ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಅನುದಾನ ಹೆಚ್ಚಳದ ತುರ್ತು ಅಗತ್ಯ

Update: 2022-01-28 06:54 GMT

ಭಾರತದ ಆರ್ಥಿಕ ನೀತಿಯ ಗಮನಾರ್ಹ ದೋಷಗಳ ಪೈಕಿ ಒಂದು, ಆರೋಗ್ಯ ಕ್ಷೇತ್ರಕ್ಕೆ ಅಗತ್ಯಕ್ಕಿಂತ ಕಡಿಮೆ ಅನುದಾನವನ್ನು ಒದಗಿಸುವುದು. ಆರೋಗ್ಯ ಕ್ಷೇತ್ರದಲ್ಲಿನ ಕನಿಷ್ಠ ಗುರಿಯನ್ನು ಸಾಧಿಸಬೇಕಾದರೂ ಕೇಂದ್ರ ಮತ್ತು ರಾಜ್ಯಗಳು ಮಾಡುವ ಒಟ್ಟು ವಾರ್ಷಿಕ ಖರ್ಚು ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ ಕನಿಷ್ಠ 2.5 ಶೇಕಡಾವಾದರೂ ಇರಬೇಕು ಎಂಬುದಾಗಿ ಹೇಳಲಾಗಿದೆ. ಈ ಬದ್ಧತೆಯನ್ನು 2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲೂ ವ್ಯಕ್ತಪಡಿಸಲಾಗಿದೆ. ಈ ಗುರಿಯನ್ನು 2025ರ ವೇಳೆಗೆ ಸಾಧಿಸುವ ಆಶಯವನ್ನು ಅದರಲ್ಲಿ ವ್ಯಕ್ತಪಡಿಸಲಾಗಿದೆ.

ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ಪ್ರಶಂಸೆಗೆ ಒಳಗಾಗಿರುವ ದೇಶಗಳು ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿವೆ ಹಾಗೂ ಖರ್ಚು ಮಾಡಿವೆ. ಭಾರತೀಯರ ನೈಜ ಅಗತ್ಯಗಳನ್ನು ಪೂರೈಸಲು ಹಾಗೂ ಹಿಂದಿನ ಬಾಕಿಗಳನ್ನು ಸರಿದೂಗಿಸಲು ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಆರೋಗ್ಯ ಕ್ಷೇತ್ರದಲ್ಲಿ ಖರ್ಚು ಮಾಡಬೇಕಾಗಿದೆ. ಹಾಗಾಗಿ, 2025ರ ವೇಳೆಗೆ ಆರೋಗ್ಯ ಕ್ಷೇತ್ರಕ್ಕೆ ಜಿಡಿಪಿಯ 2.5 ಶೇಕಡಾದಷ್ಟು ಅನುದಾನವನ್ನು ಒದಗಿಸುವುದು ತುಂಬಾ ಹಿಂದೆಯೇ ಆಗಬೇಕಾದ ಕಾರ್ಯವೊಂದರ ಮೊದಲ ಹೆಜ್ಜೆ ಹಾಗೂ ಮಹತ್ವದ ಸುಧಾರಣೆಯಷ್ಟೇ ಆಗಿರುತ್ತದೆ.

ನಾವೀಗ ವಾಸ್ತವಿಕ ಸಾಧನೆಗಳನ್ನು ಗಮನಿಸೋಣ. 2019-20ರಲ್ಲಿ ಕೇಂದ್ರ ಮತ್ತು ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಖರ್ಚು ಜಿಡಿಪಿಯ ಕೇವಲ 1.6 ಶೇಕಡಾ. ಉನ್ನತ ಮಟ್ಟದ ಗುಂಪೊಂದು ಈ ನಿಟ್ಟಿನಲ್ಲಿ ಮಾರ್ಗನಕ್ಷೆಯೊಂದನ್ನು ತಯಾರಿಸಿ 15ನೇ ಹಣಕಾಸು ಆಯೋಗಕ್ಕೆ ವರದಿ ನೀಡಿತು. 2025ರಲ್ಲಿ 2.5 ಶೇಕಡಾದ ಗುರಿಯನ್ನು ತಲುಪಬೇಕಾದರೆ ಪ್ರತಿ ವರ್ಷ ಆರೋಗ್ಯ ಕ್ಷೇತ್ರಕ್ಕೆ ಮಾಡುವ ಖರ್ಚನ್ನು ಎಷ್ಟು ಹೆಚ್ಚಿಸಬೇಕು ಎನ್ನುವುದನ್ನು ಈ ಮಾರ್ಗನಕ್ಷೆಯು ನಮಗೆ ಸ್ಥೂಲವಾಗಿ ಹೇಳುತ್ತದೆ. ಇದರ ಪ್ರಕಾರ, 2021-22ರ ಸಾಲಿನಲ್ಲಿ ಆರೋಗ್ಯಕ್ಷೇತ್ರದಲ್ಲಿ ಮಾಡಬೇಕಾಗಿರುವ ಖರ್ಚು ಸುಮಾರು 1.3 ಲಕ್ಷ ಕೋಟಿ ರೂಪಾಯಿ ಅಥವಾ ಜಿಡಿಪಿಯ 0.68 ಶೇಕಡಾ. ಆದರೆ ದುರದೃಷ್ಟವಶಾತ್ ಆರೋಗ್ಯ ಕ್ಷೇತ್ರಕ್ಕೆ ಈ ಸಾಲಿನಲ್ಲಿ ನೀಡಲಾಗಿರುವ ಅನುದಾನ ಕೇವಲ 76,902 ಕೋಟಿ ರೂಪಾಯಿ. ಈ ಮೊತ್ತವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆಯುಷ್ ಸಚಿವಾಲಯ ಹಂಚಿಕೊಳ್ಳಬೇಕಾಗಿದೆ.

