ಹಿಜಾಬ್ ವಿವಾದ ನಿಲ್ಲಿಸಲು ಹಿಂದುತ್ವ ಸಂಘಟನೆಗೆ ಐದು ನಿಮಿಷದ ಕೆಲಸ: ಯಶ್ಪಾಲ್ ಸುವರ್ಣ
Update: 2022-02-03 20:53 IST
ಉಡುಪಿ, ಫೆ.3: ಕಳೆದ ಒಂದು ತಿಂಗಳನಿಂದ ಉಡುಪಿ ಸರಕಾರಿ ಬಾಲಕಿ ಯರ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಾಗಿಲ್ಲ. ಇದು ಹಿಂದುತ್ವ ಸಂಘಟನೆಗೆ ಐದು ನಿಮಿಷದ ಕೆಲಸ ಅಷ್ಟೇ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗೊಂದಲ ನಿಲ್ಲಿಸಲು ನಮ್ಮ ಸಂಘಟನೆಗೆ ಐದು ನಿಮಿಷದ ಕೆಲಸ. ಆದರೆ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯನಾಗಿ ಉಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಆರು ಮುಸ್ಲಿಂ ವಿದ್ಯಾರ್ಥಿನಿ ಯರಿಂದ 900 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ನಡೆಯುತ್ತಿದೆ. ಇದನ್ನು ನಿಲ್ಲಿಸುವ ಶಕ್ತಿ ಸಂಘಟನೆಗೆ ಇದೆ. ಸೂಕ್ತ ಸಮಯದಲ್ಲಿ ಸರಿಯಾದ ಉತ್ತರ ಕೊಡಲು ನಮಗೆ ತಿಳಿದಿದೆ ಎಂದು ಅವರು ವಿವಾದಾಸ್ಪದವಾಗಿ ಹೇಳಿಕೆ ನೀಡಿದ್ದಾರೆ.