅನುಯಾಯಿಯಾದ ಟಿ.ಕೆ. ಮಾಧವನ್, ಮಹಾತ್ಮಾ ಗಾಂಧೀಜಿಯವರು ಆರಂಭಿಸಿದ ಮದ್ಯಪಾನ ನಿಷೇಧ ಚಳವಳಿಯಲ್ಲಿ ಸಕ್ರಿಯರಾಗಿ ಕೇರಳದ ಮೂಲೆ ಮೂಲೆಗಳಲ್ಲಿ ಪ್ರಚಾರದಲ್ಲಿ ತೊಡಗಿದರು. ಮದ್ಯಪಾನ ನಿಷೇಧ ತಿರುವಾಂಕೂರಿನಲ್ಲಿ ಯಶಸ್ಸು ಪಡೆದಷ್ಟು ದೇಶದ ಯಾವುದೇ ಭಾಗಗಳಲ್ಲಿಯೂ ಯಶಸ್ಸು ಪಡೆಯಲಿಲ್ಲ. ತಿರುವಾಂಕೂರಿನ ಈಳವರು ಅಂದಿನಿಂದ ಇಂದಿನ ತನಕ ಹೆಂಡ ಇಳಿಸುತ್ತಿಲ್ಲ, ಸಾಮಾಜಿಕ ಸುಧಾರಣೆ ಮತ್ತು ಪರಿವರ್ತನೆಯ ಆರಂಭದಲ್ಲಿಯೇ ಇದೊಂದು ಮಹತ್ತರ ಹೆಜ್ಜೆಯಾಯಿತು. ಈಳವರು ಗೃಹೋದ್ಯೋಗ, ಬೇಸಾಯ, ತೆಂಗಿನ ನಾರಿನ ಕೈಗಾರಿಕೆ, ಬಟ್ಟೆ ನೇಯ್ಗೆ ಮುಂತಾದವುಗಳಿಗೆ ಹೆಚ್ಚು ಒತ್ತುಕೊಟ್ಟರು. ಅರುವಿಪ್ಪುರದ ಶಿವಾಲಯದ ಬದಿಯಲ್ಲಿಯೇ ಕೈಮಗ್ಗ ತರಬೇತಿಯ ಕೇಂದ್ರವೊಂದನ್ನು ತೆರೆದರು. ಅಲ್ಲಿ ಅನೇಕರಿಗೆ ಕೆಲಸಗಳೂ ಸಿಕ್ಕಿದವು. ನೂರಾರು ಜನರು ಕೈಮಗ್ಗದಿಂದ ಬಟ್ಟೆ ನೇಯುವ ಕೆಲಸವನ್ನು ಈ ತರಬೇತಿ ಕೇಂದ್ರದಲ್ಲಿ ಕಲಿತು ಸ್ವಯಂ ಉದ್ಯೋಗಿಗಳಾದರು.

