ವಿವಾದದ ಬಳಿಕ ಗರ್ಭಿಣಿಯರಿಗೆ ವಿಧಿಸಿದ್ದ ಫಿಟ್ನೆಸ್ ನಿಯಮಗಳನ್ನು ಹಿಂಪಡೆದ SBI

Update: 2022-01-29 13:59 GMT

ಹೊಸದಿಲ್ಲಿ: ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗರ್ಭಿಣಿ ಮಹಿಳೆಯರಿಗೆ ವಿಧಿಸಿದ್ದ ಫಿಟ್‌ನೆಸ್‌ ನಿಯಮಾವಳಿಗಳನ್ನು ಹಿಂಪಡೆದುಕೊಂಡಿದೆ.

ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಬ್ಯಾಂಕ್‌ ನಿಯಮಾವಳಿಗಳಲ್ಲಿ ಸಡಿಲಿಕೆ ತಂದಿದ್ದು, ಈ ಕುರಿತು ಹೊಸ ಪ್ರಕಟನೆ ಹೊರಡಿಸಿದೆ. “ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಗರ್ಭಿಣಿ ಮಹಿಳಾ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳನ್ನು ಸ್ಥಗಿತಗೊಳಿಸಲು ಮತ್ತು ಈ ವಿಷಯದಲ್ಲಿ ಅಸ್ತಿತ್ವದಲ್ಲಿರುವ ಸೂಚನೆಗಳನ್ನು ಮುಂದುವರಿಸಲು SBI ನಿರ್ಧರಿಸಿದೆ” ಎಂದು ಎಸ್‌ಬಿಐ ಪ್ರಕಟಣೆ ತಿಳಿಸಿದೆ.

ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಹೊಸ ನೇಮಕಾತಿಯ ಸಂದರ್ಭದಲ್ಲಿ, ಮೂರು ತಿಂಗಳಿಗಿಂತ ಮೇಲ್ಪಟ್ಟ ಗರ್ಭಿಣಿ ಮಹಿಳಾ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಅನರ್ಹರು ಎಂದು ಪರಿಗಣಿಸಿತ್ತು.  ಡೆಲಿವರಿ ಬಳಿಕ ನಾಲ್ಕು ತಿಂಗಳೊಳಗೆ ಬ್ಯಾಂಕ್ ತರ್ತವ್ಯಕ್ಕೆ ಸೇರಬಹುದು ಎಂದು ಬ್ಯಾಂಕ್‌ ಹೇಳಿತ್ತು. SBI, ತಾಜಾ ನೇಮಕಾತಿಗಳು ಅಥವಾ ಬಡ್ತಿಗಳಿಗಾಗಿ ತನ್ನ ಇತ್ತೀಚಿನ ವೈದ್ಯಕೀಯ ಫಿಟ್‌ನೆಸ್ ಮಾರ್ಗಸೂಚಿಗಳಲ್ಲಿ, ಮೂರು ತಿಂಗಳಿಗಿಂತ ಕಡಿಮೆ ಗರ್ಭಿಣಿಯಾಗಿರುವ ಮಹಿಳಾ ಅಭ್ಯರ್ಥಿಗಳನ್ನು ಫಿಟ್ ಎಂದು ಪರಿಗಣಿಸಲಾಗಿತ್ತು.

 ಅನೇಕ ರಾಜಕಾರಣಿಗಳು ಮತ್ತು ಉದ್ಯೋಗಿಗಳು ಹೊಸ ನಿಯಮಗಳನ್ನು ಟೀಕಿಸಿದ್ದರು. ಎಸ್‌ಬಿಐ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಮಧುರೈ ಸಂಸದ ಸು ವೆಂಕಟೇಶನ್ ಅವರು ‘ಬ್ಯಾಂಕ್‌ ನಿಯಮಾವಳಿಗಳು ಸಂವಿಧಾನದ ತತ್ವಕ್ಕೆ ವಿರುದ್ಧವಾಗಿವೆ, ಇದು ಸಮಾನತೆಯನ್ನು ಖಾತರಿಪಡಿಸುವ ಆರ್ಟಿಕಲ್ 14, 15 ಮತ್ತು 16 ಗೆ ವಿರುದ್ಧವಾಗಿದೆ” ಎಂದು ಹೇಳಿದ್ದರು.

ಗರ್ಭಿಣಿಯರನ್ನು ಅನರ್ಹ ಎಂದು ವಿವರಿಸುವ ಮಾರ್ಗಸೂಚಿಗಳಿಗೆ ಉತ್ತರ ಕೋರಿ ದೆಹಲಿ ಮಹಿಳಾ ಆಯೋಗ ಕೂಡಾ  ಎಸ್‌ಬಿಐಗೆ ನೋಟಿಸ್ ಜಾರಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News