ಹಿಂದಿನ 2020-21ರ ಅವಧಿಯಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ವ್ಯಾಪಿಸಿದ್ದಾಗ, ಕೇಂದ್ರ ಸರಕಾರವು ಆರೋಗ್ಯ ಕ್ಷೇತ್ರಕ್ಕಾಗಿನ ಪರಿಷ್ಕೃತ ಅಂದಾಜನ್ನು 16,000 ಕೋಟಿ ರೂಪಾಯಿಗಳಷ್ಟು ವಿಸ್ತರಿಸಿತು. ಕೋವಿಡ್-19 ಸಾಂಕ್ರಾಮಿಕವೇ ಈ ಪರಿಷ್ಕೃತ ಅಂದಾಜು ವಿಸ್ತರಣೆಗೆ ಕಾರಣ. ಆದರೆ, ಮುಂದಿನ ಸಾಲಿನ ಪರಿಷ್ಕತ ಅಂದಾಜು ರೂಪಿಸುವಾಗ ಅನುದಾನವು ಸುಮಾರು 10 ಶೇಕಡಾದಷ್ಟು ಕಡಿತಗೊಂಡಿತು.

ಆರೊಗ್ಯ ಕ್ಷೇತ್ರಕ್ಕೆ ಕೇಂದ್ರ ಸರಕಾರದ ಅನುದಾನ ಕಳೆದ 7 ವರ್ಷಗಳಲ್ಲಿ ಶೇ. 1.97 ಮತ್ತು ಶೇ. 2.5ರ ನಡುವಿದೆ. ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ 2021-22ರಲ್ಲಿ ಒದಗಿಸಲಾಗಿರುವುದು 2.21 ಶೇಕಡ ಮಾತ್ರ ಎಂದು ತಿಳಿಯಲು ನೋವಾಗುತ್ತದೆ. ಇದಕ್ಕೆ ಹೋಲಿಸಿದರೆ, 2017-18ರಲ್ಲಿ ಆರೊಗ್ಯ ಕ್ಷೇತ್ರಕ್ಕೆ 2.55 ಶೇಕಡ ಅನುದಾನ ನೀಡಲಾಗಿತ್ತು. ಹಾಗಾದರೆ, ನಾವು ಕನಿಷ್ಠ ಆ ದಿಕ್ಕಿನಲ್ಲಾದರೂ ಮುಂದುವರಿಯುತ್ತೇವೆಯೇ?

 ಆರೋಗ್ಯ ಕ್ಷೇತ್ರದಲ್ಲಿ ಖರ್ಚು ಮಾಡುವ ಹಣದ ಪ್ರಮಾಣವನ್ನು ಗಣನೀಯವಾಗಿ ಏರಿಸಬೇಕೆಂಬ ಬೇಡಿಕೆಗೆ ಸರಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ದೇಶದಲ್ಲಿ ಸದೃಢ ಆರೋಗ್ಯ ಮೂಲಸೌಕರ್ಯ ಇದ್ದಿದ್ದರೆ ಕೊರೋನ ವೈರಸ್ ಸಾಂಕ್ರಾಮಿಕ ತಂದೊಡ್ಡಿದ ಅಪಾರ ಹಾನಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದಾಗಿತ್ತು ಎಂಬ ಸ್ಪಷ್ಟ ಸಂದೇಶವಿರುವ ಹೊರತಾಗಿಯೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹಣ ಖರ್ಚು ಮಾಡಲು ಸರಕಾರ ತಯಾರಿಲ್ಲ. ಭಾರತದಲ್ಲಿ ಸರಕಾರಿ ಬೆಡ್‌ಗಳು ದೊರೆಯುವುದು 1,000 ಜನರ ಪೈಕಿ ಕೇವಲ 0.55 ಜನರಿಗೆ ಮಾತ್ರ. ಇದು ಪ್ರತಿ 1,000 ಜನರಿಗೆ 5 ಬೆಡ್‌ಗಳು ಸಿಗಬೇಕೆಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಾನದಂಡಕ್ಕಿಂತ ತುಂಬಾ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 23 ಉಪ ಕೇಂದ್ರಗಳ ಕೊರತೆಯಿದೆ, ಶೇ. 28 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯಿದೆ ಹಾಗೂ ಶೇ. 37 ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆಯಿದೆ ಎಂಬುದಾಗಿ ಇತ್ತೀಚಿನ ಸರಕಾರಿ ಅಂಕಿ-ಅಂಶಗಳು ಹೇಳಿವೆ. ಅದೂ ಅಲ್ಲದೆ, ಮಂಜೂರಾಗಿರುವ ಹುದ್ದೆಗಳ ನೇಮಕಾತಿಯ ವೇಳೆ ಈ ಗ್ರಾಮೀಣ ಆರೋಗ್ಯ ಕೇಂದ್ರಗಳು ಪರಿಣತ ವೈದ್ಯರ ಕೊರತೆಯನ್ನು ಎದುರಿಸುತ್ತಿರುವುದು ಎದ್ದು ಕಾಣುತ್ತಿದೆ. ಇದು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಲ್ಲಿ ತೀವ್ರ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಪರಿಣತ ವೈದ್ಯರ ಕೊರತೆಯಿರುವುದು ಕಳವಳಕ್ಕೆ ಕಾರಣವಾಗಿದೆ.

ಹಾಗಾಗಿ, ಮುಂಬರುವ 2022-23ರ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುವ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ತುರ್ತು ಅಗತ್ಯವಿದೆ.

ಕೃಪೆ : countercurrents.org

Writer - ಭರತ್ ಡೋಗ್ರಾ

contributor

Editor - ಭರತ್ ಡೋಗ್ರಾ

contributor

Similar News