ವಿಮಾನದಲ್ಲಿ ಅನಾರೋಗ್ಯಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದ ಡಾ. ಝಕರಿಯಾ ಅಬ್ಬಾಸ್‌

Update: 2022-01-28 13:48 GMT

ಹೊಸದಿಲ್ಲಿ: ಚಲಿಸುತ್ತಿದ್ದ ವಿಮಾನದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿ ಯುವ ವೈದ್ಯರೊಬ್ಬರು ನಿಜವಾದ ಹೀರೋ ಎನಿಸಿಕೊಂಡಿದ್ದಾರೆ. ಈ ಕುರಿತು ಬೆಂಗಳೂರಿನ ವೈದ್ಯ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಯುವ ವೈದ್ಯ ಝಕರಿಯಾ ಅಬ್ಬಾಸ್‌ ಶಾರ್ಜಾದಿಂದ ಬಾಗ್ದಾದ್‌ ಹೋಗುವ ವಿಮಾನ ಹತ್ತಿದ್ದರು. ದಾರಿ ಮಧ್ಯೆ 30 ರ ಹರೆಯದ ಯುವಕರೋರ್ವರಿಗೆ ಅನಾರೋಗ್ಯ ಕಂಡುಬಂದಿದ್ದು, ವಿಮಾನ ಪರಿಚಾರಕಿಯರು ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಎಂದು ಪರೀಕ್ಷಿಸಿದ್ದಾರೆ. 

ಈ ವೇಳೆ ಅದೇ ವಿಮಾನದಲ್ಲಿ ಸಂಚರಿಸುತ್ತಿದ್ದ ಝಕರಿಯಾ ಅಬ್ಬಾಸ್‌ ಪರಿಚಾರಕಿಯರ ಕರೆಗೆ ಓಗೊಟ್ಟು, ಅನಾರೋಗ್ಯಕ್ಕೆ ಈಡಾಗಿದ್ದ ವ್ಯಕ್ತಿಯ ನೆರವಿಗೆ ಧಾವಿಸಿದ್ದಾರೆ. ಕ್ಲಪ್ತ ಸಮಯದಲ್ಲಿ ಆ ವ್ಯಕ್ತಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ ಅವರ ಜೀವ ಉಳಿಸಿರುವುದಾಗಿ ಝಕರಿಯಾ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ತುರ್ತು ಪರಿಸ್ಥಿತಿಯಲ್ಲಿ ಒಂದು ಜೀವ ಉಳಿಸಲು ಸಾಧ್ಯವಾಗುವುದು ಒಬ್ಬ ವೈದ್ಯ ಎಂಬ ನೆಲೆಯಲ್ಲಿ ತುಂಬಾ ಹೆಮ್ಮೆ ತರುವ ಸಂಗತಿ ಎಂದು ಅವರು ಬರೆದಿದ್ದಾರೆ. 

ವಿಮಾನ ಪರಿಚಾರಕಿಯರು ವೈದ್ಯರಿದ್ದಾಯೆ ಎಂದು ಕರೆದಾಗ ವಿಮಾನದಲ್ಲಿದ್ದ ಏಕೈಕ ಡಾಕ್ಟರ್‌ ನಾನಾಗಿದ್ದೆ. ನಾನು ಅನಾರೋಗ್ಯ ಪೀಡಿತ ವ್ಯಕ್ತಿ ಬಳಿ ಹೋದಾಗ ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ವಿಮಾನದಲ್ಲಿ ಒಆರ್‌ಎಸ್‌ ಗೆ ಬೇಕಾದ ಅಗತ್ಯ ಔಷಧಿಗಳಿರಲಿಲ್ಲ. ಹಾಗಾಗಿ ಆರು ಟೇಬಲ್‌ ಸ್ಪೂನ್‌ ಸಕ್ಕರೆ, ಒಂದು ಸ್ಪೂನ್‌ ಉಪ್ಪು ಹಾಗೂ ಬಿಸಿ ಆರಿದ ನೀರನ್ನು ತಯಾರು ಮಾಡುವಂತೆ ವಿಮಾನ ಸಿಬ್ಬಂದಿಗೆ ಸೂಚಿಸಿದೆ. ಕೆಲವು ಕ್ಷಣಗಳ ಬಳಿಕ ಆ ವ್ಯಕ್ತಿ ಸಹಜ ಸ್ಥಿತಿಗೆ  ಮರಳಿದರು. ವಿಮಾನ ಯಾನ ಪೂರ್ತಿಯಾಗುವವರೆಗೆ ನಾನು ಅವರನ್ನು ಮೂರು ಬಾರಿ ಪರೀಕ್ಷಿಸಿದೆ. ಅವರು ಆರಾಮವಾಗಿದ್ದರು. ಒಬ್ಬ ವೈದ್ಯನಾಗಿ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ನೆರವಾಗುವುದು ನಿಜಕ್ಕೂ ಒಂದು ಹೆಮ್ಮೆ. ನಿಜಕ್ಕೂ ಅನುಗ್ರಹೀತ ಎಂದು ಝಕರಿಯಾ ಬರೆದುಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News