ದೇಶ ವಿಭಜನೆಯ ಬಳಿಕ ಮತ್ತೆ ಒಂದಾದ ಸಹೋದರರು
1947ರ ದೇಶ ವಿಭಜನೆಯ ಸಂದರ್ಭದಲ್ಲಿ ಬೇರೆ ಬೇರೆಯಾಗಿದ್ದ ಇಬ್ಬರು ಸಹೋದರರು ಇತ್ತೀಚೆಗೆ ಕರ್ತಾರ್‌ಪುರ ಗುರುದ್ವಾರದಲ್ಲಿ ಒಂದಾದರು. ಆದರೆ ಆ ಭೇಟಿಯು ಅಲ್ಪಅವಧಿಯದ್ದಾಗಿತ್ತು. ಈಗ ಅವರು ಕೆಲವು ವಾರಗಳನ್ನು ಜೊತೆಯಾಗಿ ಕಳೆಯಲಿದ್ದಾರೆ.
ದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಶನ್ ಶುಕ್ರವಾರ (ಜನವರಿ 28) ಪಂಜಾಬ್‌ನ ಭಟಿಂಡ ಜಿಲ್ಲೆಯ ಫುಲೆವಾಲ ಗ್ರಾಮದಲ್ಲಿರುವ ಸಿಕಾ ಖಾನ್‌ಗೆ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿರುವ ತನ್ನ ಸಹೋದರ ಮುಹಮ್ಮದ್ ಸಿದ್ದೀಕಿಯನ್ನು ಭೇಟಿಯಾಗಲು ಎರಡು ತಿಂಗಳ ವೀಸಾವನ್ನು ನೀಡಿದೆ.
74 ವರ್ಷಗಳ ಬಳಿಕ ಕರ್ತಾರ್‌ಪುರದಲ್ಲಿ ಭೇಟಿಯಾದ ಸಹೋದರರು ಕಣ್ಣೀರು ಸುರಿಸುತ್ತಾ ಪರಸ್ಪರರನ್ನು ಆಲಿಂಗಿಸುವ ದೃಶ್ಯ ವೈರಲ್ ಆದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಅಂದು ಅವರು ಕೇವಲ ಒಂದು ಗಂಟೆ ಮಾತ್ರ ಜೊತೆಗಿರಲು ಸಾಧ್ಯವಾಗಿತ್ತು. ಯಾಕೆಂದರೆ ಅವರು ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಬೇಕಾಗಿತ್ತು.
ಅದರ ಬಳಿಕ, ಸಹೋದರರು ಕೆಲವು ದಿನಗಳ ಕಾಲ ಜೊತೆಯಾಗಿರಲು ಸಾಧ್ಯವಾಗುವಂತೆ ಸಿಕಾ ಖಾನ್‌ರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಪ್ರಯತ್ನಗಳು ಆರಂಭಗೊಂಡವು. ಸಿಕಾ ಖಾನ್‌ಗೆ ವೀಸಾ ನೀಡುವಲ್ಲಿ ಭಾರತ ಮತ್ತು ಪಾಕಿಸ್ತಾನ- ಎರಡೂ ದೇಶಗಳ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಿದರು ಎಂಬುದಾಗಿ ಸಿಕಾ ಖಾನ್‌ರ ಗ್ರಾಮದ ನಿವಾಸಿ ಜಗ್ಸೀರ್ ಸಿಂಗ್ ‘ದ ವಯರ್’ಗೆ ತಿಳಿಸಿದ್ದಾರೆ.
‘‘ಮುಂದಿನ ಎರಡು-ಮೂರು ದಿನಗಳಲ್ಲಿ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅವರ ಸಹೋದರನ ಕುಟುಂಬವು ಅವರನ್ನು ವಾಘಾ ಗಡಿಯಲ್ಲಿ ಸ್ವಾಗತಿಸುತ್ತದೆ ಹಾಗೂ ಬಳಿಕ ಫೈಸಲಾಬಾದ್‌ಗೆ ಕರೆದುಕೊಂಡು ಹೋಗುತ್ತದೆ’’ಎಂದು ಜಗ್ಸೀರ್ ಹೇಳಿದರು.
