ಸಾರ್ವಜನಿಕ ಸೇವೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಿ
ದೇಶದಲ್ಲಿ ಕೊರೋನ ಸಾಂಕ್ರಾಮಿಕತೆಯ ಮೂರನೇ ವರ್ಷಕ್ಕೆ ನಾವು ಕಾಲಿಟ್ಟಿರುವಂತೆಯೇ, ಉದ್ಯೋಗ ಹಾಗೂ ಖರೀದಿ ಬೇಡಿಕೆಯಲ್ಲಿ ಕಳಪೆ ಮಟ್ಟದ ಚೇತರಿಕೆಯೊಂದಿಗೆ ಆರ್ಥಿಕತೆಯು ಬಿಕ್ಕಟ್ಟಿನ ಲಕ್ಷಣಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಿದೆ. ‘ಐಸಿಇ 360’ ಸಮೀಕ್ಷೆಯಿಂದ ತಿಳಿದು ಬಂದಿದೆ. 2021ರಲ್ಲಿ ಕಡು ಬಡತನದಲ್ಲಿರುವ ಭಾರತೀಯರ ಪೈಕಿ ಶೇ.20ರಷ್ಟು ಆದಾಯದಲ್ಲಿ ಶೇ.53ರಷ್ಟು ಕುಸಿತವುಂಟಾಗಿತ್ತು. ಇದೇ ಅವಧಿಯಲ್ಲಿ ಶೇ.20ರಷ್ಟು ಶ್ರೀಮಂತರದ ಆದಾಯದಲ್ಲಿ ಶೇ.39ರಷ್ಟು ಏರಿಕೆಯಾಗಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.
2021ರ ಡಿಸೆಂಬರ್‌ನಲ್ಲಿ ನಿರುದ್ಯೋಗದ ಮಟ್ಟವು ನಗರ ಪ್ರದೇಶಗಳಲ್ಲಿ ಶೇ.9.3 ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶೇ.7.3 ಆಗಿದ್ದು ಗರಿಷ್ಠ ಹೆಚ್ಚಳವನ್ನು ಕಂಡಿತ್ತು. ಕೊರೋನ ವೈರಸ್ ಸೋಂಕಿಕ ಮೂರನೇ ಅಲೆ ಹಾಗೂ ಅದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧಗಳ ಹೇರಿಕೆಯಾಗಿರುವುದರಿಂದ ಕಟ್ಟಡ ನಿರ್ಮಾಣದಂತಹ ನಿರ್ಣಾಯಕ ವಲಯಗಳಲ್ಲಿ ಉದ್ಯಮದ ಮೇಲೆ ಮತ್ತೊಮ್ಮೆ ದುಷ್ಪರಿಣಾಮವುಂಟಾಗುವ ಸಾಧ್ಯತೆಯಿದೆ.
ಕುಂಠಿತಗೊಂಡ ಆರ್ಥಿಕ ಬೆಳವಣಿಗೆ, ಮಡುಗಟ್ಟಿದ ಗ್ರಾಮೀಣ ಕೂಲಿ ವೇತನ ಹಾಗೂ ಅಧಿಕ ಮಟ್ಟದ ನಿರುದ್ಯೋಗ ದರ ಇವು 2015ರಿಂದೀಚೆಗೆ ಅದರಲ್ಲೂ ವಿಶೇಷವಾಗಿ ನೋಟು ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆಯ ಜಾರಿಯ ಆನಂತರದ ದೇಶದ ಆರ್ಥಿಕತೆಯಲ್ಲಿ ಕಂಡುಬಂದಿರುವ ಗುಣಲಕ್ಷಣಗಳಾಗಿವೆ. ಇತ್ತೀಚೆಗೆ ಪ್ರಕಟವಾದ 2022ರ ಜಾಗತಿಕ ಅಸಮಾನತಾ ವರದಿಯು, ಭಾರತ ಜಗತ್ತಿನಲ್ಲಿ ಅತ್ಯಧಿಕ ಆರ್ಥಿಕ ಅಸಮಾನತೆಯಿರುವ ರಾಷ್ಟ್ರಗಳಲ್ಲೊಂದಾಗಿದೆ ಎಂದು ಹೇಳಿದೆ. ಭಾರತದ ಒಟ್ಟು ಶೇ.10ರಷ್ಟು ಜನಸಂಖ್ಯೆಯು ರಾಷ್ಟ್ರೀಯ ಆದಾಯದಲ್ಲಿ ಶೇ.57ರಷ್ಟು ಪಾಲನ್ನು ಹೊಂದಿದೆಯಾದರೆ, ತಳಮಟ್ಟದಲ್ಲಿರುವವರ ಪೈಕಿ ಶೇ.50ರಷ್ಟು ಮಂದಿ ಕೇವಲ ಶೇ.13ರಷ್ಟು ರಾಷ್ಟ್ರೀಯ ಆದಾಯದಲ್ಲಿ ಪಾಲು ಪಡೆದಿದ್ದಾರೆ.
