ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 126ರಿಂದ 70ಕ್ಕೆ ತಗ್ಗಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Update: 2022-01-31 22:06 IST
ಹೊಸದಿಲ್ಲಿ,ಜ.31: ವರ್ಷಗಳು ಕಳೆದಂತೆ ನಕ್ಸಲರು ಕಾರ್ಯಾಚರಿಸುವ ಮತ್ತು ಹಿಂಸಾಚಾರವನ್ನು ನಡೆಸುವ ಪ್ರದೇಶಗಳು ಗಮನಾರ್ಹವಾಗಿ ಕಡಿಮೆಯಾಗಿದ್ದು,ತನ್ನ ಸರಕಾರದ ಸಂಘಟಿತ ಪ್ರಯತ್ನಗಳಿಂದಾಗಿ ಈಗ ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 126ರಿಂದ 70ಕ್ಕೆ ತಗ್ಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಹೇಳಿದರು.
ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಜಂಟಿ ಬೈಠಕ್‌ನ್ನು ಉದ್ದೇಶಿಸಿ ಮಾತನಾಡಿದ ಅವರು,ದಶಕಗಳ ಕಾಲದ ಸಂಘರ್ಷವನ್ನು ಅಂತ್ಯಗೊಳಿಸಲು ಅಸ್ಸಾಮಿನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ ಮತ್ತು ಶಾಂತಿ ಹಾಗೂ ಸಮೃದ್ಧಿಯ ಹೊಸ ಅಧ್ಯಾಯವು ಆರಂಭಗೊಂಡಿದೆ ಎಂದರು. ಈಶಾನ್ಯ ಭಾರತದಲ್ಲಿನ ಬಂಡಾಯವನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು,ಪ್ರದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಮೋದಿ ಸರಕಾರದ ಪ್ರಯತ್ನಗಳು ಐತಿಹಾಸಿಕ ಯಶಸ್ಸನ್ನು ಸಾಧಿಸಿವೆ ಎಂದು ಹೇಳಿದರು.