‘‘ನಾನು ಎಷ್ಟು ಸಂತೋಷವಾಗಿದ್ದೇನೆ ಎನ್ನುವುದನ್ನು ಹೇಳಲು ಪದಗಳಿಲ್ಲ. ನನಗೆ ವೀಸಾ ಸಿಗಲು ಸಹಾಯ ಮಾಡಿದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ’’ ಎಂದು ದಿಲ್ಲಿಯಲ್ಲಿರುವ ಪಾಕಿಸ್ತಾನ ಹೈಕಮಿಶನ್ ಕಚೇರಿಯಿಂದ ಮನೆಗೆ ಮರಳುತ್ತಿದ್ದ ವೇಳೆ 75 ವರ್ಷದ ಸಿಕಾ ಖಾನ್ ‘ದ ವಯರ್’ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಕಳೆದ ಬಾರಿ, ಕರ್ತಾರ್‌ಪುರದಲ್ಲಿ ತನ್ನ ಸಹೋದರನನ್ನು ಭೇಟಿಯಾಗುವ ಮೊದಲು ಅವರು ಸಹೋದರನ ಕುಟುಂಬಕ್ಕಾಗಿ ಕೆಲವು ಉಡುಗೊರೆಗಳನ್ನು ಖರೀದಿಸಿದ್ದರು. ಆದರೆ, ಅದು ದಾರಿಯಲ್ಲಿ ಕಳೆದುಹೋಯಿತು ಎಂದು ಅವರು ತಿಳಿಸಿದರು. ‘‘ಈಗ ನಾನು ಕೆಲವು ಉಡುಗೊರೆಗಳನ್ನು ಖರೀದಿಸುತ್ತೇನೆ. ನನ್ನ ಸಹೋದರನ ಕುಟುಂಬ ಸದಸ್ಯರಿಗಾಗಿ ಬಳೆಗಳು ಮತ್ತು ಬಟ್ಟೆಗಳನ್ನು ಖರೀದಿಸಬೇಕಾಗಿದೆ. ನನ್ನ ಸಹೋದರನಿಗೆ ಅದು ಇಷ್ಟವಾಗುತ್ತದೆ ಎನ್ನುವುದು ನನಗೆ ಗೊತ್ತಿದೆ’’ ಎಂದರು.
ಪಂಜಾಬ್ ಮತ್ತು ಬಂಗಾಳದ ಗಡಿಯಲ್ಲಿ ನಡೆದ ಭಾರತ-ಪಾಕ್ ವಿಭಜನೆಯು ಉಪಖಂಡದ ಇತಿಹಾಸದಲ್ಲೇ ಅತ್ಯಂತ ರಕ್ತಸಿಕ್ತ ಅಧ್ಯಾಯಗಳ ಪೈಕಿ ಒಂದಾಗಿದೆ. ಅದು ಲಕ್ಷಾಂತರ ಜನರ ಬದುಕುಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಸಂಘರ್ಷದ ಅವಧಿಯಲ್ಲಿ ಸಾವಿರಾರು ಮಂದಿ ತಮ್ಮ ಕುಟುಂಬಗಳಿಂದ ಬೇರ್ಪಟ್ಟರು. ಅವರ ನೋವು ಹಲವು ಕಾದಂಬರಿಗಳು ಮತ್ತು ಚಿತ್ರಗಳಲ್ಲಿ ದಾಖಲಾಗಿವೆ. ಅವುಗಳ ಪೈಕಿ ಖುಷ್‌ವಂತ್ ಸಿಂಗ್‌ರ ‘ಟ್ರೈನ್ ಟು ಪಾಕಿಸ್ತಾನ್’, ಅಮೃತಾ ಪ್ರೀತಮ್‌ರ ‘ಪಿಂಜರ್’, ಭೀಷ್ಮ ಸಾಹ್ನಿಯ ‘ತಮಸ್’, ಎಮ್.ಎಸ್. ಸತ್ಯು ಅವರ ‘ಗರಮ್ ಹವಾ’ ಮತ್ತು ಸಬೀಹಾ ಸುಮಾರ್‌ರ ‘ಖಾಮೋಶ್ ಪಾನಿ’ ಮುಖ್ಯವಾದವುಗಳು.
