ಕುಂದಾಪುರ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಗೇಟಿನಲ್ಲಿಯೇ ತಡೆ
ಕುಂದಾಪುರ, ಫೆ.3: ಹಿಜಾಬ್ ಧರಿಸಿ ಆಗಮಿಸಿದ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗುರುವಾರ ಬೆಳಗ್ಗೆ ಕಾಲೇಜಿನ ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದರು. ಇದರಿಂದ ವಿದ್ಯಾರ್ಥಿನಿಯರು ತರಗತಿಯಿಂದ ವಂಚಿತರಾಗಿ ಆವರಣದ ಹೊರಗೆ ಕುಳಿತು ಸಂಜೆ ವೇಳೆ ಮನೆಗೆ ವಾಪಾಸ್ಸಾದರು.
ಹಿಜಾಬ್‌ಗೆ ಪ್ರತಿಯಾಗಿ ಕೆಲವು ವಿದ್ಯಾರ್ಥಿಗಳು ಬುಧವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಜ್ಯೂನಿ ಯರ್ ಕಾಲೇಜಿನಲ್ಲಿ ವಿವಾದ ಸೃಷ್ಠಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವ ದಲ್ಲಿ ಕರೆದ ಸಭೆಯಲ್ಲಿ ವಸ್ತ್ರ ಸಂಹಿತೆ ಪಾಲಿಸುವಂತೆ ಮತ್ತು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರ್ಬಂಧ ವಿಧಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಕಾಲೇಜಿನಲ್ಲಿ ಒಟ್ಟು 29 ಮುಸ್ಲಿಮ್ ವಿದ್ಯಾರ್ಥಿನಿಯರಿದ್ದು, ಅದರಲ್ಲಿ ಒಬ್ಬಳು ವಿಜ್ಞಾನ ವಿದ್ಯಾರ್ಥಿನಿ ಸ್ಕಾರ್ಫ್ ಹಾಕದೆ ತರಗತಿಗೆ ಹಾಜರಾಗಿದ್ದರೆ, ಐದು ಮಂದಿ ತರಗತಿಗೆ ಕೆಲವು ದಿನಗಳಿಂದ ಗೈರುಹಾಜರಾಗಿದ್ದರು. ಇಂದು ಬೆಳಗ್ಗೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ಉಳಿದ 23 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಗೇಟಿನಲ್ಲಿಯೇ ತಡೆದು ಆವರಣದೊಳಗೆ ಪ್ರವೇಶಿಸಲು ತಡೆಯೊಡ್ಡಿದರು. ತಮಗೆ ಪ್ರವೇಶ ಕಲ್ಪಿಸುವಂತೆ ಪ್ರಾಂಶುಪಾಲರಲ್ಲಿ ಪರಿಪರಿಯಾಗಿ ಮನವಿ ಮಾಡಿದ ವಿದ್ಯಾರ್ಥಿಗಳು ಬಾವುಕರಾಗಿ ಕಣ್ಣೀರು ಹಾಕಿದರು.‘ನಮ್ಮನ್ನು ಮನುಷ್ಯರಂತೆ ನೋಡಿ’ ವಿದ್ಯಾರ್ಥಿನಿಯರನ್ನು ಹೊರಗಡೆ ನಿಲ್ಲಿಸಿ ಸ್ವತಃ ತಾವೇ ಗೇಟು ಹಾಕಲು ಮುಂದಾದ ಪ್ರಾಂಶುಪಾಲರಲ್ಲಿ ವಿದ್ಯಾರ್ಥಿನಿಯರು ಮಾತಿಗೆ ಇಳಿದರು.
‘ಯಾವುದೇ ಕಾರಣಕ್ಕೂ ಗೇಟು ಹಾಕಬೇಡಿ. ನಾವು ಇದೇ ಕಾಲೇಜಿನ ವಿದ್ಯಾರ್ಥಿನಿಯರು. ನಮ್ಮನ್ನು ಮನುಷ್ಯರಂತೆ ನೋಡಿ. ಯಾಕೆ ನಮ್ಮನ್ನು ರಸ್ತೆ ಯಲ್ಲಿ ನಿಲ್ಲಿಸಿ ಗೇಟು ಹಾಕಿ ಈ ರೀತಿ ಹಿಂಸೆ ನೀಡುತ್ತಿದ್ದೀರಿ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ವಿದ್ಯೆಯೂ ಬೇಕು, ಹಿಜಾಬ್ ಕೂಡ ಬೇಕು. ನಮಗೆ ಕಾಲೇಜಿಗೆ ಬರಲು ಅನುಮತಿ ನೀಡಿ. ವಸ್ತ್ರ ಸಂಹಿತೆ ಪಾಲಿಸುವ ಕುರಿತ ಸರಕಾರದ ಆದೇಶ ದಲ್ಲಿ ಎಲ್ಲೂ ನಮ್ಮ ಕಾಲೇಜಿನ ಹೆಸರು ಉಲ್ಲೇಖಿಸಿಲ್ಲ.
