×
Ad

ಗುಡಿಸಲಿಗೆ ಕಾರು ನುಗ್ಗಿಸಿದ ಅಪ್ರಾಪ್ತ; ನಾಲ್ವರು ಮೃತ್ಯು; ಮೂವರು ಅಪ್ರಾಪ್ತರ ಸಹಿತ ನಾಲ್ವರ ಬಂಧನ

Update: 2022-01-31 10:18 IST
Photo:ANI

ಕರೀಂನಗರ (ತೆಲಂಗಾಣ): ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು ರಸ್ತೆ ಬದಿಯ ಗುಡಿಸಲುಗಳಿಗೆ ನುಗ್ಗಿದ ಪರಿಣಾಮ ನಾಲ್ವರು ಮಹಿಳೆಯರು ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು  ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ ಹಾಗೂ  ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಅಪ್ರಾಪ್ತ ಚಾಲಕನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ರವಿವಾರ ಅಪ್ರಾಪ್ತನೊಬ್ಬ  ಚಲಾಯಿಸುತ್ತಿದ್ದ ಕಾರು ರಸ್ತೆಬದಿಯಲ್ಲಿದ್ದ ತಾತ್ಕಾಲಿಕ ಗುಡಿಸಲುಗಳಿಗೆ ನುಗ್ಗಿದ್ದರಿಂದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ಡ್ರೈನೇಜ್ ಕಾಲುವೆಗೆ ಇಳಿದಿದೆ.

ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರನ್ನು ಫರಿಯಾದ್, ಸುನೀತಾ, ಲಲಿತಾ ಮತ್ತು ಜ್ಯೋತಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.

ನಂತರ 9 ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ವಯಸ್ಕನು ತನ್ನ ಸ್ನೇಹಿತರೊಂದಿಗೆ ಜಾಯ್ ರೈಡ್ ಮಾಡುತ್ತಿದ್ದಾಗ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಅಪಘಾತವಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತರ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕರೀಂನಗರದ ಪೊಲೀಸ್ ಆಯುಕ್ತ ವಿ.ಸತ್ಯನಾರಾಯಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News