ನಾಗಪೂಜೆ ನಿಷೇಧ

ನಾಗಾರಾಧನೆ ಪ್ರಪಂಚದ ಬಹುತೇಕ ಎಲ್ಲ ಆದಿ ಜನಾಂಗ ಮತ್ತು ಪ್ರಾಚೀನ ಸಂಸ್ಕೃತಿಗಳಲ್ಲಿ ಕಂಡುಬರುವ ನಂಬಿಕೆ ಹಾಗೂ ಪೂಜಾ ವಿಧಾನವಾಗಿದೆ. ನಾಗಗಳು ಕಾಮ ರೂಪಿಗಳೆಂದು, ದೇವತೆಗಳಂತೆ ವಿಶೇಷ ಶಕ್ತಿ ಸಾಮರ್ಥ್ಯಶಾಲಿಗಳೆಂದು, ವರ/ಶಾಪ ಕೊಡಲು ಸಮರ್ಥವಾದುವುಗಳೆಂದು, ಅವುಗಳದ್ದೇ ಆದ ನಾಗಲೋಕ ಒಂದಿದ್ದು, ಅಲ್ಲಿಯ ಭೋಗಾವತಿಯ ನಿವಾಸಿಗಳೆಂದು ಹಿಂದೂ ಪುರಾಣಗಳಲ್ಲಿ ಉಕ್ತವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಇತಿಹಾಸ ಪೂರ್ವ ಯುಗದಿಂದಲೂ ಗ್ರೀಕ್, ಮೆಸಪೊಟೇಮಿಯಾ, ರೋಮ್, ಈಜಿಪ್ಟ್ ಮುಂತಾದ ಪ್ರಾಚೀನ ಸಂಸ್ಕೃತಿಗಳಲ್ಲಿ ನಾಗಪೂಜೆ ಪ್ರಚಲಿತವಿತ್ತು, ಅಮೆರಿಕದ ಇಂಕ, ಮಾಯಾ, ಪ್ಯೂಬ್ಲೋ ಇಂಡಿಯನ್‌ರೇ ಮೊದಲಾದ ಆದಿ ಜನಾಂಗಗಳಲ್ಲಿ ಮತ್ತು ಆಫ್ರಿಕ, ಆಸ್ಟ್ರೇಲಿಯಾದ ಅನೇಕ ಕಡೆಗಳಲ್ಲಿ ನಾಗಪೂಜೆ ಪ್ರಚಲಿತವಿತ್ತು. ಅಮೆರಿಕದ ಆದಿ ಜನಾಂಗಗಳಾದ ಪ್ಯೂಬ್ಲೋ ಇಂಡಿಯನ್ನರು ಎರಡು ವರ್ಷಕ್ಕೊಮ್ಮೆ ಒಂಭತ್ತು ದಿನಗಳ ಪರ್ಯಂತ ಮುಖಕ್ಕೆ ಕಪ್ಪು, ಕೆಂಪು, ಬಿಳಿ ಬಣ್ಣ ಬಳಿದುಕೊಂಡು ಬಾಯಲ್ಲಿ ಹಾವನ್ನು ಕಚ್ಚಿಕೊಂಡು ಕುಣಿಯುವ ಹಬ್ಬ ಆಚರಿಸುತ್ತಾರೆ. ಕುಣಿತದಲ್ಲಿ ಉಪಯೋಗಿಸಿದ ಹಾವುಗಳನ್ನು ನಾಲ್ದೆಸೆಗಳಿಗೆ ಬಿಡುತ್ತಾರೆ. ಅವುಗಳು ಮಳೆ ದೇವತೆಗೆ ಸಂದೇಶ ಮುಟ್ಟಿಸಿ ಅದರಿಂದ ಸರಿಯಾಗಿ ಮಳೆ ಬರುತ್ತದೆ ಎನ್ನುವುದು ನಂಬಿಕೆ. ಮಹಾರಾಷ್ಟ್ರದ ಕೆಲವೆಡೆ ನಾಗರ ಪಂಚಮಿಯಂದು ಸರ್ಪಗಳನ್ನು ಹಿಡಿದು ತಂದು ಪೂಜಿಸಿ ಬಿಡುವ ಸಂಪ್ರದಾಯವಿದೆ. ಅಸ್ಸಾಮಿನಲ್ಲಿ ನಾಗನಿಗೆ ನರಬಲಿ ಕೊಡುವ ಸಂಪ್ರದಾಯವಿತ್ತು.

2,700 ಜಾತಿಯ ನಾನಾ ಬಣ್ಣ, ಗಾತ್ರದ ಹಾವುಗಳಿದ್ದರೂ ನಾಗನಿಗೆ ಮಾತ್ರ ಈ ಪೂಜೆ ಪುರಸ್ಕಾರಗಳು. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಹೆಬ್ಬಾವು ಪೂಜೆಗೆ ಒಳಗಾಗುವುದುಂಟು. ಕರಾವಳಿ ಕರ್ನಾಟಕದಲ್ಲಿ ತರ ತರದ ಸರ್ಪ ಪೂಜೆಗಳು ಪ್ರಚಲಿತದಲ್ಲಿವೆ. ಆಶ್ಲೇಷ ಬಲಿ, ನಾಗ ಸಂಸ್ಕಾರ, ನಾಗ ಮಂಡಲಗಳು ಬಹು ಖರ್ಚಿನವುಗಳು. ಇತ್ತೀಚೆಗೆ ನಾಗ ಪೂಜೆ ಮತ್ತು ನಾಗ ದೋಷ ಮಿತಿ ಮೀರಿ ಬಡವರ ದುಡಿಮೆಯನ್ನು ಕಬಳಿಸುತ್ತಿವೆ. ನಾಗ ಪೂಜೆಗಳು ಶ್ರೀಮಂತರ ದೊಡ್ಡಸ್ತಿಕೆ ಪ್ರದರ್ಶನಕ್ಕೂ ದಾರಿ ಮಾಡಿಕೊಟ್ಟಿದೆ. ನಾಗ ಪೂಜೆಗಳು ಕೊನೆಗೊಳ್ಳುವುದು ಅಥವಾ ಸರಳೀಕರಣಗೊಳ್ಳುವ ಅಗತ್ಯವಿದೆ.

