×
Ad

ಉಡುಪಿ: ಫೆ.3ರಿಂದ ಆರ್‌ಟಿಓ ಕಚೇರಿಯಲ್ಲಿ ಸಂಪರ್ಕರಹಿತ ಸೇವೆಗಳು ಜಾರಿ

Update: 2022-02-02 20:10 IST

ಉಡುಪಿ, ಫೆ.2: ಇನ್ನು ಮುಂದೆ ಸಾರ್ವಜನಿಕರು ಕಲಿಕಾ ಚಾಲನಾ ಅನುಜ್ಞಾ ಪತ್ರ(ಲರ್ನಿಂಗ್ ಲೈಸನ್ಸ್), ಲೈಸನ್ಸ್ ನವೀಕರಣಕ್ಕಾಗಿ ಆರ್‌ಟಿಓ ಕಚೇರಿಗೆ ಅಲೆ ದಾಡ ಬೇಕಾಗಿಲ್ಲ. ಎಲ್ಲವನ್ನು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿಯೇ ಪಡೆಯ ಬಹುದಾಗಿದೆ. ಅದರಂತೆ ಫೆ.3ರಿಂದ ಉಡುಪಿ ಆರ್‌ಟಿಓ ಕಚೇರಿಯಲ್ಲಿ ಸಂಪರ್ಕ ರಹಿತ ಮತ್ತು ಜನಸ್ನೇಹಿ ಸೇವೆಗಳು ಜಾರಿಯಾಗಲಿವೆ.

ಈ ಬಗ್ಗೆ ಮಾತನಾಡಿದ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್, ಸಾರಿಗೆ ಇಲಾಖೆಯ ಸಾರಥಿ ಕೈ ಸಂಬಪಂಧಿತ ಐದು ಸೇವೆಗಳನ್ನು ಸಂಪರ್ಕರಹಿಕತವಾಗಿ www.parivahan.gov.in ರಲ್ಲಿ ಅನುಷ್ಠಾನ ಗೊಳಿಸಲಾಗಿದೆ. ಆದುದರಿಂದ ಸಾರ್ವಜನಿಕರು ನಾಳೆಯಿಂದ ಆರ್‌ಟಿಓ ಕಚೇರಿಗೆ ಭೇಟಿ ನೀಡದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸಂಬಂಧ ದಾಖಲೆ ಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಿ ಸೇವೆ ಗಳನ್ನು ಪಡೆಯಬಹುದು ಎಂದರು.

ಕಲಿಕಾ ಚಾಲನಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರ ನವೀಕರಣ, ನಕಲು ಚಾಲನಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ ಮತ್ತು ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆಯ ಸೇವೆ ಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದೆಂದು ಅವರು ಮಾಹಿತಿ ನೀಡಿದರು.

ಹೊಸ ಪದ್ಧತಿಯಲ್ಲಿನ ಲೋಪ: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಈ ಆನ್‌ಲೈನ್ ಸೇವೆಯಲ್ಲಿ ಹಲವು ಲೋಪಗಳಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಕಿವುಡರು, ಕುರುಡರು, ಜೈಲಿನಲ್ಲಿರುವವರು, ಹೊರದೇಶ, ರಾಜ್ಯ, ಜಿಲ್ಲೆಯಲ್ಲಿ ಇರುವ ಯಾರು ಬೇಕಾದರೂ ಇನ್ನು ತಮ್ಮ ಎಲ್‌ಎಲ್‌ಆರ್, ಲೈಸನ್ಸ್ ನವೀಕರಣ ಮಾಡಬಹುದಾಗಿದೆ.

