×
Ad

ಮನೆಯಿಂದ ಪರಾರಿಯಾಗಿದ್ದ ಬಾಲಕಿಯನ್ನು ಕುಟುಂಬದೊಂದಿಗೆ ಒಂದಾಗಿಸಿದ ಮುಂಬೈ ಆಟೋ ರಿಕ್ಷಾ ಚಾಲಕ

Update: 2022-01-30 11:56 IST

ಪಾಲ್ಘರ್: ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡುವಂತೆ ಪೋಷಕರು ಹೇರುತ್ತಿದ್ದ ಒತ್ತಡ ತಾಳಲಾರದೆ ಹೊಸದಿಲ್ಲಿಯಲ್ಲಿರುವ ತನ್ನ ಮನೆಯಿಂದ ಓಡಿಹೋದ 14 ವರ್ಷದ ಬಾಲಕಿಯೊಬ್ಬಳು ಆಟೋ ರಿಕ್ಷಾ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಮಹಾರಾಷ್ಟ್ರದಲ್ಲಿ ಮತ್ತೆ  ತನ್ನ ಕುಟುಂಬವನ್ನು ಸೇರಿಕೊಂಡಿರುವ ಘಟನೆ ವರದಿಯಾಗಿದೆ. ಈ ವಿಚಾರವನ್ನು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಆಟೋ ರಿಕ್ಷಾ ಚಾಲಕ ರಾಜು ಕರ್ವಾಡೆ (35) ಪಾಲ್ಘರ್‌ನ ವಸಾಯಿ ನಿಲ್ದಾಣದ ಹೊರಗೆ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಆಗ ಬಾಲಕಿಯೊಬ್ಬಳು ಚಾಲಕನನ್ನು ಸಂಪರ್ಕಿಸಿ ಈ ಪ್ರದೇಶದಲ್ಲಿ ತಂಗಲು ಕೊಠಡಿ ಸಿಗಬಹುದೇ ಎಂದು ವಿಚಾರಿಸಿದ್ದಾಳೆ.  ಅನುಮಾನಗೊಂಡ ಚಾಲಕ ಬಾಲಕಿಯ ಗುರುತಿನ ಚೀಟಿಯನ್ನು ಪರಿಶೀಲಿಸಿ ಆಕೆಯ ಬಗ್ಗೆ ವಿಚಾರಿಸಿದ್ದಾನೆ. ಬಾಲಕಿ ತಾನು ಹೊಸದಿಲ್ಲಿಯಿಂದ ಬಂದಿದ್ದು, ಇಲ್ಲಿಗೆ ಒಬ್ಬಳೇ ಬಂದಿರುವುದಾಗಿ ತಿಳಿಸಿದ್ದಾಳೆ. ರಿಕ್ಷಾ ಚಾಲಕ ತಕ್ಷಣವೇ ಟ್ರಾಫಿಕ್ ಪೋಲೀಸರಿಗೆ ಮಾಹಿತಿ  ನೀಡಿ ನಂತರ ಬಾಲಕಿಯನ್ನು ಮಾಣಿಕ್‌ಪುರ ಪೊಲೀಸ್ ಠಾಣೆಗೆ ಕರೆ ತಂದಿದ್ದಾನೆ ಎಂದು ಮಾಣಿಕ್‌ಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಭೌಸಾಹೇಬ್ ತಿಳಿಸಿದ್ದಾರೆ.

ತಾನು ಹೊಸದಿಲ್ಲಿಯ ಪುಷ್ಪ ವಿಹಾರ್‌ ನಿವಾಸಿ  ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ ಹಾಗೂ  ವಿದ್ಯಾಭ್ಯಾಸದತ್ತ ಗಮನ ಹರಿಸುವಂತೆ ತಾಯಿ ಒತ್ತಾಯಿಸುತ್ತಿದ್ದರಿಂದ ಶುಕ್ರವಾರ ತನ್ನ ಮನೆಯಿಂದ ಓಡಿಬಂದಿರುವುದಾಗಿ  ಹೇಳಿದ್ದಾಳೆ.

ಪೊಲೀಸರು ದಿಲ್ಲಿಯ ಸಾಕೇತ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಬಾಲಕಿಯ ಪೋಷಕರು ಅದಾಗಲೇ ಅಪಹರಣದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ನಂತರ ಪೊಲೀಸರು ಬಾಲಕಿಯ ಪೋಷಕರಿಗೆ ಆಕೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹುಡುಗಿಯ ಪೋಷಕರು ನಂತರ ವಿಮಾನದ ಮೂಲಕ  ವಸಾಯಿ ತಲುಪಿದರು.  ಅಲ್ಲಿ ಅವರು ಶನಿವಾರ ಸಂಜೆ ತಮ್ಮ ಮಗಳೊಂದಿಗೆ ಮತ್ತೆ ಒಂದಾದರು ಎಂದು ಅಧಿಕಾರಿ ತಿಳಿಸಿದ್ದಾರೆ.

ನಂತರ ಪೊಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಚಾಲಕನನ್ನು ಸನ್ಮಾನಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News