ಗುರುಗಳ ಕಾಲದಲ್ಲಿ ಕೇರಳದಲ್ಲಿ ನಾಗ ಪೂಜೆ ಬಹು ಖರ್ಚಿನದ್ದಾಗಿತ್ತು. ನಾಗ ದೋಷ ಪರಿಹಾರ ಮತ್ತು ಸಂತಾನಕ್ಕಾಗಿ ನಾಗನ ನಾನಾ ತರದ ಪೂಜೆಗಳು ನಡೆಯುತ್ತಿದ್ದವು. ಅವುಗಳಲ್ಲಿ ‘ಸರ್ಪಂ ಕಳಿ’ ಮತ್ತು ‘ಸರ್ಪಂ ತುಳ್ಳಲ್’ ಎನ್ನುವ ನಾಗಪೂಜೆಯು ಬಹು ಖರ್ಚಿನದ್ದಾಗಿದ್ದವು. ಇದನ್ನು ‘ಪುಲ್ಲವರ್’ ಎನ್ನುವ ಜನಾಂಗದವರು ಮಾಡಿಸಿಕೊಡುತ್ತಾರೆ. ಕದ್ರು ಸಂತಾನವಾದ ಸರ್ಪಗಳ ಮತ್ತು ವಿನತಿಯ ಮಗ ಗರುಡನ ಕತೆಯನ್ನು ಒಳಗೊಂಡ ‘ಪುಲ್ಲವರ್ ಪಾಟ್’ ಎನ್ನುವ ಹಾಡಿನೊಂದಿಗೆ ನಡೆಯುವ ಮಂಡಲ ಪೂಜೆಯಲ್ಲಿ ಪುಲ್ಲವರ್ ಸರ್ಪದ ವೇಷಧಾರಿಗಳಾಗಿ ಆವೇಶಕ್ಕೆ ಒಳಗಾಗಿ ನೃತ್ಯ ಮಾಡಿ ನುಡಿ ಕೊಡುತ್ತಾರೆ.

