ಪರ್ಯಾಯ ಮಹೋತ್ಸವದ ಶುಚಿತ್ವ ಗುತ್ತಿಗೆ : 23 ಲಕ್ಷ ರೂ. ಮೊತ್ತದ ಪ್ಯಾಕೇಜ್‌ ನಲ್ಲಿ ಅವ್ಯವಹಾರ

Update: 2022-01-28 13:32 GMT

ಉಡುಪಿ, ಜ.28: ಉಡುಪಿ ಪರ್ಯಾಯ ಮಹೋತ್ಸವದ ಶುಚಿತ್ವ ಕಾರ್ಯಕ್ಕೆ ಸಂಬಂಧಿಸಿ ಉಡುಪಿ ನಗರಸಭೆಯಿಂದ ನೀಡಲಾದ ಗುತ್ತಿಗೆಯಲ್ಲಿ ಅವ್ಯವಹಾರ ಎಸಗಲಾಗಿದೆ ಎಂದು ನಗರಸಭೆ ಸದಸ್ಯರು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ್ದಾರೆ.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್ ಅಂಚನ್ ಹಾಗೂ ಸಂತೋಷ್ ಜತ್ತನ್ನ, ಪರ್ಯಾಯ ಶುಚಿತ್ವ ಕಾರ್ಯದ ಗುತ್ತಿಗೆಗೆ 23ಲಕ್ಷ ರೂ. ಮೊತ್ತದ ಪ್ಯಾಕೇಜ್ ನೀಡಲಾಗಿದೆ. ಆದರೆ ಗುತ್ತಿಗೆದಾರರು ಅಷ್ಟು ಮೊತ್ತದ ಕೆಲಸ ಮಾಡಿಲ್ಲ ಎಂದು ದೂರಿದರು.

ಬೆಳಗ್ಗೆ 50 ಮತ್ತು ಸಂಜೆ 50 ಮಂದಿಯನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾ ಗಿತ್ತು. ಆದರೆ ಗುತ್ತಿಗೆದಾರರು ಕೇವಲ 20 ಮಂದಿಯಿಂದ ಕೆಲಸ ಮಾಡಿಸಿದ್ದಾರೆ. 1000ಕೆ.ಜಿ. ಬ್ಲಿಚಿಂಗ್ ಪೌಡರ್, 400 ಬುಟ್ಟಿ, ಪೊಕರೆಗಳನ್ನು ಪೂರೈಸಿಲ್ಲ. ಆರು ಟಿಪ್ಪರ್‌ಗಳಲ್ಲಿ ಕೇವಲ ಎರಡು ಟಿಪ್ಪರ್, ನಾಲ್ಕು ಏಸ್ ವಾಹನಗಳಲ್ಲಿ ಒಂದು ಮಾತ್ರ ಬಳಸಿಕೊಳ್ಳಲಾಗಿದೆ. ಕೈ ಗಾಡಿಯನ್ನು ಗುತ್ತಿಗೆದಾರರೇ ನೀಡಬೇಕು ಎಂದು ಇದ್ದರೂ ನಗರಸಭೆಯಿಂದ ಒದಗಿಸಲಾಗಿದೆಂದು ಅವರು ಆರೋಪಿಸಿದರು.

ಜ.5ರಿಂದ 21ರವರೆಗೆ ಒಟ್ಟು 100 ಮಂದಿ 15 ದಿನಗಳ ಕಾಲ 1289 ಮಂದಿಯ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿ ಕರುಣಾಕರ್ ಮಾಹಿತಿ ನೀಡಿದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. 23ಲಕ್ಷ ರೂ. ಪ್ಯಾಕೇಜ್ ನೀಡಿದರೂ ಗುತ್ತಿಗೆದಾರರು ಎಷ್ಟು ಕೆಲಸ ಮಾಡಿದ್ದಾರೆಂದು ಪರಿಶೀಲಿಸಿ, ಅಷ್ಟು ಬಿಲ್ ಮಾತ್ರ ಪಾಸ್ ಮಾಡಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಮಾಲಕರ ವಿರುದ್ಧ ಕ್ರಮ

ತಮ್ಮ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ನೀಡುವ ಮಾಲಕರ ಸಭೆ ಕರೆದು, ಬಾಡಿಗೆದಾರರಿಗೆ ಶೌಚಾಲಯ, ಸ್ನಾನಗೃಹ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚನೆ ನೀಡಿದ್ದೇವೆ. ಅವರು ಎರಡು ತಿಂಗಳೊಳಗೆ ಶೌಚಾ ಲಯ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ನಮ್ಮ ತಂಡ ಆ ಶೆಡ್‌ಗಳಿಗೆ ತೆರಳಿ ಸರ್ವೆ ನಡೆಸಿ ವರದಿ ನೀಡಲಿದೆ. ಶೌಚಾಲಯ ನಿರ್ಮಿಸದ ಹಾಗೂ ಶುಚಿತ್ವ ಕಾಪಾಡದ ಮಾಲಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದ್ದಾರೆ.

ಮಲ್ಪೆ ಸೆಂಟ್ರಲ್ ವಾರ್ಡ್‌ನಲ್ಲಿ ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಸದಸ್ಯೆ ಎಡ್ಲಿನ್ ಕರ್ಕಡ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈಗ ಹಾಕಿರುವ ಕಸವನ್ನು ಮಲ್ಪೆ ಅಭಿವೃದ್ಧಿ ಸಮಿತಿಯಿಂದ ತೆರವುಗೊಳಿಸಲಾಗು ವುದು. ಮುಂದೆ ಕಸ ಎಸೆಯುವ ವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು. ಈಗಾಗಲೇ ರಸ್ತೆ ಬದಿ ಕಸ ಎಸೆಯುವವರನ್ನು ಗುರುತಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಮುಂದೆ ಮಲ್ಪೆಯಲ್ಲೂ ಇದೇ ರೀತಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಕರುಣಾಕರ್ ತಿಳಿಸಿದರು.