ಉದ್ಯೋಗ ಹಾಗೂ ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳಿಗೆ ಹಣವನ್ನು ವೆಚ್ಚ ಮಾಡುವ ಮೂಲಕ ಸರಕಾರವು ಗ್ರಾಹಕ ಬೇಡಿಕೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚುತ್ತಿರುವ ಅಸಮಾನತೆ ಹಾಗೂ ದೇಶದ ಒಂದು ದೊಡ್ಡ ಪ್ರಮಾಣದ ಜನಸಂಖ್ಯೆಯಲ್ಲಿ ಖರೀದಿ ಶಕ್ತಿಯ ಕುಸಿತದ ಈ ಸನ್ನಿವೇಶದಲ್ಲಿ ಸರಕಾರವು ಸಂಪತ್ತಿನ ಮರುಹಂಚಿಕೆಯ ಮೇಲೆ ಅಪಾರ ಗಮನಹರಿಸಬೇಕಾಗುತ್ತದೆ. ಕೊರೋನ ಸಾಂಕ್ರಾಮಿಕದಿಂದಾಗಿ ಜಾಗತಿಕ ಮಟ್ಚದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿರುವ ಹಿನ್ನೆಲೆಯಲ್ಲಿ, ದೇಶದ ಆರ್ಥಿಕತೆಯನ್ನು ಚೇತರಿಕೆಯ ಹಾದಿಯತ್ತ ಕೊಂಡೊಯ್ಯಲು ಎಲ್ಲಾ ದೇಶಗಳ ಸರಕಾರಗಳು ವಿಸ್ತಾರವಾದಂತಹ ಬಜೆಟನ್ನು ರೂಪಿಸಬೇಕಾಗಿರುವುದು ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವಾಗಿದೆ ಎಂಬ ಬಗ್ಗೆ ಜಗತ್ತಿನಾದ್ಯಂತ ಸಹಮತವಿದೆ. ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾವು ಎಂದಿಗಿಂತ ಹೆಚ್ಚು ದೊಡ್ಡ ಪ್ರಮಾಣದ ಬಜೆಟ್ ಖರ್ಚು ಮಾಡುತ್ತಿರುವುದು ಅಧಿಕ ಪ್ರಮಾಣದ ವಿತ್ತೀಯ ಕೊರತೆಗೆ ಕಾರಣವಾಗಿದೆ.
ಮುಂದುವರಿದ ಆರ್ಥಿಕತೆಯ ರಾಷ್ಟ್ರಗಳಲ್ಲಿ , ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.11.7ರಷ್ಟನ್ನು ಹೆಚ್ಚುವರಿ ಖರ್ಚುಗಳಿಗಾಗಿ ಹಾಗೂ 2020 ಜನವರಿಯಲ್ಲಿ ಕೊರೋನ ಸಾಂಕ್ರಾಮಿಕದ ಹಾವಳಿಯ ಆರಂಭದ ಬಳಿಕ ಉಂಟಾಗಿರುವ ಆದಾಯ ನಷ್ಟವನ್ನು ಸರಿದೂಗಿಸಲಿಕ್ಕಾಗಿ ನಿಗದಿಪಡಿಸಲಾಗಿದೆ. ಆದರೆ ಉದಯೋನ್ಮುಖವಾದ ಆರ್ಥಿಕತೆಯ ದೇಶಗಳಲ್ಲಿ ಈ ಅನುದಾನವು ಅತ್ಯಂತ ಕಡಿಮೆಯಾಗಿದ್ದು ಶೇ.5.67 ಮಾತ್ರವೇ ಆಗಿದೆ. ಉದಯೋನ್ಮುಖ ಆರ್ಥಿಕತೆಯ ರಾಷ್ಟ್ರಗಳಲ್ಲೊಂದಾದ ಭಾರತದಲ್ಲಿ ಇದಕ್ಕಾಗಿ ವ್ಯಯಿಸಲಾದ ಹಣವು ಶೇ.4.09 ಮಾತ್ರವೇ ಆಗಿದೆ. ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸಂರಕ್ಷಣೆಯಂತಹ ವಲಯಗಳಲ್ಲಿ ನಿಯಮಿತವಾದ ಸಾರ್ವಜನಿಕ ವ್ಯಯಿಸುವಿಕೆಯು ಇತರ ಉದಯೋನ್ಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತೀರಾ ಕಡಿಮೆಯಾಗಿದೆ. ಹೀಗಾಗಿ ಸಾರ್ವಜನಿಕ ಸೇವೆಗಳನ್ನು ಪಡೆಯಲು ಇರುವ ಅಂತರವು ತುಂಬಾ ಅಧಿಕವಾಗಿದೆ.