ಸರ್ಪಂ ತುಳ್ಳಲ್ ಕರಾವಳಿ ಕರ್ನಾಟಕದ ನಾಗಮಂಡಲದಂತಹ ಪೂಜೆ. ಇದಕ್ಕೆ ವೃಕ್ಷಸಹಿತವಾದ ನಾಗಮಂಡಲ, ಕುಂದಾಪುರದ ಕಡೆಗಳಲ್ಲಿಯ ಮೇರರ ಕಾಡ್ಯನಾಟದ ಮಂಡಲದಲ್ಲೂ ವೃಕ್ಷವಿರುತ್ತದೆ. ಕಾಡ್ಯನಾಟದ ಮಂಡಲ ಮತ್ತು ಸರ್ಪಂ ಕಳಿ ಮಂಡಲಗಳಲ್ಲಿ ನಾಗ ಮತ್ತು ವೃಕ್ಷ ವಿನ್ಯಾಸಗಳಲ್ಲಿ ಭಿನ್ನವಾಗಿರುತ್ತವೆ. ನಾಗಮಂಡಲ ಮತ್ತು ಸರ್ಪಂ ಕಳಿ ಮಂಡಲಗಳಲ್ಲಿ ಸಾಮ್ಯತೆ ಹೆಚ್ಚು. ವೃಕ್ಷಕ್ಕೂ ಸರ್ಪಕ್ಕೂ ಅನಾದಿ ನಂಟು. ಕಪ್ಪು, ಹಸಿರು, ಕಿತ್ತಳೆ, ಕಂದು ಮತ್ತು ಬಿಳಿ ಬಣ್ಣದ ಮಂಡಲ. ಪುಲ್ಲವರೇ ಮಂಡಲ ಬರೆಯುವವರು. ಹೂವು, ಹಣ್ಣುಗಳನ್ನಿಟ್ಟು ದೀಪ, ದೂಪ, ಆರತಿಗಳಿಂದ ಮಂಡಲದ ಪೂಜೆ ಮಾಡುವರು. ಮಂಡಲದ ಒಂದು ಭಾಗದಲ್ಲಿ ನಾಗನ ಕಲ್ಲನ್ನು ಇಟ್ಟು ಹೂವನ್ನು ಅರ್ಪಿಸುವರು. ನಾಗನ ಹೆಡೆಯ ಮುಂಭಾಗದಲ್ಲಿ ಹಾಲು ಮತ್ತು ಮೊಟ್ಟೆಯ ಮಿಶ್ರಣ ಇಡುವರು. ಬಲ ಭಾಗದಲ್ಲಿ ಗೊನೆಯುಳ್ಳ ಬಾಳೆ ನೆಡುವರು, ಎಡ, ಬಲಗಳಲ್ಲಿ ಭಕ್ತಿ ತುಂಬಿದ ಕಳಸೆಗಳನ್ನಿಟ್ಟು, ಹಿಂಗಾರ ಹೂವನ್ನಿಟ್ಟು ನಾಲ್ಕು ಕಡೆಗಳಲ್ಲಿ ದೀಪ ಹಚ್ಚಿಡುವರು. ಮಂಡಲ ನೃತ್ಯಕ್ಕೆ ಮೊದಲು ವಿಶೇಷ ವಾದ್ಯಗಳೊಡನೆ ಪುಲ್ಲವರ್ ಪಾಟ್ ಹಾಡುವರು. ನಿಧಾನವಾಗಿ ಪಾತ್ರಿಗೆ ಆವೇಶ ಬರುವುದು, ಪುರುಷನೊಬ್ಬ ನಾಗನನ್ನು ಪ್ರತಿನಿಧಿಸಿದರೆ, ಒಬ್ಬಳು ಸ್ತ್ರೀ ನಾಗಿಣಿ ಆಗುವಳು. ಎಳೆಯ ಹೆಣ್ಣು ಮಕ್ಕಳು ನಾಗನ ಮರಿಗಳಾಗಿ ನೃತ್ಯ ಮಾಡುವರು. ನಾಗನ ಪಾತ್ರಧಾರಿಗೆ ಆವೇಶವಾದಾಗ ಹಾಲು, ಮೊಸರು, ಸಿಹಿಯಾಳದಿಂದ ಅಭಿಷೇಕ ಮಾಡುತ್ತಾರೆ. ಆವೇಶಗೊಂಡ ನಾಗನ ಪಾತ್ರಿ ಖಡ್ಗವನ್ನು ಹಿಡಿದು ಬದಿಯಲ್ಲಿ ನೆಟ್ಟ ಬಾಳೆಗಿಡವನ್ನು ಕಡಿದು ನಾಗನ ಕಲ್ಲಿಗೆ ಅರ್ಪಿಸುವನು. ನಂತರ ತೆವಳಿಕೊಂಡು ಹೋಗಿ ನಾಗನ ಹೆಡೆಯ ಬದಿಯಲ್ಲಿಟ್ಟ ತತ್ತಿ ಮಿಶ್ರಣದ ಹಾಲನ್ನು ಕುಡಿಯುತ್ತಾನೆ. ಕರಾವಳಿ ಕರ್ನಾಟಕದಲ್ಲಿ ನಾಗ ಮಂಡಲದಲ್ಲಿ ಶುದ್ಧ ಶಾಖಾಹಾರ ಇದ್ದರೆ ಇಲ್ಲಿ ಮಂಡಲ ಪೂಜೆಯಲ್ಲಿ ನಾಗ ಪಾತ್ರಿ ಬೇಯಿಸಿದ ಮೊಟ್ಟೆ ತಿಂದು, ಹಾಲು ಮೊಟ್ಟೆಯ ಮಿಶ್ರಣವನ್ನು ಕುಡಿಯುತ್ತಾನೆ.

