2019-20ರಲ್ಲಿ ಬಿಜೆಪಿ ನಂ.1 ಶ್ರೀಮಂತ ಪಕ್ಷ: ಎಡಿಆರ್ ವರದಿ

Update: 2022-01-28 14:23 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.28: 2019-20ನೇ ವಿತ್ತವರ್ಷದಲ್ಲಿ ಬಿಜೆಪಿ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿದ್ದು,ಅದು 4,847.78 ಕೋ.ರೂ.ವೌಲ್ಯದ ಆಸ್ತಿಗಳನ್ನು ಘೋಷಿಸಿದೆ. ನಂತರದ ಸ್ಥಾನಗಳಲ್ಲಿ ಬಿಎಸ್ಪಿ (698.33 ಕೋ.ರೂ.) ಮತ್ತು ಕಾಂಗ್ರೆಸ್ (588.16 ಕೋ.ರೂ.) ಇವೆ ಎಂದು ಅಸೋಸಿಯೇಷ್ ನ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.

2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ವಿಶ್ಲೇಷಣೆಯನ್ನು ಆಧರಿಸಿ ಎಡಿಆರ್ ತನ್ನ ವರದಿಯನ್ನು ಸಿದ್ಧಗೊಳಿಸಿದೆ.

ವರದಿ ವರ್ಷದಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು ಅನುಕ್ರಮವಾಗಿ ಒಟ್ಟು 6,988.57 ಕೋ.ರೂ. ಮತ್ತು 2,129.38 ಕೋ.ರೂ.ಗಳ ಆಸ್ತಿಗಳನ್ನು ಘೋಷಿಸಿವೆ. ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಗಳ ಶೇ.69.37 ಬಿಜೆಪಿಯ ಬಳಿಯಲ್ಲಿದ್ದರೆ, ಬಿಎಸ್‌ಪಿ ಶೇ.9.99 ಮತ್ತು ಕಾಂಗ್ರೆಸ್ ಶೇ.8.42ನ್ನು ಹೊಂದಿವೆ.

44 ಪ್ರಾದೇಶಿಕ ಪಕ್ಷಗಳ ಪೈಕಿ ಉನ್ನತ 10 ಪಕ್ಷಗಳು 2028.715 ಕೋ.ರೂ.ಗಳ ಆಸ್ತಿಗಳನ್ನು ಹೊಂದಿದ್ದು,ಇದು ಎಲ್ಲ ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ಒಟ್ಟು ಆಸ್ತಿಗಳ ಶೇ.95.27ರಷ್ಟಿದೆ. ಈ ಪೈಕಿ ಎಸ್‌ಪಿ ಅತ್ಯಂತ ಹೆಚ್ಚು,ಅಂದರೆ 563.47 ಕೋ.ರೂ.(ಶೇ.26.46) ಮೌಲ್ಯದ ಆಸ್ತಿಗಳನ್ನು ಘೋಷಿಸಿದ್ದರೆ, ನಂತರದ ಸ್ಥಾನಗಳಲ್ಲಿ ಟಿಆರ್‌ಎಸ್ (301.47 ಕೋ.ರೂ.) ಮತ್ತು ಎಐಎಡಿಎಂಕೆ (267.61ಕೋ.ರೂ.) ಇವೆ.

2019-20ನೇ ಸಾಲಿಗೆ ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ಒಟ್ಟು ಆಸ್ತಿಗಳಲ್ಲಿ ಅತ್ಯಂತ ಹೆಚ್ಚಿನ ಪಾಲು(ಶೇ.76.99) ನಿರಖು ಠೇವಣಿ (ಎಫ್‌ಡಿ)ಗಳದ್ದಾಗಿದೆ. ಅವು ಒಟ್ಟು 1,639.51 ಕೋ.ರೂ.ಗಳನ್ನು ನಿರಖು ಠೇವಣಿಗಳಲ್ಲಿ ತೊಡಗಿಸಿವೆ. ಬಿಜೆಪಿ 3,253 ಕೋ.ರೂ.,ಬಿಎಸ್‌ಪಿ 618.86 ಕೋ.ರೂ. ಮತ್ತು ಕಾಂಗ್ರೆಸ್ 240.90 ಕೋ.ರೂ.ಗಳ ಎಫ್‌ಡಿಗಳನ್ನು ಹೊಂದಿರುವುದಾಗಿ ಘೋಷಿಸಿವೆ.

ಪ್ರಾದೇಶಿಕ ಪಕ್ಷಗಳ ಪೈಕಿ ಎಸ್‌ಪಿ ಅತ್ಯಂತ ಹೆಚ್ಚಿನ (431.219 ಕೋ.ರೂ.) ಎಫ್‌ಡಿ ಹೊಂದಿದ್ದರೆ, ಟಿಆರ್‌ಎಸ್ (256.01 ಕೋ.ರೂ.) ಮತ್ತು ಎಐಎಡಿಎಂಕೆ (246.90 ಕೋ.ರೂ.) ನಂತರದ ಸ್ಥಾನಗಳಲ್ಲಿವೆ. 2019-21ನೇ ಸಾಲಿಗೆ ಏಳು ರಾಷ್ಟ್ರೀಯ ಪಕ್ಷಗಳು (74.27 ಕೋ.ರೂ.) ಮತ್ತು 44 ಪ್ರಾದೇಶಿಕ ಪಕ್ಷಗಳು (60.66 ಕೋ.ರೂ) ಒಟ್ಟು 134.93 ಕೋ.ರೂ.ಗಳ ಹೊಣೆಗಾರಿಕೆಗಳನ್ನು ಘೋಷಿಸಿವೆ ಎಂದು ಎಡಿಆರ್ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News