ಬಂಡವಾಳ ಖರ್ಚಿನ ಮೇಲೆ ಸರಕಾರವು ಮಾಡುತ್ತಿರುವ ವೆಚ್ಚಕ್ಕೆ ಮಾಧ್ಯಮ ಹಾಗೂ ನೀತಿ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಬಂಡವಾಳ ಕ್ಷೇತ್ರದ ಮೇಲೆ ಸರಕಾರವು ವೆಚ್ಚ ಮಾಡುವುದರಿಂದ ಅದಕ್ಕೆ ನೇರ ಪ್ರಯೋಜನ ದೊರೆಯುವುದು ಮಾತ್ರವಲ್ಲದೆ ಆರ್ಥಿಕತೆಯ ಪುನಶ್ಚೇತನಕ್ಕೂ ಸಹಕಾರಿಯಾಗಲಿದೆ. ಸಾರ್ವಜನಿಕ ಸೇವೆಗಳು, ಆರೋಗ್ಯ, ಶಿಕ್ಷಣ ಹಾಗೂ ಪಾಲನೆಯಂತಹ ಸಾರ್ವತ್ರಿಕ ಹಾಗೂ ಸಾರ್ವಜನಿಕ ಸೇವೆಗಳನ್ನು ಉಚಿತವಾಗಿ ಒದಗಿಸುವುದರಿಂದ ಮಾನವಾಭಿವೃದ್ಧಿಯಲ್ಲಿ ಸಮಾನವಾದ ಸುಧಾರಣೆಗಳಿಗೆ ಕೊಡುಗೆಯನ್ನು ನೀಡಬಹುದಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಾಗೂ ಎಂನರೇಗಾದಂತಹ ಕಾರ್ಯಕ್ರಮಗಳು ಇಂತಹ ಸಂಕಷ್ಟದ ಸಮಯದಲ್ಲಿ ಅತ್ಯಂತ ಅಗತ್ಯವಿರುವ ಸಾಂತ್ವನವನ್ನು ನೀಡುತ್ತದೆ. ಇಂತಹ ಹಲವಾರು ಸೇವೆಗಳು ಕಾರ್ಮಿಕ ಕೇಂದ್ರೀತವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಹಾಗೂ ಗಣನೀಯವಾದ ಪರಿಣಾಮಗಳನ್ನು ಬೀರಲಿದೆ. ಇವುಗಳಿಗಾಗಿ ಸರಕಾರವು ವೆಚ್ಚ ಮಾಡುವುದರಿಂದ ದೇಶದ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಾಗಲಿದೆ.