ಕೇರಳದಲ್ಲಿ ನಾಗ ಪೂಜೆಯನ್ನು ಹೆಂಗಸರೇ ಹೆಚ್ಚಾಗಿ ಮಾಡುವುದು. ನಾಯರ್ ತಮ್ಮ ‘ಪಾಂಪಿನ್ ಕಾವ್’ ಅಂದರೆ ನಾಗ ಬನದಲ್ಲಿ ‘ಪಾಂಪಿನ್ ತುಳ್ಳಲ್’ ಎನ್ನುವ ಪೂಜೆ ನಡೆಸುತ್ತಾರೆ. ಈ ಪೂಜೆ ಮಾಡುವವರು ಪುಲ್ಲವರೇ ಆಗಿರುತ್ತಾರೆ. ಈ ಸಮಯದಲ್ಲಿ ಮನೆಯ ಹೆಂಗಸರ ಮೇಲೆ ನಾಗನ ಆವೇಶ ಆಗುವುದೂ ಇದೆ. ಈಳವರ ಮನೆಯ ಬದಿಯಲ್ಲೂ ಸರ್ಪಂ ಕಾವು ಇರುತ್ತದೆ. ಸಾಯಂಕಾಲ ದೀಪ ಹಚ್ಚಿಡುತ್ತಾರೆ. ಸರ್ಪ ಪೂಜೆಯನ್ನು ಸಂತಾನಾಪೇಕ್ಷೆಯಿಂದ ಮಾಡುವುದೇ ಹೆಚ್ಚು. ಸರ್ಪದೋಷ ಪರಿಹಾರಕ್ಕೆ ನಾನಾ ತರದ ಪೂಜೆಗಳು ಕೇರಳದಲ್ಲಿ ಪ್ರಚಲಿತವಿದ್ದವು. ನಾರಾಯಣ ಗುರುಗಳ ಕಾಲದಲ್ಲಿ ಕೇರಳದಲ್ಲಿ ಈ ಸರ್ಪಗಳ ಉಪದ್ರ ಬಹಳವಿತ್ತು, ಗುರುಗಳು ನಾಗ ಪೂಜೆ, ನಾಗಮಂಡಲ, ಬಹು ಖರ್ಚಿನ ಪೂಜಾ ವಿಧಿಗಳಾದುದರಿಂದ ಈ ಅಂಧಾನುಕರಣೆಗಳನ್ನು ನಿಲ್ಲಿಸಲು ಕರೆ ಕೊಟ್ಟರು. ಸರ್ಪ ಪೂಜೆಗೆ ಬಹಿಷ್ಕಾರ ಹಾಕಿದರು. ಕೆಲವು ಊರುಗಳಲ್ಲಿಯ ಬನಗಳಲ್ಲಿದ್ದ ಸರ್ಪ ಶಿಲೆಗಳನ್ನು ಕೀಳಿಸಿ ಹೊಳೆಗೆ, ಕೆರೆಗೆ ಬಿಸಾಡಿಸಿದರು. ಆ ಊರ ಜನರನ್ನು ಕರೆದು ಇನ್ನು ಮುಂದೆ ಸರ್ಪಗಳಿಂದ ನಿಮಗೇನೂ ತೊಂದರೆ ಬಾರದು ಎಂದು ಹೇಳುತ್ತಿದ್ದರು. ನಾರಾಯಣ ಗುರುಗಳ ಪ್ರಭಾವದಿಂದ ಕೇರಳದಲ್ಲಿಯ ನಾಗ ದರ್ಶನ, ನಾಗಪೂಜೆ, ನಾಗಮಂಡಲ, ನಾಗಶಿಲಾ ಪ್ರತಿಷ್ಠೆಗಳು ಇತಿಹಾಸ ಸೇರಿ ಹೋದವು.

 ಕೃಪೆ: ‘ಶ್ರೀ ನಾರಾಯಣ ಗುರು ವಿಜಯ ದರ್ಶನ’ ಗ್ರಂಥ

Writer - ಬಾಬು ಶಿವ ಪೂಜಾರಿ

contributor

Editor - ಬಾಬು ಶಿವ ಪೂಜಾರಿ

contributor

Similar News