ಹರ್ಯಾಣ ಉರ್ದು ಅಕಾಡಮಿಯ ಮಾಜಿ ಅಧ್ಯಕ್ಷ ಕಾಶ್ಮೀರಿ ಲಾಲ್ ಝಾಕಿರ್ ಬರೆದಿರುವ ಕಾದಂಬರಿ ‘ಕರ್ಮವಾಲಿ’ ಈ ಇಬ್ಬರು ಸಹೋದರರ ಅಗಲಿಕೆ ಮತ್ತು ಭೇಟಿಯಂತಹ ನೈಜ ಘಟನೆಗಳನ್ನು ಆಧರಿಸಿದೆ. ಈ ಕಾದಂಬರಿಯ ಕತೆಯು ವಿಭಜನೆಗೆ ಮೊದಲು ಪಂಜಾಬ್‌ನಲ್ಲಿ ವಾಸಿಸುತ್ತಿದ್ದ ಕರ್ಮೊ ಎಂಬ ಹೆಸರಿನ ಮಹಿಳೆಯ ಸುತ್ತ ಹೆಣೆಯಲಾಗಿದೆ.
ವಿಭಜನೆ ಸಂಬಂಧಿ ಉಹಾಪೋಹಗಳು ಹರಿದಾಡಲು ಅರಂಭಿಸಿದಾಗ ಅವರು ತನ್ನ ಕುಟುಂಬದ ಜೊತೆಗೆ ಪಾಕಿಸ್ತಾನಕ್ಕೆ ಹೋದರು. ಆದರೆ ಈ ಗಲಾಟೆಯಲ್ಲಿ ತನ್ನ ಮಗ ಖುಶಿಯರನ್ನು ಕಳೆದುಕೊಂಡರು. ಸಿಖ್ ಕುಟುಂಬವೊಂದು ಬಾಲಕನ್ನು ಸಾಕುತ್ತದೆ. ವರ್ಷಗಳ ಬಳಿಕ, ತನ್ನ ಮಗನ್ನು ಭೇಟಿಯಾಗಲು ಕರ್ಮೊಗೆ ಸಾಧ್ಯವಾಗುತ್ತದೆ.
ಈ ಇಬ್ಬರು ಸಹೋದರರ ಕತೆಯೂ ದುರಂತಮಯವಾಗಿದೆ. ಆದರೂ, ಅದು ಒಂದು ಭರವಸೆಯ ಭಾವನೆಯನ್ನು ಹುಟ್ಟಿಸುತ್ತದೆ.
ಸಿಕಾರ ತಾಯಿ ಮೂಲತಃ ಫುಲೆವಾಲ ಗ್ರಾಮದವರು (ಸಿಕಾ ಇಲ್ಲೇ ವಾಸಿಸುತ್ತಿರುವುದು). ಅವರನ್ನು ಲುದಿಯಾನ ಸಮೀಪದ ಜಗ್ರಾಂವ್‌ನಲ್ಲಿರುವ ಗ್ರಾಮವೊಂದರ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು.
ದೇಶ ವಿಭಜನೆಯ ಸಮಯದಲ್ಲಿ ಸಹೋದರರ ತಾಯಿಯು ಫುಲೆವಾಲ ಗ್ರಾಮದಲ್ಲಿರುವ ತನ್ನ ತವರು ಮನೆಗೆ ಚಿಕ್ಕ ಮಗ ಸಿಕಾ ಜೊತೆ ಬಂದಿದ್ದರು. ಆಗ ಸಿಕಾಗೆ ಕೇವಲ 6 ತಿಂಗಳು ಪ್ರಾಯ. ಶೀಘ್ರವೇ ಪರಿಸ್ಥಿತಿ ಉಲ್ಬಣಗೊಂಡಿತು. ಲಕ್ಷಾಂತರ ಜನರು ನಿರ್ವಸಿತರಾದರು, ಹತರಾದರು ಮತ್ತು ಪರಾರಿಯಾಗುವ ಅನಿವಾರ್ಯತೆಗೆ ಒಳಗಾದರು. ಪರಿಸ್ಥಿತಿ ಸುಧಾರಿಸಿದಾಗ, ಸಿಕಾರ ತಂದೆ ಮತ್ತು ಅಣ್ಣ ಜಗ್ರಾಂವ್‌ನಲ್ಲಿ ಇರಲಿಲ್ಲ.
