ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯ : ಯು.ಟಿ ಖಾದರ್
ಮಂಗಳೂರು, ಫೆ.1: ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯವಾಗಿವೆ. ಆದುದರಿಂದ ಭಾಷೆಗಳ ಒಳಗಿನ ದ್ವೇಷ ಸಲ್ಲದು. ಗಡಿನಾಡಿನ ಭಾಗದಲ್ಲಿನ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಅಲ್ಲದೆ ಎಲ್ಲಾ ಪ್ರತಿಭೆಗಳನ್ನು ಗುರುತಿಸುವಂತಾದಾಗ ನಮ್ಮ ಭಾಷೆಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾ ಗುತ್ತದೆ ಎಂದು ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ, ಮಾಜಿ ಸಚಿವ, ಹಾಲಿ ಶಾಸಕ ಯು.ಟಿ ಖಾದರ್ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಸೋಮವಾರ ತಲಪಾಡಿ ಸಮೀಪದ ಉಚ್ಚಿಲ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಸಂಕೋಳಿಗೆ ಸಭಾಗೃಹದಲ್ಲಿ ನಡೆದ ಗಡಿನಾಡ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಎಂಇಟಿಎಂ ಅಧ್ಯಕ್ಷ ಇಂಜಿನಿಯರ್ ಕೆ.ಪಿ ಮಂಜುನಾಥ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಪುತ್ತೂರು ನಗರಸಭೆಯ ಆಯುಕ್ತ ಮಧು ಎಸ್.ಮನೋಹರ್, ಉದ್ಯಮಿ ಗೋ.ನಾ.ಸ್ವಾಮಿ, ರೋಟರಿ ಕ್ಲಬ್ ಮೊಡಂಕಾಪು ಘಟಕದ ಅಧ್ಯಕ್ಷ ಎಲಿಯಾಸ್ ಸಾಂಕ್ತೀಸ್, ಅರಣ್ಯ ಅಧಿಕಾರಿ ಸೋಮಶೇಖರ್ ಹಿಪ್ಪರಗಿ, ಗುರುಪ್ರಸಾದ್ ಕೋಟೆಕಾರ್ ಭಾಗವಹಿಸಿದ್ದರು.
ರಾಮನಾಥ ಸಾಂಸ್ಕೃತಿಕ ಭವನ ಸಮೂಹದ ನಾಡಗೀತೆಯೊಂದಿಗೆ ಉತ್ಸವ ಆರಂಭಗೊಂಡಿತು. ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಾಡು ನುಡಿಯ ಕುರಿತು ಕವನ ವಾಚನ, ರಾಮನಾಥ ಸಾಂಸ್ಕೃತಿಕ ಭವನ ಸಮೂಹ ಕಾಸರಗೋಡು ಇವರಿಂದ ಸಮೂಹ ಗಾನ, ಸರೋಜ ರಾವ್ ಮತ್ತು ತಂಡ ಮಂಗಳೂರು ಇವರಿಂದ ಜಾನಪದ ನೃತ್ಯ, ಹರಿದಾಸ ಜಯಾನಂದ ಕುಮಾರ್ ಸಂಯೋಜನೆಯಲ್ಲಿ ಜಯ ಜನನಿ ನಿನಾದ ಕಾಸರಗೋಡು ತಂಡದಿಂದ ಕವಿಗಾನ ಕನ್ನಡಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಪತ್ರಕರ್ತ ಆರೀಫ್ ಕಲ್ಕಟ್ಟ ವಂದಿಸಿದರು. ಅರ್ಚನಾ ಬಂಗೇರ ಕುಂಪಲ ಮತ್ತು ಕೀರ್ತನ ಸನಿಲ್ ಕಾರ್ಯಕ್ರಮ ನಿರೂಪಿಸಿದರು.