ಪೆಗಾಸಸ್‌ ʼಡೀಲ್‌ʼ ಕುರಿತು ಸುಪ್ರೀಂ ಕೋರ್ಟ್‌ ತನಿಖಾ ಸಮಿತಿ ವರದಿಗೆ ನಿರೀಕ್ಷೆ: ಸರ್ಕಾರಿ ಮೂಲ

Update: 2022-01-29 15:21 GMT

ಹೊಸದಿಲ್ಲಿ: ಕಳೆದ ವರ್ಷ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಅನುಮಾನ ಸೃಷ್ಟಿಸಿದ್ದ ಪೆಗಾಸಸ್‌ ಸಾಫ್ಟ್‌ವೇರ್‌ ಹಗರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತ ಸರ್ಕಾರ 2017 ರಲ್ಲಿ ಪೆಗಾಸಸ್‌ ಸಾಫ್ಟವೇರ್‌ ಚಂದಾದಾರಿಕೆ ಮಾಡಿಕೊಂಡಿತ್ತು ಎಂಬ ನ್ಯೂಯಾರ್ಕ್‌ ಟೈಮ್ಸ್‌ ವರದಿ ಬೆನ್ನಲ್ಲೇ, ಕೇಂದ್ರ ಸರ್ಕಾರದ ಮೂಲಗಳು, ಸುಪ್ರೀಂ ಕೋರ್ಟ್‌ ತನಿಖಾ ಸಮಿತಿಯು ಪೆಗಾಸಸ್‌ ಕುರಿತು ಕೂಲಂಕುಷವಾಗಿ ಗಮನಿಸುತ್ತಿದೆ, ಸಮಿತಿಯು ವರದಿಗೆ ಸರ್ಕಾರ ಕಾಯುತ್ತಿದೆ ಎಂದು ಹೇಳಿರುವುದಾಗಿ TOI ವರದಿ ಮಾಡಿದೆ.

ಇತ್ತೀಚೆಗಷ್ಟೇ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರ ನೇತೃತ್ವದ ತನಿಖಾ ಸಮಿತಿಯು, ಯಾರಿಗೆ ತಮ್ಮ ವಿರುದ್ಧ ಪೆಗಾಸಸ್‌ ದಾಳಿಯಾದ ಕುರಿತು ಅನುಮಾನಗಳಿವೆಯೋ ಅವರು ತಮ್ಮ ಫೋನ್ ಗಳನ್ನು ತನಿಖಾ ಸಮಿತಿ ಎದುರು ಒಪ್ಪಿಸಬೇಕೆಂದು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿತ್ತು.

ಪೆಗಾಸಸ್‌ ಒಪ್ಪಂದದ ಕುರಿತು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮುಂದಿಟ್ಟು ಪ್ರತಿಪಕ್ಷಗಳು ಕೇಂದ್ರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದೆ.

ನರೇಂದ್ರ ಮೋದಿ ಸರ್ಕಾರ ಈ ಸೈಬರ್ ಅಸ್ತ್ರವನ್ನು ಏಕೆ ಖರೀದಿಸಿದೆ, ಅದರ ಬಳಕೆಗೆ ಅನುಮತಿ ನೀಡಿದವರು ಯಾರು, ಗುರಿಗಳನ್ನು ಹೇಗೆ ಆಯ್ಕೆ ಮಾಡಲಾಗಿದೆ ಮತ್ತು ಈ ವರದಿಗಳನ್ನು ಯಾರು ಪಡೆದರು? ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ ಮೊದಲಾದ ಕಾಂಗ್ರೆಸ್‌ ನಾಯಕರೂ ಪೆಗಾಸಸ್‌ ಕುರಿತು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಪೆಗಾಸಸ್‌ ಬಳಸಿ ದೇಶದ ಪ್ರಜೆಗಳನ್ನು ಗೂಢಾಚಾರ ಮಾಡುವುದು ದೇಶದ್ರೋಹದ ಕೆಲಸ ಎಂದು ಮಲ್ಲಿಕಾರ್ಜುನ್‌ ಖರ್ಗೆ ಕಿಡಿ ಕಾರಿದ್ದಾರೆ.

ಪ್ರತಿಪಕ್ಷಗಳ ಟೀಕೆಗೆ ಕೇಂದ್ರವು ಪ್ರತಿಕ್ರಿಯಿಸಿದ್ದು, ಪೆಗಾಸಸ್‌ ಪ್ರಕರಣವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯವು ನಿವೃತ್ತ ನ್ಯಾಯಾಧೀಶ ರವೀಂದ್ರನ್ ಅವರ ಮೇಲ್ವಿಚಾರಣೆಯಲ್ಲಿ ಸಮಿತಿಯನ್ನು ರಚಿಸಿದೆ. ಸಮಿತಿಯ ವರದಿ ಕಾಯುತ್ತಿದೆ" ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ಏತನ್ಮಧ್ಯೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ವಿಷಯವನ್ನು ಪ್ರಸ್ತಾಪಿಸಲು ಕಾಂಗ್ರೆಸ್‌ ಉದ್ದೇಶಿಸಿದ್ದು, ಬಿಜೆಪಿ ಮತ್ತು ಪ್ರಧಾನಿ ಮೋದಿಯ ವಿರುದ್ಧ ಪ್ರಬಲ ಅಸ್ತ್ರವಾಗಿ ಪೆಗಾಸಸ್‌ ಹಗರಣವನ್ನು ಬಳಸುವ ಆಲೋಚನೆಯಲ್ಲಿದೆ.

ಈ ನಡುವೆ, ನ್ಯೂಯಾರ್ಕ್‌ ಟೈಮ್ಸ್ ವರದಿಯನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ವಿ ಕೆ ಸಿಂಗ್, ‌ ನ್ಯೂಯಾರ್ಕ್‌ ಟೈಮ್ಸ್‌ ಗೆ ಸುಪಾರಿ ಕೊಟ್ಟು ಯಾರು ಬೇಕಾದರೂ ವರದಿ ಬರೆಸಬಹುದು ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News