ಸಾರ್ವಜನಿಕ ಸೇವೆಗಳಲ್ಲಿ ಅಸಮರ್ಪಕ ವ್ಯಯಿಸುವಿಕೆ
ಭಾರತದಲ್ಲಿ ಸಾರ್ವಜನಿಕ ಸೇವೆಗಳಿಗೆ ವ್ಯಯಿಸುವಿಕೆಯು ದೀರ್ಘ ಸಮಯದಿಂದಲೂ ಅಸಮರ್ಪಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ವಲಯಗಳಿಗೆ ನೀಡಲಾಗುತ್ತಿರುವ ಬಜೆಟ್ ಅನುದಾನದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಕೊರೋನ ಸಾಂಕ್ರಾಮಿಕವು ಈ ನ್ಯೂನತೆಯನ್ನು ಇನ್ನೂ ಹೆಚ್ಚಿಸಿದೆ. 2020ರ ಮಾರ್ಚ್‌ನಿಂದ ಬಹಳ ಸಮಯದವರೆಗೆ ಶಾಲೆಗಳು ಮುಚ್ಚಿದ್ದವು. ಆನಂತರ ಚಾಲ್ತಿಗೆ ಬಂದ ಆನ್‌ಲೈನ್ ಅಥವಾ ಡಿಜಿಟಲ್ ಶಾಲಾ ತರಗತಿಗಳಿಂದಾಗಿ ಹಲವಾರು ಮಂದಿ ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಶಾಲಾ ಶಿಕ್ಷಣದಿಂದ ಹೊರಗುಳಿಯಲ್ಪಟ್ಟರು. ಈಗಾಗಲೇ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ ಸರಕಾರಿ ಶಾಲೆಗಳಲ್ಲಿ ಖಾಲಿಬಿದ್ದಿರುವ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು, ಶಿಕ್ಷಕರಿಗೆ ತರಬೇತಿ ಹಾಗೂ ಸಂಪನ್ಮೂಲ ಬೆಂಬಲವನ್ನು ನೀಡಲು ಹಾಗೂ ಆನ್‌ಲೈನ್ ಶಿಕ್ಷಣದ ನಿರ್ವಹಣೆಗಾಗಿ ಶಿಕ್ಷಕರಿಗೆ ಸಂಪನ್ಮೂಲದ ಬೆಂಬಲವನ್ನು ನೀಡುವುದಕ್ಕಾಗಿ ಹಣವನ್ನು ವೆಚ್ಚ ಮಾಡುವ ಮೂಲಕ ಅವುಗಳಿಗೆ ಉತ್ತೇಜನ ನೀಡಬೇಕಾಗಿದೆ. ಶಿಕ್ಷಣದಿಂದ ಯಾವುದೇ ಮಗುವು ಹೊರಗುಳಿಯದಂತೆ ನೋಡಿಕೊಳ್ಳಲು ಡಿಜಿಟಲ್ ಮೂಲಸೌಕರ್ಯವನ್ನು ಹೆಚ್ಚಿಸಬೇಕಾಗಿದೆ. ಆದಾಗ್ಯೂ 2021ರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿನ ಬಜೆಟ್ ಅನುದಾನದಲ್ಲಿ ಇಳಿಕೆ ಕಂಡುಬಂದಿದೆ. 2021ರ ನವೆಂಬರ್ ತಿಂಗಳ ಅಂತ್ಯದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಗೆ ನೀಡಲಾದ ಬಜೆಟ್ ಅನುದಾನದ ಕೇವಲ ಶೇ.43ರಷ್ಟನ್ನು ಖರ್ಚು ಮಾಡಲಾಗಿದೆ.
ಮಹಿಳೆಯರು ಹಾಗೂ ಮಕ್ಕಳಿಗಾಗಿ ಮಹತ್ವದ ಯೋಜನೆಗಳನ್ನು ನಡೆಸುತ್ತಿರುವ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೂ ಕೂಡಾ 2021-22ನೇ ಸಾಲಿನ ಬಜೆಟ್‌ನಲ್ಲಿ ನೀಡಲಾದ ಒಟ್ಟಾರೆ ಅನುದಾನದಲ್ಲಿ ಕುಸಿತ ಕಂಡುಬಂದಿದೆ. ಈವರೆಗೆ ಅದು ತನಗೆ ನೀಡಲಾದ ಬಜೆಟ್ ಅನುದಾನದ ಶೇ.50ರಷ್ಟನ್ನು ಮಾತ್ರ ವ್ಯಯಿಸಿದೆ. ಇವುಗಳಿಗೆ ಹೋಲಿಸಿದರೆ ಆರೋಗ್ಯ ಸಚಿವಾಲಯವು ಮಾಡಿರುವ ವೆಚ್ಚವು ಉತ್ತಮವಾಗಿದ್ದು, ಶೇ.64ರಷ್ಟಾಗಿದೆ. ಆದರೆ ಈ ಅನುದಾನದ ಮೊತ್ತದ ಹೆಚ್ಚಿನ ಹಣವು ಕೋವಿಡ್-19 ಲಸಿಕೀಕರಣ ಅಭಿಯಾನಕ್ಕಾಗಿ ವ್ಯಯಿಸಲಾಗಿದೆ.
