ಮನೆಯ ಹೊರಗಡೆ ಬಾಂಬ್‌ ಸ್ಫೋಟ: ಕೊಲೆ ಆರೋಪಿ ಆರೆಸ್ಸೆಸ್‌ ಮುಖಂಡನಿಗೆ ಗಾಯ

Update: 2022-01-31 08:15 GMT
ಸಾಂದರ್ಭಿಕ ಚಿತ್ರ

ಕಣ್ಣೂರು: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)] ಕಾರ್ಯಕರ್ತ ಧನರಾಜ್ ಹತ್ಯೆ ಪ್ರಕರಣದ ಆರೋಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಅಳಕೋಡ್ ಬಿಜು ಶನಿವಾರ ಸಂಜೆ ಅಳಕೋಡ್‌ನಲ್ಲಿರುವ ಅವರ ಮನೆಯ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು thehindu.com ವರದಿ ಮಾಡಿದೆ.

ಬಿಜು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ.

ಪೆರಿಂಗೋಮ್ ಪೊಲೀಸ್ ಠಾಣಾ ವ್ಯಾಪ್ತಿಯ ಅವರ ಮನೆಯ ಹೊರಗೆ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ, ಬಿಜು ಕೈಗೆ ತೀವ್ರ ಗಾಯವಾಗಿದ್ದು, ಆತನ ಎಡಗೈಯ ಎರಡು ಬೆರಳುಗಳು ತುಂಡಾಗಿದೆ. ಸ್ಫೋಟದಲ್ಲಿ ಮನೆ ಕೂಡ ಹಾನಿಯಾಗಿದ್ದು, ಅವರನ್ನು ಉಳ್ಳಿಯೇರಿಯ ಮಲಬಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆತನ ವಿರುದ್ಧ ಸ್ಫೋಟಕಗಳನ್ನು ನಿರ್ವಹಿಸಿದ ಪ್ರಕರಣವನ್ನೂ ದಾಖಲಿಸಿದ್ದಾರೆ. ಬಾಂಬ್ ಹೇಗೆ ಸ್ಫೋಟಗೊಂಡಿತು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಹೊರಗಿನಿಂದ ಬಂದ ವಾಹನದಲ್ಲಿ ಬಿಜು ಅವರನ್ನು ರಹಸ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಸಿಪಿಐ(ಎಂ) ಪೆರಿಂಗೋಮ್ ವಲಯ ಕಾರ್ಯದರ್ಶಿ ಸಿ.ಸತ್ಯಬಾಲನ್ ಆರೋಪಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲದ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಆರ್‌ಎಸ್‌ಎಸ್ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ

ಬಾಂಬ್‌ಗಳನ್ನು ಸೃಷ್ಟಿಸಲು ಮತ್ತು ಹಿಂಸಾಚಾರ ನಡೆಸಲು ಆರ್‌ಎಸ್‌ಎಸ್ ರೂಪಿಸಿರುವ ಷಡ್ಯಂತ್ರವನ್ನು ಪೊಲೀಸರು ಬಹಿರಂಗಪಡಿಸಬೇಕು. ಪ್ರದೇಶವನ್ನು ಸಂಘರ್ಷದ ಪ್ರದೇಶವನ್ನಾಗಿ ಮಾಡುವ ಕ್ರಮದ ವಿರುದ್ಧ ಜನರು ಕೈಜೋಡಿಸಬೇಕು ಎಂದು ಪಕ್ಷ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News