×
Ad

2024 ರ ಚುನಾವಣೆಗಿಂತ ಮೊದಲು ಕೇಂದ್ರ ಸರಕಾರ ಇನ್ನಷ್ಟು ಪೆಗಾಸಸ್ ಸ್ಪೈವೇರ್ ಖರೀದಿಸಬಹುದು: ಚಿದಂಬರಂ ಲೇವಡಿ

Update: 2022-01-30 13:01 IST

ಹೊಸದಿಲ್ಲಿ: ಅಮೆರಿಕದ ದೈನಿಕ ‘ನ್ಯೂಯಾರ್ಕ್ ಟೈಮ್ಸ್‌’ನಲ್ಲಿ ಪೆಗಾಸಸ್ ಸ್ಪೈವೇರ್‌ನ ಕುರಿತ ವರದಿಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ  ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಇಂದು ಕೇಂದ್ರ ಸರಕಾರವನ್ನು ಲೇವಡಿ ಮಾಡಿದ್ದಾರೆ.

 2024 ರ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರಕಾರವು ಎರಡು ಬಾರಿ ಹೊಸ ಸ್ಪೈವೇರ್ ಅನ್ನು ಖರೀದಿಸಬಹುದು ಎಂದು  ಅವರು ಹೇಳಿದ್ದಾರೆ.

2017ರಲ್ಲಿ ಇಸ್ರೇಲ್ ನೊಂದಿಗಿನ ಸುಮಾರು $ 2 ಬಿಲಿಯನ್ ಒಪ್ಪಂದದ ವೇಳೆ ಪೆಗಾಸಸ್ ಸ್ಪೈವೇರ್‌ ಅನ್ನು  ಭಾರತ ಖರೀದಿಸಿತ್ತು ಎಂಬ ‘ನ್ಯೂಯಾರ್ಕ್ ಟೈಮ್ಸ್‌ ‘ವರದಿಗೆ ಪ್ರತಿಕ್ರಿಯೆಯಾಗಿ  ‘ನ್ಯೂಯಾರ್ಕ್ ಟೈಮ್ಸ್‌’ ಅನ್ನು  "ಸುಪಾರಿ ಮಾಧ್ಯಮ" ಎಂದು ಕರೆದ ಕೇಂದ್ರ ಸಚಿವ  ವಿ.ಕೆ. ಸಿಂಗ್ ಅವರನ್ನು ಚಿದಂಬರಂ ತರಾಟೆಗೆ ತೆಗೆದುಕೊಂಡರು.

"ವಾಟರ್‌ಗೇಟ್ ಹಗರಣ ಹಾಗೂ  ಪೆಂಟಗನ್ ಪೇಪರ್‌ಗಳನ್ನು ಬಹಿರಂಗಪಡಿಸುವಲ್ಲಿ ಎರಡು ಪತ್ರಿಕೆಗಳು ನಿರ್ವಹಿಸಿದ ಪಾತ್ರವನ್ನು ಸಿಂಗ್  ತಿಳಿದಿರುವ  ಕುರಿತು ನನಗೆ ಅನುಮಾನವಿದೆ.  ಅವರು ಇತಿಹಾಸವನ್ನು ಓದಲು ಬಯಸದಿದ್ದರೆ  ಅವರು ಕನಿಷ್ಠ ಚಲನಚಿತ್ರಗಳನ್ನು ವೀಕ್ಷಿಸಬಹುದು!" ಚಿದಂಬರಂ ಟ್ವೀಟ್ ಮಾಡಿದ್ದಾರೆ.

"ಇಸ್ರೇಲ್ ಜೊತೆಗಿನ ಈ ಹಿಂದಿನ  ಒಪ್ಪಂದವು 2 ಬಿಲಿಯನ್ ಡಾಲರ್ ಆಗಿತ್ತು. ಭಾರತವು ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. 2024 ರ ಚುನಾವಣೆಗೆ ಮುಂಚಿತವಾಗಿ ನಾವು ಹೆಚ್ಚು ಅತ್ಯಾಧುನಿಕ ಸ್ಪೈವೇರ್ ಅನ್ನು ಪಡೆದರೆ, ನಾವು ಅವರಿಗೆ 4 ಬಿಲಿಯನ್ ಡಾಲರ್  ನೀಡಬಹುದು" ಎಂದು ಚಿದಂಬರಂ ಇಂದು ಟ್ವೀಟ್ ಮಾಡಿದ್ದಾರೆ.

“ಭಾರತ-ಇಸ್ರೇಲ್ ಸಂಬಂಧದಲ್ಲಿ ಹೊಸ ಗುರಿಗಳನ್ನು ಹೊಂದಿಸಲು ಇದು ಅತ್ಯುತ್ತಮ ಸಮಯ ಎಂದು ಪ್ರಧಾನಿ ಹೇಳಿದ್ದಾರೆ. ಸಹಜವಾಗಿ, ಪೆಗಾಸಸ್ ಸ್ಪೈವೇರ್‌ನ ಯಾವುದೇ ಮುಂದುವರಿದ ಆವೃತ್ತಿಯನ್ನು ಇಸ್ರೇಲ್ ಹೊಂದಿದ್ದರೆ ಅದರ ಕುರಿತು ವಿಚಾರಿಸಲು ಇದು ಅತ್ಯುತ್ತಮ ಸಮಯ’’ ಎಂದು ಚಿದಂಬರಂ ಮತ್ತೊಂದು ಟ್ವೀಟ್ ನಲ್ಲಿ ಕೇಂದ್ರ ಸರಕಾರದ ಕಾಲೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News