ನಮ್ಮ ಆರೋಗ್ಯಪಾಲನಾ ವ್ಯವಸ್ಥೆಯು ನಿರಂತರವಾಗಿ ಒತ್ತಡವನ್ನು ಎದುರಿಸುತ್ತಿರುವುದರಿಂದ ಭಾರತದ ಆರೋಗ್ಯಪಾಲನಾ ವ್ಯವಸ್ಥೆಯನ್ನು ಬಲಪಡಿಸುವಂತಹ ಎಲ್ಲಾ ಕ್ಷೇತ್ರಗಳಲ್ಲಿ ಅಧಿಕ ಹೂಡಿಕೆಯನ್ನು ಮಾಡುವ ಅಗತ್ಯವಿದೆ. ರಾಷ್ಟ್ರೀಯ ಆರೋಗ್ಯ ಮಿಶನ್‌ನಂತಹ ಯೋಜನೆಗಳಿಗಾಗಿನ ಬಜೆಟ್ ಅನುದಾನವು ಕುಸಿಯುತ್ತಾ ಬಂದಿದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಮಾಡಲಾಗುವ ವೆಚ್ಚವು ದೇಶದ ಒಟ್ಟು ಜಿಡಿಪಿಯ ಕೇವಲ ಶೇ.1.3 ಆಗಿದೆ. ಇದು ಆರೋಗ್ಯದ ಮೇಲೆ ಒಟ್ಟು ಜಿಡಿಪಿಯ ಶೇ.3ರಷ್ಟು ವೆಚ್ಚ ಮಾಡುವ ಸರಕಾರದ ನಿಗದಿತ ಗುರಿಯನ್ನು ತಲುಪುವಲ್ಲಿ ಭಾರತ ಇನ್ನೂ ತೀರಾ ಹಿಂದೆ ಬಿದ್ದಿದೆ. ಎಲ್ಲರಿಗೂ ನಳ್ಳಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ, ಕಳೆದ ವರ್ಷ ಬಜೆಟ್ ಅನುದಾನದಲ್ಲಿ ಭಾರೀ ಹೆಚ್ಚಳವನ್ನು ಕಂಡಿದ್ದ ಜಲಶಕ್ತಿ ಸಚಿವಾಲಯವು ಕೇವಲ ಶೇ.34ರಷ್ಟು ಅನುದಾನವನ್ನು ಖರ್ಚು ಮಾಡಲು ಮಾತ್ರವೇ ಸಫಲವಾಗಿದೆ.
ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯು 2021ರ ನವೆಂಬರ್‌ವರೆಗೆ ಬಜೆಟ್ ಅಂದಾಜಿನ ಕೇವಲ 11 ಶೇಕಡ ಮಾತ್ರ ವೆಚ್ಚ ಮಾಡಲು ಸಫಲವಾಗಿತ್ತು. ಭಾರತದಲ್ಲಿ ಸಾರ್ವಜನಿಕ ಸೇವೆಗಳಿಗೆ ವೆಚ್ಚ ಮಾಡುವಲ್ಲಿ ಇರುವ ದೀರ್ಘ ಕಾಲದ ಅಂತರಗಳನ್ನು ಸರಿಪಡಿಸಲು ಕೊರೋನ ಸಾಂಕ್ರಾಮಿಕವು ಒಂದು ಅವಕಾಶವಾಗಿದೆ. 2022-23ರ ಸಾಲಿನ ಬಜೆಟನ್ನು ಫೆಬ್ರವರಿ 1ರಂದು ಮಂಡಿಸಲಾಗುವುದು. ಉದ್ಯೋಗ ಸೃಷ್ಟಿ ಹಾಗೂ ಸಾರ್ವತ್ರಿಕವಾದ ಸಾರ್ವಜನಿಕ ಸೇವೆಗಳ ಲಭ್ಯತೆಯನ್ನು ಕೇಂದ್ರವಾಗಿಟ್ಟುಕೊಂಡು ಪುನಶ್ಚೇತನ ಯೋಜನೆಯನ್ನು ಪ್ರಸ್ತುತಪಡಿಸುವ ಮೂಲಕ ದೇಶ ಎದುರಿಸುತ್ತಿರುವ ಪ್ರಸಕ್ತ ಬಿಕ್ಕಟ್ಟಿಗೆ ಸರಕಾರ ಸಮರ್ಥವಾಗಿ ಪ್ರತಿಕ್ರಿಯಿಸಲಿದೆಯೆಂಬ ಆಶಾವಾದವನ್ನು ಭಾರತೀಯರು ಹೊಂದಿದ್ದಾರೆ.