ಮುಂಬೈ ಪೊಲೀಸರ ʼನಿರ್ಭಯಾ ಸ್ಕ್ವಾಡ್ʼ ವೀಡಿಯೋಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ: ವೀಡಿಯೊ ವೈರಲ್
ಮುಂಬೈ: ಸಾಮಾಜಿಕ ತಾಣಗಳಲ್ಲಿ ಮುಂಬೈ ಪೊಲೀಸರು ಪೋಸ್ಟ್ ಮಾಡುವ ವೀಡಿಯೋಗಳು ಸೃಜನಾತ್ಮಕವಾಗಿರುತ್ತವೆ. ಇಲಾಖೆಯ ಮತ್ತು ನಗರದ ಹಲವು ಪ್ರಮುಖ ಸಾಮಾಜಿಕ ಸಮಸ್ಯೆಗಳಿಗೆ ಸಲಹೆಯೆಂಬಂತೆ ಪ್ರಸ್ತುತ ಟ್ರೆಂಡ್ ಗಳಿಗೆ ಅನುಗುಣವಾಗಿ ವೀಡಿಯೋಗಳನ್ನು ಮತ್ತು ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತದೆ. ಇದೀಗ ಮುಂಬೈ ಪೊಲೀಸರು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷವಾಗಿ ನಿಯೋಜಿಸಲಾದ ತಮ್ಮ ನಿರ್ಭಯಾ ಸ್ಕ್ವಾಡ್ ಕುರಿತು ಕಿರುಚಿತ್ರವನ್ನು ಹಂಚಿಕೊಂಡಿದ್ದಾರೆ. 2 ನಿಮಿಷಗಳ ಅವಧಿಯ ಕ್ಲಿಪ್ ನೆಟ್ಟಿಗರಿಂದ ಹೆಚ್ಚು ಪ್ರಶಂಸೆ ಗಳಿಸಿದೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಕಿರುಚಿತ್ರವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ಧ್ವನಿಯೊಂದಿಗೆ, 103 ಅನ್ನು ಡಯಲ್ ಮಾಡಿದ ನಂತರ ಮಹಿಳೆಯರು ಈಗ ನಿರ್ಭಯಾ ಸ್ಕ್ವಾಡ್‌ನಿಂದ ತ್ವರಿತವಾಗಿ ಸಹಾಯವನ್ನು ಹೇಗೆ ಪಡೆಯಬಹುದು ಎಂಬುದನ್ನು ವೀಡಿಯೊ ತೋರಿಸುತ್ತದೆ.
"'ಲಾಂಗ್ ಕೆ ಅಬ್ ತು ಲಕ್ಷ್ಮಣ್ ರೇಖಾ, ಬನ್ ನಿದರ್, ಬನ್ ನಿರ್ಭಯಾ!'. ನಿರ್ಭೀತ ಮಹಿಳೆಯರು - ಮುಂಬೈನ ಟ್ರೇಡ್‌ಮಾರ್ಕ್ ಆಗಿದ್ದಾರೆ ಮತ್ತು ಈಗ ಸಮರ್ಪಿತ ತಂಡವಾಗಿದ್ದಾರೆ. ಇದು ಈ ನಗರದ ಮಹಿಳೆಯರಲ್ಲಿನ ನಿರ್ಭಯತೆಯ ಪ್ರತಿಬಿಂಬವಾಗಿದೆ. ʼನಿರ್ಭಯಾ ಸ್ಕ್ವಾಡ್ʼ. @itsrohitshetty ಅವರ ಚಲನಚಿತ್ರ,” ಎಂದು ಇಲಾಖೆಯು ವೀಡಿಯೊಗೆ ಶೀರ್ಷಿಕೆ ನೀಡಿದೆ.
ಈ ವೀಡಿಯೋಗೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, "ಮಹಿಳೆಯರ ಸುರಕ್ಷತೆಗಾಗಿ ಭಾರತದ ಎಲ್ಲಾ ನಗರಗಳಲ್ಲೂ ಇಂತಹಾ ಸ್ಕ್ವಾಡ್ ನ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.