ಅನಧಿಕೃತ ಲಾಡ್ಜ್ ವಿರುದ್ಧ ಕ್ರಮ

ಸದಸ್ಯ ಗಿರೀಶ್ ಅಂಚನ್ ಮಾತನಾಡಿ, ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ ದಲ್ಲಿರುವ ಅನಧಿಕೃತ ಲಾಡ್ಜ್ ಕಾನೂನನ್ನು ಗಾಳಿಗೆ ತೂರಿ ಒಳಚರಂಡಿಯಲ್ಲಿ ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿದೆ. ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಈ ಮಧ್ಯೆ ಲಾಡ್ಜ್ ನಡೆಸುತ್ತಿರುವ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ನಗರಸಭೆ ವಾಹನಗಳಿಗೆ ಶಕ್ತಿ ಇಂಧನ ಬಿಟ್ಟು ಕೇವಲ ದುರಸ್ತಿಗಾಗಿ ಒಂದು ಕೋಟಿ ರೂ.ವರೆಗೆ ವ್ಯಯ ಮಾಡಲಾಗುತ್ತಿದೆ. ನಗರಸಭೆ ಹಣ ಒಟ್ಟಾರೆ ಖರ್ಚು ಆಗುವುದನ್ನು ತಡೆಯಬೇಕು ಎಂದು ವಿಜಯ ಕೊಡವೂರು ಸಭೆಯಲ್ಲಿ ತಿಳಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ವಾಹನದ ಸಣ್ಣ ಬಿಡಿಭಾಗ ಹೋದರೂ ಬೆಂಗಳೂರಿನಿಂದ ಬರುವವರೆಗೆ ಕಾಯಬೇಕಾಗುತ್ತದೆ. ಅದಕ್ಕಾಗಿ ನಗರಸಭೆ ಯಿಂದಲೇ ಮೆಕ್ಯಾನಿಕ್ ಒಬ್ಬರನ್ನು ನೇಮಕ ಮಾಡಿಕೊಂಡು ಸಣ್ಣಪುಟ್ಟ ದುರಸ್ತಿ ಗಳನ್ನು ಇಲ್ಲೇ ಮಾಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಂಬಲಪಾಡಿ- ಕರಾವಳಿ ಬೈಪಾಸ್ ವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ದೀಪ ಅಳವಡಿಸಿದರೂ ರಾತ್ರಿ ವೇಳೆ ಉರಿಯುತ್ತಿಲ್ಲ. ಇದರಿಂದ ಕರಾವಳಿ ಬೈಪಾಸ್‌ನಿಂದ ಮಣಿಪಾಲ ಇನ್ ಹೊಟೇಲ್‌ವರೆಗಿನ ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ರಮೇಶ್ ಕಾಂಚನ್, ಸುಂದರ್ ಜಿ.ಕಲ್ಮಾಡಿ ದೂರಿದರು.

ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡು ತಿಂಗಳೊಳಗೆ ದೀಪದ ವ್ಯವಸ್ಥೆ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಭರವಸೆ ನೀಡಿದ್ದಾರೆ ಎಂದು ಪೌರಾಯುಕ್ತರು ತಿಳಿಸಿದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಕಳೆದ ಒಂದು ವರ್ಷಗಳಿಂದ ಇರುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮುಂದಿನ ಸಭೆಗೆ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಉಪಸ್ಥಿತರಿದ್ದರು.

ಬಿಆರ್‌ಎಸ್ ಆಸ್ಪತ್ರೆ ಹೊಂಡ ಮುಚ್ಚಲು ಆಗ್ರಹ

ನಗರಸಭೆ ಕಚೇರಿ ಎದುರಿನ ಬಿ.ಆರ್.ಶೆಟ್ಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮಾಡಿ ರುವ ಹೊಂಡವನ್ನು ಕೂಡಲೇ ಮುಚ್ಚಬೇಕು. ಇಲ್ಲದಿದ್ದರೆ ಕೆ.ಎಂ.ಮಾರ್ಗ ಹಾಗೂ ಸಮೀಪದ ಕಟ್ಟಡಗಳಿಗೆ ಅಪಾಯ ಇದೆ ಎಂದು ಕೃಷ್ಣರಾವ್ ಕೊಡಂಚ ಎಚ್ಚರಿಸಿದರು.

ಜಾಗ ಬಿ.ಆರ್.ಶೆಟ್ಟಿ ಅವರ ಹೆಸರಿನಲ್ಲಿರುವುದರಿಂದ ನಗರಸಭೆ ಮುಚ್ಚಲು ಆಗುವುದಿಲ್ಲ ಎಂದು ಪೌರಾಯುಕ್ತರು ಸ್ಪಷ್ಟನೆ ನೀಡಿದರು. ಈ ಸಂಬಂಧ ಜಿಲ್ಲಾಸರ್ಜನ್‌ಗೂ ಪತ್ರ ಬರೆಯಲಾಗಿದೆ. ಅವರು ಕೂಡ ಈ ಜಾಗ ನಮಗೆ ಸಂಬಂಧಪಟ್ಟಿಲ್ಲ, ಆದುದರಿಂದ ಮುಚ್ಚಲು ಆಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಪೌರಾಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News