ಸಿಕಾರ ಮಾವಂದಿರು ಅವರಿಗಾಗಿ ಎಲ್ಲ ಕಡೆಯೂ ಹುಡುಕಾಡಿದರು. ಆದರೆ ಅವರ ಸುದ್ದಿಯೇ ಇರಲಿಲ್ಲ. ತಿಂಗಳುಗಳ ಬಳಿಕ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡರು ಹಾಗೂ ಸಿಕಾ ಒಬ್ಬರನ್ನೇ ಬಿಟ್ಟು ಹೋದರು. ‘‘ಸಿಕಾ ಬಳಿಕ ತನ್ನ ಮಾವಂದಿರ ಮನೆಯಲ್ಲಿ ಬೆಳೆದರು ಹಾಗೂ ಈಗಲೂ ಅವರೊಂದಿಗೆ ವಾಸಿಸುತ್ತಿದ್ದಾರೆ’’ ಎಂದು ಜಗ್ಸೀರ್ ತಿಳಿಸಿದರು.
ತನ್ನ ಕುಟುಂಬದ ಹಿನ್ನೆಲೆ ಮತ್ತು ದೇಶ ವಿಭಜನೆಯ ನೋವಿನ ಬಗ್ಗೆ ಸಿಕಾಗೆ ತಿಳಿದಂದಿನಿಂದ, ತನ್ನ ತಂದೆ ಮತ್ತು ಸಹೋದರನನ್ನು ಯಾವತ್ತಾದರೂ ನೋಡುವ ಭರವಸೆಯನ್ನು ಇಟ್ಟುಕೊಂಡಿದ್ದರು. ಅವರು ಎಲ್ಲಾದರೂ ಜೀವಂತವಾಗಿದ್ದಾರೆ ಎಂದು ನಂಬಿದ್ದರು.
2019ರಲ್ಲಿ ‘ಪಂಜಾಬಿ ಲೆಹರ್’ ಎಂಬ ಪಾಕಿಸ್ತಾನದ ಸಂಘಟನೆಯೊಂದು ಮುಹಮ್ಮದ್ ಸಿದ್ದೀಕಿ (ಈಗ 84 ವರ್ಷ)ಯ ಕತೆಯನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಿಸಿತು. ಅದನ್ನು ನೋಡಿದ ಬಳಿಕ ಇಬ್ಬರು ಸಹೋದರರು ಪರಸ್ಪರರನ್ನು ಪತ್ತೆಹಚ್ಚಿದರು ಹಾಗೂ ಪರಸ್ಪರರ ಸಂಪರ್ಕಕ್ಕೆ ಮರಳಿದರು.
ಭಾರತೀಯ ಸಿಖ್ ಯಾತ್ರಿಕರು ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಉದ್ಘಾಟನೆಯಾದ ಬಳಿಕ, 2020 ಮಾರ್ಚ್ 23ರಂದು ಭೇಟಿಯಾಗಲು ಸಹೋದರರು ನಿರ್ಧರಿಸಿದರು. ಆದರೆ, ಅದಕ್ಕಿಂತ ಎರಡು ದಿನಗಳ ಮೊದಲು ಕೋವಿಡ್-19 ಲಾಕ್‌ಡೌನ್ ಘೋಷಿಸಲಾಯಿತು ಹಾಗೂ ಕಾರಿಡಾರನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಯಿತು.
‘‘ಒಂದೂವರೆ ವರ್ಷದ ಬಳಿಕವಷ್ಟೇ, ಅಂದರೆ 2021 ನವೆಂಬರ್ 17ರಂದು ಕರ್ತಾರ್‌ಪುರ ಕಾರಿಡಾರನ್ನು ಮತ್ತೆ ತೆರೆಯಲಾಯಿತು. ಅದರ ಬಳಿಕ ಸಹೋದರರ ಭೇಟಿ ಕಾರ್ಯಕ್ರಮವನ್ನು ಮರು ನಿಗದಿಪಡಿಸಿದೆವು ಹಾಗೂ ಜನವರಿ 12ರಂದು ಕರ್ತಾರ್‌ಪುರ ತಲುಪಿದೆವು’’ ಎಂದು ಜಗ್ಸೀರ್ ನುಡಿದರು.