ನಾವು ಬುರ್ಖಾ ಹಾಕಿ ಕೊಂಡು ತರಗತಿಗೆ ಬರುವುದಿಲ್ಲ. ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡೆ ಬರುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರೊಂದಿಗೆ ಮನವಿ ಮಾಡಿದರು.
‘ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ನಾನು ಪಾಲಿಸಬೇಕಾಗಿದೆ. ವಸ್ತ್ರ ಸಂಹಿತೆ ಪ್ರಕಾರ ಹಿಜಾಬ್ ತೆಗೆದು ಬಂದರೆ ನಾವು ಒಳಗೆ ಬಿಡುತ್ತೇವೆ’ ಎಂದು ಪ್ರಾಂಶುಪಾಲರು ಮಕ್ಕಳಿಗೆ ತಿಳಿಸಿದರು. ಕೊನೆಗೂ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆವರಣದೊಳಗೆ ಅವಕಾಶ ನೀಡದೆ ಪ್ರಾಂಶುಪಾಲರು ಗೇಟು ಹಾಕಿ ನಡೆದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಕ್ಕಳು ಅವರಲ್ಲಿಯೂ ಹಿಜಾಬ್‌ಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಅವರು ಕೂಡ ಮಕ್ಕಳ ಬೇಡಿಕೆಯನ್ನು ನಿರಾಕರಿಸಿದರು. ಈ ವಿವಾದದ ಹಿನ್ನೆಲೆಯಲ್ಲಿ ಕಾಲೇಜಿನ ಆವರಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಸಂಜೆವರೆಗೂ ಗೇಟಿನ ಹೊರಗಡೆ!
ಕಾಲೇಜಿನ ಆವರಣದೊಳಗೆ ಪ್ರವೇಶ ಕಲ್ಪಿಸದ ಹಿನ್ನೆಲೆಯಲ್ಲಿ ಸುಮಾರು 23 ವಿದ್ಯಾರ್ಥಿನಿಯರು ಬೆಳಗ್ಗೆಯಿಂದ ಸಂಜೆಯವರೆಗೂ ಗೇಟಿನ ಹೊರಗಡೆ ನಿಂತು ಮನೆಗೆ ತೆರಳಿದರು. ಬಿಸಿಲಿನಲ್ಲಿಯೇ ರಸ್ತೆ ಬದಿಯಲ್ಲಿ ನಿಂತ ವಿದ್ಯಾರ್ಥಿನಿಯರು ತಾವು ತಂದಿದ್ದ ಊಟವನ್ನು ಅಲ್ಲೇ ಕುಳಿತು ಮಾಡುತ್ತಿರುವುದು ಕಂಡುಬಂತು. ಈ ವೇಳೆ ಅವರ ಪೋಷಕರು ಕೂಡ ಸ್ಥಳಕ್ಕೆ ಬಂದಿದ್ದರು. ಸಂಜೆಯವರೆಗೂ ಪ್ರವೇಶ ಕಲ್ಪಿಸದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿನಿಯರು ತರಗತಿ ಬಿಡುವ ವೇಳೆ ಮನೆಗೆ ವಾಪಾಸ್ಸು ಹೋದರು.
ಭಂಡಾರ್‌ಕರ್ಸ್ ಕಾಲೇಜಿನಲ್ಲೂ ಕೇಸರಿ ಶಾಲು!
ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿಯೂ ಇಂದು ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ ಘಟನೆ ನಡೆದಿದೆ. ಖಾಸಗಿ ಕಾಲೇಜು ಆಗಿರುವ ಇಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಲು ಅವಕಾಶ ನೀಡಲಾಗಿತ್ತು. ಇದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಜೈಶ್ರೀರಾಮ್ ಘೋಷಣೆಗಳನ್ನು ಕೂಗುತ್ತ ಕಾಲೇಜಿಗೆ ಆಗಮಿಸಿದರು. ಆದರೆ ಕಾಲೇಜು ಪ್ರಾಂಶುಪಾಲರು ಕೇಸರಿ ಶಾಲು ಹಾಗೂ ಮುಸ್ಲಿಮ್ ವಿದ್ಯಾರ್ಥಿನಿಯರಿಂದ ಶಿರವಸ್ತ್ರ ತೆಗೆಸಿ ಕಾಲೇಜಿಗೆ ಪ್ರವೇಶ ಕಲ್ಪಿಸಿದರು ಎಂದು ತಿಳಿದುಬಂದಿದೆ.
''ಕೇಸರಿ ಶಾಲು ಧರಿಸಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿರುವುದರ ಹಿಂದೆ ಷಡ್ಯಂತರ ನಡೆಯುತ್ತಿದೆ. ಹಿಜಾಬ್ ಕುರಿತು ಎಲ್ಲ ಕಡೆಗಳಲ್ಲಿಯೂ ಅನಗತ್ಯವಾಗಿ ವಿವಾದ ಸೃಷ್ಠಿಸಲಾಗುತ್ತಿದೆ. ಈವರೆಗೆ ಹಿಜಾಬ್ ಹಾಕಿಕೊಂಡು ಬರುತ್ತಿರುವುದಕ್ಕೆ ಎಲ್ಲೂ ವಿರೋಧ ಮಾಡದವರು ಈಗ ಯಾಕೆ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಾಗ ಈ ರೀತಿ ಷಡ್ಯಂತರ ನಡೆಸುತ್ತಿದ್ದಾರೆ. ಮಕ್ಕಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ''.
-ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷರು, ಕಾಂಗ್ರೆಸ್ ಉಡುಪಿ ಜಿಲ್ಲೆ
''ಕಾಲೇಜಿನ ಆರಂಭದಿಂದಲೂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ತರಗತಿಗೆ ಬರುತ್ತಿದ್ದರು. ಅದಕ್ಕೆ ಕಾಲೇಜಿನವರು ಅವಕಾಶ ನೀಡಬೇಕು. ಮುಂದೆ ಸರಕಾರ ಯಾವ ಆದೇಶ ಹೊರಡಿಸುತ್ತದೆಯೋ ಅದಕ್ಕೆ ನಾವೆಲ್ಲ ಬದ್ಧರಾಗಿ ಬೆಂಬಲಿಸುತ್ತೇವೆ. ಈ ಸಂಬಂಧ ಶಾಸಕರು, ಜಿಲ್ಲಾಧಿಕಾರಿ, ಎಸಿ, ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿಯೂ ಮನವಿ ಮಾಡಲಾಗುವುದು''
-ಹುಸೇನ್ ಹೈಕಾಡಿ, ಸಂಘಟನಾ ಕಾರ್ಯದರ್ಶಿ, ನಮ್ಮ ನಾಡ ಒಕ್ಕೂಟ.
''ಬೆಳಗ್ಗೆ ಕಾಲೇಜಿಗೆ ಹಿಜಾಬ್ ಹಾಕಿಕೊಂಡ ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದ್ದೇವೆ. ಆದರೆ ಅವರು ಹಿಜಾಬ್ ತೆಗೆದು ಬರಲು ಒಪ್ಪಲಿಲ್ಲ. ಆದುದರಿಂದ ಸರಕಾರದ ಸುತ್ತೋಲೆ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯದಂತೆ ವಿದ್ಯಾರ್ಥಿಗಳನ್ನು ಆವರಣದೊಳಗೆ ಬಿಡಲಿಲ್ಲ. ಅದೇ ರೀತಿ ಮಕ್ಕಳು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು. ಅದರಂತೆ ಡಿಡಿಪಿಯು ಅವರನ್ನು ಸ್ಥಳಕ್ಕೆ ಕರೆಸಿ ಮನವೊಲಿಸಲಾಯಿತು. ಅದಕ್ಕೂ ಮಕ್ಕಳು ಒಪ್ಪಲಿಲ್ಲ''
-ರಾಮಕೃಷ್ಣ ಬಿ.ಜಿ., ಪ್ರಾಂಶುಪಾಲರು
''ಈ ನೆಲದ ಕಾನೂನು, ನಿಯಮಗಳನ್ನು ಗೌರವಿಸಬೇಕಾಗಿರುವುದು ಎಲ್ಲ ಜವಾಬ್ದಾರಿಯಾಗಿದೆ. ಇಲ್ಲದೆ ಇರುವ ವಿವಾದವನ್ನು ಸೃಷ್ಠಿ ಮಾಡುವುದು ಹಾಗೂ ಅಶಾಂತಿ ವಾತಾವರಣ ನಿರ್ಮಾಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಆದುದರಿಂದ ಸರಕಾರದ ಆದೇಶದಂತೆ ಸರಕಾರಿ ಕಾಲೇಜಿನಲ್ಲಿರುವ ವಸ್ತ್ರ ಸಂಹಿತೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ''
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಸಮಾಜ ಕಲ್ಯಾಣ ಇಲಾಖೆ
''ಹಿಜಾಬ್ ಹಾಕುವುದು ಸಂವಿಧಾನ ನಮಗೆ ನೀಡಿರುವ ಹಕ್ಕು. ಹಾಗಾಗಿ ನಾವು ಹಿಜಾಬ್ ಹಾಕಿಕೊಂಡೇ ಶಿಕ್ಷಣ ಪಡೆಯುತ್ತೇವೆ. ಈ ಕಾಲೇಜಿನಲ್ಲಿ ಹಲವು ವರ್ಷಗಳಿಂದ ನಾವು ಹಿಜಾಬ್ ಹಾಕಿಕೊಂಡೆ ಕಲಿಯುತ್ತಿದ್ದೇವೆ. ಇವತ್ತು ಹೊಸದಾಗಿ ಹಿಜಾಬ್ ಹಾಕಿಕೊಂಡು ಬಂದಿಲ್ಲ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುತ್ತೇವೆ. ನಾಳೆ ಕೂಡ ಕಾಲೇಜಿಗೆ ಹೋಗುತ್ತೇವೆ. ಒಳಗೆ ಬಿಡದಿದ್ದರೆ ಗೇಟಿನ ಹೊರಗಡೆ ಕುಳಿತೇ ಓದು ಬರಹ ಮಾಡುತ್ತೇವೆ''
-ವಿದ್ಯಾರ್ಥಿನಿಯರು