ತಮಿಳುನಾಡಿನಲ್ಲಿ ದೇವಸ್ಥಾನ ಧ್ವಂಸದ ಕುರಿತು ಸುಳ್ಳು ಟ್ವೀಟ್: ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ವಿರುದ್ಧ ಪ್ರಕರಣ

Update: 2022-01-28 13:38 GMT
ವಿನೋಜ ಪಿ.ಸೆಲ್ವಂ(photo:twitter/@VinojBJP)
 

ಚೆನ್ನೈ,ಜ.28: ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿನೋಜ ಪಿ.ಸೆಲ್ವಂ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ದಂಗೆಯನ್ನುಂಟು ಮಾಡುವ ಉದ್ದೇಶ ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಹಿಂದು ಧರ್ಮವನ್ನು ದಮನಿಸಲಾಗುತ್ತಿದೆ ಮತ್ತು 200+ ದಿನಗಳಲ್ಲಿ 130+ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಸೆಲ್ವಂ ತನ್ನ ಟ್ವೀಟ್‌ನಲ್ಲಿ ಆಪಾದಿಸಿದ್ದರು.

ಜ.27ರಂದು ಸೆಲ್ವಂ ಪೋಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ ’ಗಣತಂತ್ರ ದಿನದಂದು ತಮಿಳಗಂ ಎಂದು ಕೂಗುತ್ತ ಕಪ್ಪು ಬಾವುಟವನ್ನು ಹಾರಿಸಿದ್ದವರಿಂದ 130ಕ್ಕೂ ಅಧಿಕ ಪವಿತ್ರ ದೇವಸ್ಥಾನಗಳು ಧ್ವಂಸಗೊಂಡಿವೆ’ ಎಂದು ಹೇಳಲಾಗಿತ್ತು. ಫೆ.19ರಂದು ರಾಜ್ಯಾದ್ಯಂತ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯನ್ನು ಉತ್ತೇಜಿಸಲು ಮತ್ತು ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿಯೂ ಈ ಟ್ವೀಟ್ ಮಾಡಲಾಗಿತ್ತು. 

ಟ್ವೀಟ್ ಕಾರ್ಟೂನ್ ಒಂದನ್ನೂ ಒಳಗೊಂಡಿದ್ದು, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಂತೆ ಬಿಂಬಿಸಲಾದ ವ್ಯಕ್ತಿಯ ಹಿಂಭಾಗವನ್ನು ಮತ್ತು ಹಿನ್ನೆಲೆಯಲ್ಲಿ ಕ್ರೇನ್ ಬಳಸಿ ದೇವಸ್ಥಾನವೊಂದನ್ನು ನೆಲಸಮ ಮಾಡುತ್ತಿರುವುದನ್ನು ತೋರಿಸುತ್ತಿದೆ. ಚಿತ್ರಕ್ಕೆ ‘200+ ದಿನಗಳು,130+ ದೇವಸ್ಥಾನಗಳು. ಇನ್ನೂ ಎಣಿಕೆ ನಡೆಯುತ್ತಿದೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಕಿಲ್ಪಾಕ್ ನಿವಾಸಿ ಇಳಂಗೋವನ್ ಎನ್ನುವವರ ದೂರಿನ ಮೇರೆಗೆ ಸೆಲ್ವಂ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೆನ್ನೈನ ಹಾರ್ಬರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಸೆಲ್ವಂ ಡಿಎಂಕೆಯ ಪಿ.ಕೆ.ಶೇಖರ ಬಾಬು ಅವರಿಂದ ಸೋಲನ್ನುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News