ಸಹೋದರರು ಪರಸ್ಪರರನ್ನು ಭೇಟಿಯಾದಾಗ ಭಾವಾವೇಶಕ್ಕೆ ಒಳಗಾದರು ಹಾಗೂ ಅವರ ಕಣ್ಣೀರು ನಿರಂತರವಾಗಿ ಹರಿಯುತ್ತಲೇ ಇತ್ತು ಎಂದರು. ಸಿಕಾ ಈಗಲಾದರೂ ಕೆಲವು ದಿನಗಳ ಕಾಲ ತನ್ನ ಸಹೋದರನೊಂದಿಗೆ ಇರಲು ಸಾಧ್ಯವಾಗಿರುವುದಕ್ಕಾಗಿ ಇಡೀ ಗ್ರಾಮವೇ ಆನಂದತುಂದಿಲವಾಗಿದೆ. ಈ ಕ್ಷಣಗಳಿಗಾಗಿ ಸಿಕಾ ಜೀವನಪೂರ್ತಿ ಕಾದಿದ್ದಾರೆ.
ಸಿಕಾರ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಏನೂ ಇಲ್ಲ. ಅವರು ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕರ್ತಾರ್‌ಪುರ ಪ್ರವಾಸದ ವೆಚ್ಚವನ್ನು ಭರಿಸುವುದಕ್ಕಾಗಿ ಇಡೀ ಗ್ರಾಮದ ಜನರು ದೇಣಿಗೆ ನೀಡಿದ್ದಾರೆ. ಅವರು ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಹೋಗಿ ಬರುವ ವೆಚ್ಚವನ್ನು ಭರಿಸುವುದಕ್ಕಾಗಿ ಗ್ರಾಮದ ಜನರು ಇನ್ನೊಮ್ಮೆ ದೇಣಿಗೆ ನೀಡಲಿದ್ದಾರೆ ಎಂದು ಜಗ್ಸೀರ್ ನುಡಿದರು.
ದುರಂತದೊಂದಿಗೆ ಆರಂಭಗೊಂಡ ಅವರ ಕತೆಯು ಸುಖಾಂತಗೊಂಡಿರುವುದಕ್ಕಾಗಿ ನಮಗೆಲ್ಲಾ ಸಂತೋಷವಾಗಿದೆ. ‘‘1947ರಲ್ಲಿ ಏನಾಗಿದೆಯೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ತಮ್ಮ ಬದುಕು ಕೊನೆಗೊಳ್ಳುವ ಮುನ್ನ ಅವರು ಈಗ ಜೊತೆಯಾಗಿ ತಮ್ಮ ನೋವು ಮತ್ತು ಸಂತೋಷವನ್ನಾದರೂ ಹಂಚಿಕೊಳ್ಳಬಹುದಾಗಿದೆ’’ ಎಂದರು.
ಈ ನಡುವೆ, ಸಿಕಾ ಖಾನ್‌ಗೆ ವೀಸಾ ನೀಡಿದ ಬಳಿಕ ದಿಲ್ಲಿಯಲ್ಲಿರುವ ಪಾಕಿಸ್ತಾನ್ ಹೈಕಮಿಶನ್ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ನೀಡಿದೆ. ‘‘ಪಾಕಿಸ್ತಾನವು 2019 ನವೆಂಬರ್‌ನಲ್ಲಿ ಆರಂಭಿಸಿರುವ ಐತಿಹಾಸಿಕ ವೀಸಾರಹಿತ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಜನರನ್ನು ಪರಸ್ಪರ ಹತ್ತಿರ ತರುತ್ತಿದೆ ಎನ್ನುವುದಕ್ಕೆ ಈ ಇಬ್ಬರು ಸಹೋದರರ ಕತೆಯೇ ಪ್ರಭಾವಶಾಲಿ ಉದಾಹರಣೆಯಾಗಿದೆ’’ ಎಂದು ಅದು ಹೇಳಿದೆ.
ಇಬ್ಬರು ಸಹೋದರರನ್ನು ಒಂದುಗೂಡಿಸಿರು ವುದಕ್ಕಾಗಿ ಸಿಕಾ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಿರುವ ವೀಡಿಯೊವೊಂದನ್ನೂ ಹೈಕಮಿಶನ್ ಟ್ವಿಟರ್‌ನಲ್ಲಿ ಹಾಕಿದೆ.
ಕೃಪೆ : thewire