ತಮಿಳುನಾಡು ಶಾಲಾ ಬಾಲಕಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ನಡೆಸಲಿದೆ: ಮದ್ರಾಸ್‌ ಹೈಕೋರ್ಟ್‌

Update: 2022-01-31 09:24 GMT

ಚೆನ್ನೈ: ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ತಮಿಳುನಾಡಿನಲ್ಲಿ 17 ವರ್ಷದ ಶಾಲಾ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಮದ್ರಾಸ್ ಹೈಕೋರ್ಟ್ ಇಂದು ಆದೇಶಿಸಿದೆ. 12 ನೇ ತರಗತಿಯ ವಿದ್ಯಾರ್ಥಿನಿ ಜನವರಿ 9 ರಂದು ತಂಜಾವೂರಿನ ತನ್ನ ಮನೆಯಲ್ಲಿ ವಿಷ ಸೇವಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಹಾಸ್ಟೆಲ್ ವಾರ್ಡನ್ ನನ್ನು ಬಂಧಿಸಲಾಗಿತ್ತು.

ಕಳೆದ ವಾರ ಹರಿದಾಡಿದ್ದ ವೀಡಿಯೊದಲ್ಲಿ, ಬಾಲಕಿಯು ವಾರ್ಡನ್‌ ಕೊಠಡಿಗಳನ್ನು ಸ್ವಚ್ಛಗೊಳಿಸಲು ಮತ್ತು ಇತರ ಕೆಲಸಗಳನ್ನು ಮಾಡಲು ಬಲವಂತಪಡಿಸಿದ್ದರಿಂದ ತನಗೆ ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ನನಗೆ ನನ್ನ ಅಂಕಗಳು ಕಡಿಮೆಯಾಗುವ ಕುರಿತು ಆತಂಕವಾಗಿತ್ತು ಎಂದು ಹೇಳಿಕೆ ನೀಡಿದ್ದಳು.

ಪರಿಶೀಲಿಸದ ವೀಡಿಯೊ ಪ್ರಕಾರ, "ನನಗೆ ನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ನನ್ನ ಅಂಕಗಳು ಕಡಿಮೆಯಾಗುತ್ತವೆ ಎಂದು ನಾನು ವಿಷ ಸೇವಿಸಿದ್ದೇನೆ" ಎಂದು ಹುಡುಗಿ ಹೇಳಿದ್ದಳು.

ಆಕೆಯ ಮರಣದ ನಂತರ ಹರಿದಾಡಿದ್ದ ವೀಡಿಯೊದಲ್ಲಿ, ಆಕೆಯ ಪೋಷಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ಕಿರುಕುಳ ಮತ್ತು ನಿಂದನೆಗೆ ಒಳಗಾಗಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಳು.

"ಎರಡು ವರ್ಷಗಳ ಹಿಂದೆ ಅವರು ನನ್ನನ್ನು ಮತ್ತು ನನ್ನ ಪೋಷಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಕೇಳಿಕೊಂಡರು. ಅವರು ನನ್ನ ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿದರು" ಎಂದು ಬಾಲಕಿ ಹೇಳಿದ್ದಳು. ಈ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಇದೀಗ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ವೀಡಿಯೋಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವ್ಯಕ್ತಿಗೆ ಕಿರುಕುಳ ನೀಡಬೇಡಿ ಮತ್ತು ತನಿಖೆಯತ್ತ ಗಮನಹರಿಸಿ ಎಂದು ಪೊಲೀಸರಿಗೆ ತಿಳಿಸಿದೆ.

ಆಕೆಯ ಪೋಷಕರು ಈ ಹಿಂದೆ ಪೊಲೀಸರಿಗೆ ಅಥವಾ ಮ್ಯಾಜಿಸ್ಟ್ರೇಟ್‌ಗೆ ನಮಗೆ ಮತಾಂತರವಾಗುವಂತೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರನ್ನು ನೀಡಿಯೇ ಇಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News