ಅಖಿಲೇಶ್, ಶಿವಪಾಲ್ ವಿರುದ್ಧ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧಾರ

Update: 2022-02-01 16:58 GMT

ಲಕ್ನೊ: ಕರ್ಹಾಲ್ ಹಾಗೂ  ಜಸ್ವಂತ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಹಾಗೂ  ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಮಂಗಳವಾರ ಅಂತಿಮ ದಿನವಾಗಿತ್ತು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್  ನಾಯಕರಾದ ಸೋನಿಯಾ ಗಾಂಧಿ ಹಾಗೂ  ರಾಹುಲ್ ಗಾಂಧಿಯವರ ವಿರುದ್ಧ ರಾಯ್ ಬರೇಲಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಯಾರನ್ನೂ ಕಣಕ್ಕಿಳಿಸಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಿದರು.

ಕಾಂಗ್ರೆಸ್ ನ ಇಟಾವಾ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಖಾನ್ ಸಿಂಗ್ ಮಾತನಾಡಿ, ಸ್ಥಳೀಯ ಘಟಕವು ಜಸ್ವಂತ್ ನಗರ ಸ್ಥಾನಕ್ಕೆ ಆರು ಹೆಸರುಗಳ ಪಟ್ಟಿಯನ್ನು ಕಳುಹಿಸಿದೆ. ಆದರೆ ಕ್ಷೇತ್ರದ ಯಾವುದೇ ಹೆಸರನ್ನು ಪಕ್ಷದ ಹೈಕಮಾಂಡ್ ಅನುಮೋದಿಸಿಲ್ಲ ಎಂದರು.

ಕಾಂಗ್ರೆಸ್ ಪಕ್ಷವು ಈ ಹಿಂದೆ ಕರ್ಹಾಲ್ ವಿಧಾನಸಭಾ ಸ್ಥಾನಕ್ಕೆ ಜ್ಞಾನವತಿ ಯಾದವ್ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು.  ಆದರೆ ಅಖಿಲೇಶ್ ಯಾದವ್ ಅಲ್ಲಿ ನಾಮಪತ್ರ ಸಲ್ಲಿಸಿದ ನಂತರ ಪಕ್ಷವು ಅವರ ಉಮೇದುವಾರಿಕೆಯನ್ನು ಹಿಂಪಡೆಯಲು ನಿರ್ಧರಿಸಿತು ಎಂದು ಯುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರಧಾನ್ ಹೇಳಿದ್ದಾರೆ

 ಅಖಿಲೇಶ್ ಯಾದವ್ ಅವರು ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರ ಹಿಡಿತದಲ್ಲಿರುವ ಮೈನ್‌ಪುರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕರ್ಹಾಲ್‌ನಿಂದ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಶಿವಪಾಲ್ ಸಿಂಗ್ ಯಾದವ್ ಅವರು ಆರನೇ ಬಾರಿಗೆ ಜಸ್ವಂತ್ ನಗರ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.

ಏಳು ಹಂತದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಫೆಬ್ರವರಿ 20 ರಂದು ಈ ಎರಡೂ ಸ್ಥಾನಗಳಿಗೆ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News