ಈ ಹಿಂದೆ ಕಿವುಡರು, ಕುರುಡರು, ವಿಕಲಚೇತನರು ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿರುವುದರಿಂದ ಅವರ ಲೋಪಗಳನ್ನು ಅಧಿಕಾರಿಗಳು ಗುರುತಿ ಸಲು ಸಾಧ್ಯವಾಗುತ್ತಿತ್ತು. ಅವರಿಗೆ ಸಾಮಾನ್ಯ ಲೈಸೆನ್ಸ್ ಬದಲು ವಿಶೇಷ ಲೈಸನ್ಸ್ ಗಳನ್ನು ಮಂಜೂರು ಮಾಡಲಾಗುತ್ತಿತ್ತು. ವಿಶೇಷ ಲೈಸನ್ಸ್ ಪಡೆದವರು ತಮಗೆ ಸೂಚಿಸಿದ ವಾಹನಗಳನ್ನು ಮಾತ್ರ ಚಲಾಯಿಸಲು ಅವಕಾಶ ಇರುತ್ತದೆ. ಆದರೆ ಈ ಹೊಸ ಪದ್ಧತಿಯಲ್ಲಿ ಕಿವುಡತನ ಹಾಗೂ ಕುರುಡತನದ ಯಾವುದೇ ಅಂಗ ವೈಕಲ್ಯವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಟಿಓ, ಈ ಸೇವೆಯಿಂದ ಯಾರು ಎಲ್ಲಿ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಹಾಕಿದರೂ ನಮಗೆ ಗೊತ್ತಾಗುವುದಿಲ್ಲ. ಅಂಗ ವಿಕಲರು ಆನ್‌ಲೈನ್ ಮೂಲಕ ಲೈಸನ್ಸ್ ಪಡೆಯುವ ಸಾಧ್ಯತೆ ಇರುತ್ತದೆ. ಇದಕ್ಕೆ ಯಾವುದೇ ಪ್ರಮಾಣ ಪತ್ರ ಬೇಕಾಗಿಲ್ಲ. ಇದು ಸ್ವಲ್ಪಮಟ್ಟಿನ ತೊಡಕು ಆಗುವ ಸಾಧ್ಯತೆ ಇದೆ. ಆದುರದಿಂದ ಈ ಸೇವೆಯನ್ನು ಇನ್ನಷ್ಟು ಪರಿಷ್ಕರಿಸುವ ಅಗತ್ಯ ಇದೆ ಎಂದು ತಿಳಿಸಿದರು.

ಕುಂದಾಪುರ ಆರ್‌ಟಿಓ ಕಚೇರಿಗೆ ಪ್ರಸ್ತಾಪ

ಕುಂದಾಪುರದಲ್ಲಿ ಪ್ರತ್ಯೇಕ ಆರ್‌ಟಿಓ ಕಚೇರಿ ಸ್ಥಾಪಿಸುವ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ರಾಜ್ಯ ಸರಕಾರದಿಂದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಆರ್‌ಟಿಓ ಜೆ.ಪಿ. ಗಂಗಾಧರ್ ತಿಳಿಸಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಕಳೆದ ಡಿಸೆಂಬರ್‌ವರೆಗೆ ಒಟ್ಟು 1,29,900 ವಾಹನಗಳು ನೋಂದಾವಣೆಯಾಗಿದ್ದು, ವಾರ್ಷಿಕ ಸರಾಸರಿ 5413 ವಾಹನಗಳು ನೋಂದಾವಣೆಯಾಗುತ್ತಿದೆ. ಆದುದರಿಂದ ಪ್ರತ್ಯೇಕ ಆರ್‌ಟಿಓ ಕಚೇರಿ ಸ್ಥಾಪನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

811 ಇಲೆಕ್ಟ್ರೀಕ್ ವಾಹನ ನೋಂದಾಣಿ

ಜನವರಿ ತಿಂಗಳವರೆಗೆ ಉಡುಪಿಯಲ್ಲಿ ಒಟ್ಟು 777 ಇಲೆಕ್ಟ್ರೀಕ್ ದ್ವಿಚಕ್ರ ವಾಹನಗಳು, 33 ಇಲೆಕ್ಟ್ರಿಕ್ ಕಾರುಗಳು ಹಾಗೂ ಒಂದು ತ್ರಿಚಕ್ರ ವಾಹನ ನೊಂದಾವಣೆಯಾಗಿದೆ ಎಂದು ಆರ್‌ಟಿಓ ಜೆ.ಪಿ. ಗಂಗಾಧರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಕುಂದಾಪುರ, ಪ್ರತಿ ಗುರುವಾರ ಕಾರ್ಕಳ, ತಿಂಗಳ ಮೂರನೇ ಶನಿವಾರ ಪಡುಬಿದ್ರಿ, ಮೊದಲ ಶನಿವಾರ ಹೆಬ್ರಿಯಲ್ಲಿ ಆರ್‌ಟಿಓ ಶಿಬಿರಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News