ರಾಜನಾಥ್ ಸಲಹೆಯನ್ನು ಧಿಕ್ಕರಿಸಿ ಜಿನ್ನಾ ಹೆಸರಿನಲ್ಲಿ ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಆದಿತ್ಯನಾಥ್
ಲಕ್ನೋ: ಅವರು 'ಜಿನ್ನಾ' ಆರಾಧಕರು, ನಾವು 'ಸರ್ದಾರ್ ಪಟೇಲ್' ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ, ನಾವು ಮಾ ಭಾರತಿಯ ಮೇಲೆ ನಮ್ಮ ಪ್ರಾಣವನ್ನು ಅರ್ಪಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ರೈತರ ಸಮಸ್ಯೆ ಬಗ್ಗೆ ಮಾತನಾಡಬೇಕೆ ಹೊರತು ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ ಒಂದು ದಿನದ ಬೆನ್ನಲ್ಲೇ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಜಿನ್ನಾ ಹೆಸರು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಪಾಕಿಸ್ತಾನದ ನಿರ್ಮಾತೃ ಜಿನ್ನಾ ಹೆಸರು ಏಕೆ ಪ್ರಸ್ತಾಪ ಆಗುತ್ತೋ ನನಗೆ ಗೊತ್ತಿಲ್ಲ. ಉತ್ತರ ಪ್ರದೇಶ ಚುನಾವಣಾ ಸಂಧರ್ಭದಲ್ಲಿ ನಾವು ರೈತರ ಕಬ್ಬುಗಳ ಕುರಿತು ಮಾತನಾಡಬೇಕೆ ಹೊರತು ಜಿನ್ನಾ ಹೆಸರು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಗುರುವಾರ ರಾಜನಾಥ್ ಸಿಂಗ್ ಹೇಳಿದ್ದರು.
ಹಲವು ಬಿಜೆಪಿ ನಾಯಕರು ತಮ್ಮ ಪ್ರತಿಸ್ಪರ್ಧಿಗಳನ್ನು ಜಿನ್ನಾ ಆರಾಧಕರು ಎಂದು ತಮ್ಮ ಭಾಷಣದಲ್ಲಿ ಹೇಳುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಮಾತುಗಳು ಸಾಕಷ್ಟು ಮಹತ್ವ ಪಡೆದುಕೊಂಡಿತ್ತು.
ಉತ್ತರ ಪ್ರದೇಶ ಚುನಾವಣಾ ಹಿನ್ನೆಲೆಯಲ್ಲಿ ಜಿನ್ನಾ ಹೆಸರು ಪ್ರಸ್ತಾಪ ಆಗುತ್ತಿರುವುದು ಇದೇ ಮೊದಲೇನಲ್ಲ. ಜಿನ್ನಾ ಹೆಸರು ಚುನಾವಣೆಗಳ ಸಂದರ್ಭದಲ್ಲಿ ಪ್ರಸ್ತಾಪವಾಗುವುದಕ್ಕೂ ಇತಿಹಾಸವಿದೆ.
ಕೆಲವು ವರ್ಷಗಳ ಹಿಂದೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭ ಭಾಯ್ ಪಟೇಲ್, ಜವಹರಲಾಲ್ ನೆಹರೂ, ಮುಹಮ್ಮದ್ ಅಲಿ ಜಿನ್ನಾ ಮೊದಲಾದವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದರು.
“ಸರ್ದಾರ್ ಪಟೇಲಜಿ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಜಿನ್ನಾ ಒಂದೇ ಸಂಸ್ಥೆಯಲ್ಲಿ ಓದಿದ ನಂತರ ಬ್ಯಾರಿಸ್ಟರ್‌ಗಳಾದರು. ಅವರು ಒಂದೇ ಸ್ಥಳದಲ್ಲಿ ಅಧ್ಯಯನ ಮಾಡಿದರು. ಅವರು ಬ್ಯಾರಿಸ್ಟರ್ ಆದರು, ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಅವರು ಯಾವುದೇ ರೀತಿಯ ಹೋರಾಟದಿಂದ ಹಿಂದೆ ಸರಿಯಲಿಲ್ಲ” ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಹರ್ದೋಯ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಖಿಲೇಶ್ ಹೇಳಿದ್ದರು.
ಅಖಿಲೇಶ್ ಹೇಳಿಕೆಗೆ ಆದಿತ್ಯನಾಥ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಪಟೇಲರನ್ನು ಜಿನ್ನಾ ಜೊತೆ ಹೋಲಿಸುವುದು ನಾಚಿಕೆಗೇಡು, ತಾಲಿಬಾನ್ ಮನಸ್ಥಿತಿ ಎಂದು ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದರು.
ಜಿನ್ನಾ ಕುರಿತಾದ ಅಖಿಲೇಶ್ ಯಾದವ್ ಹೇಳಿಕೆಗಳು ಮತ್ತು ಅದಕ್ಕೆ ಪ್ರತಿಕ್ರಿಯೆಯು ವಿಧಾನಸಭಾ ಚುನಾವಣೆಗೆ ಮುನ್ನ ಹಿಂದೂ-ಮುಸ್ಲಿಂ ರೀತಿಯಲ್ಲಿ ಎಂದು ವಾತಾವರಣವನ್ನು ಕೆಡಿಸಲು ಎರಡು ಪಕ್ಷಗಳ ಚೆನ್ನಾಗಿ ಯೋಚಿಸಿದ ತಂತ್ರದ ಭಾಗವಾಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದರು.
ಅಲಿಘರ್ ಮುಸ್ಲಿಮ್ ಯುನಿವರ್ಸಿಟಿಯಿಂದ ಜಿನ್ನಾ ಭಾವಚಿತ್ರವನ್ನು ತೆಗೆಯುವಂತೆ ಬಿಜೆಪಿ ಸಂಸದ ಸತೀಶ್ ಗೌತಮ್ ಒತ್ತಾಯಿಸಿದ ನಂತರದಿಂದ ಉತ್ತರ ಪ್ರದೇಶದಲ್ಲಿ ಜಿನ್ನಾವು ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟಿತ್ತು. ಈ ಘಟನೆ ಸಂಬಂಧಿಸಿ ಆರೆಸ್ಸೆಸ್ ಅಂಗಸಂಸ್ಥೆ ಹಿಂದೂ ಜಾಗರಣ್ ಮಂಚ್ ಕಾರ್ಯಕರ್ತರು ರಾತ್ರೋರಾತ್ರಿ ಕ್ಯಾಂಪಸ್ ನುಗ್ಗಲು ಯತ್ನಿಸಿ ವಿವಾದ ದೊಡ್ಡದಾಗಿತ್ತು. ಪೊಲೀಸ್ ಮತ್ತು ಅಲಿಘರ್ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಟ 12 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಅದೇ ಸಂದರ್ಭದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಕಾರ್ಯಕ್ರಮವನ್ನು ರದ್ದು ಪಡಿಸಿ, ಅವರು ದಿಲ್ಲಿಗೆ ಮರಳುವಂತಹ ಸನ್ನಿವೇಶ ಎದುರಾಯಿತು.