ಅಮೆರಿಕದಲ್ಲಿ ವಿಶ್ವದಾಖಲೆಯ ಮಿಂಚು; ಇದರ ಉದ್ದ ಎಷ್ಟಿತ್ತು ಗೊತ್ತೇ ?

Update: 2022-02-01 02:38 GMT
ಸಾಂದರ್ಭಿಕ ಚಿತ್ರ

ಜಿನೀವಾ: ಬಾನಂಚಿನಲ್ಲಿ ಎರಡು ವರ್ಷದ ಹಿಂದೆ ಮೂಡಿ ಮಾಯವಾಗಿದ್ದ ಮಿಂಚಿನ ಉದ್ದ ಸುಮಾರು 770 ಕಿಲೋಮೀಟರ್‌ಗಳಷ್ಟಾಗಿತ್ತು ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ. ಇದು ನೂತನ ವಿಶ್ವದಾಖಲೆಯಾಗಿದೆ.

ಇದುವರೆಗೆ ಸಂಭವಿಸಿದ ಅತಿ ಉದ್ದದ ಮಿಂಚು ಇದಾಗಿದ್ದು, 2020ರ ಎಪ್ರಿಲ್ 29ರಂದು ಇದರ ಉದ್ದವನ್ನು ಅಂದಾಜಿಸಲಾಗಿತ್ತು. ಇದರ ಉದ್ದ 768 ಕಿಲೋಮೀಟರ್‌ಗಳಾಗಿದ್ದು, ಮಿಸಿಸಿಪ್ಪಿ, ಲೂಸಿಯಾನಾ ಮತ್ತು ಟೆಕ್ಸಾಸ್‌ನಾದ್ಯಂತ ಈ ಸುಧೀರ್ಘ ಮಿಂಚು ಕಂಡುಬಂದಿತ್ತು.

ಈ ಮಿಂಚಿನ ಉದ್ದ ನ್ಯೂಯಾರ್ಕ್ ಸಿಟಿ ಮತ್ತು ಕೊಲಂಬಸ್, ಓಹಿಯೊ ನಡುವಿನ ಅಥವಾ ಲಂಡನ್ ಮತ್ತು ಜರ್ಮನಿಯ ಹ್ಯಾಂಬರ್ಗ್ ನಡುವಿನ ಅಂತರಕ್ಕೆ ಸಮವಾಗಿತ್ತು ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಓ) ಹೇಳಿಕೆ ನೀಡಿದೆ.

2018ರ ಅಕ್ಟೋಬರ್ 31ರಂದು ದಕ್ಷಿಣ ಬ್ರೆಝಿಲ್‌ನಲ್ಲಿ ಕಂಡುಬಂದ ಅತಿ ಉದ್ದದ ಮಿಂಚಿಗಿಂತ ಈ ಮಿಂಚಿನ ಉದ್ದ ಸುಮಾರು 60 ಕಿಲೋಮೀಟರ್‌ಗಳಷ್ಟು ಅಧಿಕ ಎಂದು ಡಬ್ಲ್ಯುಎಂಓ ಸ್ಪಷ್ಟಪಡಿಸಿದೆ. ಸುಧೀರ್ಘ ಅವಧಿಯ ಮಿಂಚು ಕೂಡಾ ವಿಶ್ವದಾಖಲೆ ನಿರ್ಮಿಸಿದೆ ಎಂದು ಹವಾಮಾನ ಮತ್ತು ಹವಾಗುಣ ವೈಪರೀತ್ಯಗಳ ಬಗೆಗಿನ ತಜ್ಞರ ಸಮಿತಿ ಹೇಳಿದೆ.

2020ರ ಜೂನ್ 18ರಂದು ಉರುಗ್ವೆ ಮತ್ತು ಉತ್ತರ ಅರ್ಜೆಂಟೀನಾದಲ್ಲಿ ಕಂಡುಬಂದ ಮಿಂಚಿನ ಅವಧಿ 17.1 ಸೆಕೆಂಡ್ ಆಗಿದ್ದು, ಇದು ವಿಶ್ವದಾಖಲೆ ಎಂದು ಡಬ್ಲ್ಯುಎಂಓ ಹೇಳಿದೆ. ಈ ಹಿಂದೆ 2019ರ ಮಾರ್ಚ್ 4ರಂದು ಉತ್ತರ ಅರ್ಜೆಂಟೀನಾದಲ್ಲಿ ಕಂಡುಬಂದ ಸುಧೀರ್ಘ ಅವಧಿಯ ಮಿಂಚಿಗಿಂತ ಇದು 0.37 ಸೆಕೆಂಡ್ ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News